‘ಪದ’ಗಳ ವಿಶ್ಲೇಷಣೆಯ ಬದಲು ಸ್ವಸ್ಥ ಸಮಾಜ ಕಟ್ಟುವ ಅಗತ್ಯವಿದೆ: ಅಬ್ದುಸ್ಸಲಾಂ ಪುತ್ತಿಗೆ

Update: 2019-11-22 16:31 GMT

ಮಂಗಳೂರು, ನ. 22: ಜಾತ್ಯತೀತ, ಪ್ರಜಾಪ್ರಭುತ್ವ, ಸಮಾಜವಾದ, ಬಂಡವಾಳ ಶಾಹಿ ಇತ್ಯಾದಿ ‘ಪದ’ಗಳ ವಿಶ್ಲೇಷಣೆಯಲ್ಲೇ ಕಾಲ ಕಳೆಯುವ ಬದಲು ಮನುಷ್ಯ ಸಂಬಂಧವನ್ನು ವೃದ್ಧಿಸುವ ಸ್ವಸ್ಥ ಸಮಾಜವನ್ನು ಕಟ್ಟುವ ಅಗತ್ಯವಿದೆ ಎಂದು ವಾರ್ತಾಭಾರತಿ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಹೇಳಿದರು.

ಮುಸ್ಲಿಮ್ ಲೇಖಕರ ಸಂಘವು ‘ಜಾತ್ಯತೀತ ಭಾರತದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ನಗರದ ಮಸ್ಜಿದುನ್ನೂರ್ ಬಳಿಯ ಐಎಂಎ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ಗೋಷ್ಠಿಯಲ್ಲಿ ಅವರು ದಿಕ್ಸೂಚಿ ಭಾಷಣಗೈದರು.

ಭಾರತ ಜಾತ್ಯತೀತ ರಾಷ್ಟ್ರ ಎಂದು ಉಲ್ಲೇಖಿಸಲಾಗುತ್ತಿದೆ. ವಾಸ್ತವದಲ್ಲಿ ಭಾರತ ಎಂದೂ ಕೂಡಾ ಜಾತ್ಯತೀತ ರಾಷ್ಟ್ರವಾಗಿರಲಿಲ್ಲ. ಬದಲಾಗಿ ಭಾರತವು ಜಾತಿ ಪ್ರಧಾನ ರಾಷ್ಟ್ರವಾಗಿತ್ತು. ಜಾತ್ಯತೀತ, ಪ್ರಜಾಪ್ರಭುತ್ವ, ಸಮಾಜವಾದ, ಬಂಡವಾಳಶಾಹಿ ಇತ್ಯಾದಿ ಪದಗಳ ಬಗ್ಗೆ ಹಿಂದೆ ಬಿದ್ದು, ಚರ್ಚೆ ನಡೆಸಿ, ಕಾಲಹರಣ ಮಾಡುವುದರಿಂದ ಸಿಗುವ ಫಲಿತಾಂಶವು ‘ಗೊಂದಲ’ಮಯವಾಗಿರುತ್ತದೆ. ಹಾಗಾಗಿ ವಿಭಿನ್ನ ಸಂಸ್ಕೃತಿಯ, ಭಾಷೆಗಳ, ಧರ್ಮಗಳ ಜನರು ಪರಸ್ಪರ ಸಾಮರಸ್ಯ, ಪ್ರೀತಿ ವಿಶ್ವಾಸದಿಂದ ಬದುಕುವ ವಾತಾವರಣ ರೂಪಿಸುವುದು ಅಗತ್ಯವಿದೆ ಎಂದು ಅಬ್ದುಸ್ಸಲಾಂ ಪುತ್ತಿಗೆ ನುಡಿದರು.

ಪ್ರಜೆಗಳಿಗೆ ಇಂದು ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸ್ವಾತಂತ್ರವಿಲ್ಲ. ಆಯ್ಕೆಯ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಯಾಕೆಂದರೆ ಮೂರ್ಖರನ್ನು, ಭ್ರಷ್ಟರನ್ನು ಆರಿಸಿ ಕಳುಹಿಸುವ ಅನಿವಾರ್ಯತೆಗೆ ಪ್ರಜೆಗಳು ಸಿಲುಕಿದ್ದಾರೆ. ಯಾವ ಕಾನೂನು ಕಟ್ಟಳೆಗಳಿಂದಲೂ ಸಮಾಜದ ಬದಲಾವಣೆ ಸಾಧ್ಯವಿಲ್ಲ. ಹಾಗಾಗಿ ವ್ಯಕ್ತಿಗಳನ್ನು ವ್ಯಕ್ತಿಗತವಾಗಿ ತಿದ್ದಿ ತೀಡುವ ಶಕ್ತಿಯನ್ನು ಬಳಸಿಕೊಂಡು ಸುಂದರ ಸಮಾಜ ಕಟ್ಟಲು ಸಾಧ್ಯವಿದೆ ಎಂಬ ವಾಸ್ತವತೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕಿದೆ ಎಂದು ಅಬ್ದುಸ್ಸಲಾಂ ಪುತ್ತಿಗೆ ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News