ತುಳು ಯಕ್ಷಗಾನ ಉಭಯ ಅಕಾಡಮಿಗಳ ಜವಾಬ್ದಾರಿ: ಕತ್ತಲ್ಸಾರ್

Update: 2019-11-23 15:31 GMT

ಮಂಗಳೂರು, ನ.23: ತುಳು ಯಕ್ಷಗಾನದ ವಿಚಾರದಲ್ಲಿ ತುಳು ಅಕಾಡಮಿಯು ಆರಂಭದಿಂದಲೂ ತುಂಬಾ ಕಾಳಜಿಯಿಂದ ಕೆಲಸ ಮಾಡಿದೆ. ಆದರೆ ಯಕ್ಷಗಾನಕ್ಕೆ ಬೇರೆಯೇ ಒಂದು ಅಕಾಡಮಿ ಇರುವುದರಿಂದ ಅಲ್ಲಿಯೂ ಅದಕ್ಕೆ ಮಾನ್ಯತೆ ದೊರೆಯಬೇಕು. ಯಕ್ಷಗಾನಕ್ಕೆ ಸಂಬಂಧಿಸಿದ ಪ್ರಶಸ್ತಿ, ಗ್ರಂಥ ಪ್ರಕಟನೆ ಇತ್ಯಾದಿಗಳಲ್ಲಿ ತುಳು ಯಕ್ಷಗಾನಕ್ಕೂ ನ್ಯಾಯ ಸಿಗಬೇಕು. ಇದು ಉಭಯ ಅಕಾಡಮಿಗಳ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದ್ದಾರೆ.

ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಮಂಗಳೂರು ವಿ.ವಿ. ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ 7ನೇ ವರ್ಷದ ಕನ್ನಡ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ಆರನೇ ದಿನ ಯಕ್ಷಗಾನದ ಪ್ರಸಿದ್ಧ ಹವ್ಯಾಸಿ ಕಲಾವಿದ, ದೈವಾರಾಧನೆ ಹಾಗೂ ಕೃಷಿ ಕ್ಷೇತ್ರದ ಸಾಧಕ ದಿ.ನುಳಿಯಾಲು ಕಿಟ್ಟಣ್ಣ ಶೆಟ್ಟಿ ಅವರ ಸಂಸ್ಮರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉದ್ಯಮಿ ರಾಮಣ್ಣ ಶೆಟ್ಟಿ ಸಂಸ್ಮರಣಾ ಜ್ಯೋತಿ ಬೆಳಗಿದರು. ಮಾತಾ ಬಿಲ್ಡರ್ಸ್ ಅ್ಯಂಡ್ ಡೆವಲಪಸ್‌ನ ಆಡಳಿತ ನಿರ್ದೇಶಕ ಎನ್. ಸಂತೋಷ್ ಕುಮಾರ್ ಶೆಟ್ಟಿ ನುಡಿನಮನ ಸಲ್ಲಿಸಿದರು.

ಅತಿಥಿಯಾಗಿ ಕರ್ನಾಟಕ ಯಕ್ಷಗಾನ ಅಕಾಡಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ, ತುಳು ಅಕಾಡಮಿಯ ಸದಸ್ಯ ಲೀಲಾಕ್ಷ ಬಿ.ಕರ್ಕೇರ ಹಾಗೂ ಸಿಂಡಿಕೇಟ್ ಬ್ಯಾಂಕ್‌ನ ಪ್ರಾದೇಶಿಕ ಶಾಖಾಧಿಕಾರಿ ಅಮೈ ಮಾಧವ ರೈ ಶುಭ ಹಾರೈಸಿದರು. ಅಶೋಕ ಮಾಡ ಕುದ್ರಾಡಿಗುತ್ತು, ಎಂ.ಸುಂದರ ಶೆಟ್ಟಿ ಬೆಟ್ಟಂಪಾಡಿ, ತೋನ್ಸೆ ಪುಷ್ಕಳಕುಮಾರ್, ಕರುಣಾಕರ ಶೆಟ್ಟಿ ಪಣಿಯೂರು, ಸುಧಾಕರ ರಾವ್ ಪೇಜಾವರ, ಉಮೇಶಾಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಅಜ್ರಿ ಉಪಸ್ಥಿತರಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಲಕ್ಷ್ಮಿನಾರಾಯಣ ರೈ ಹರೇಕಳ ವಂದಿಸಿದರು. ಕೋಶಾಧಿಕಾರಿ ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News