ಮುಡಿಪು: 'ಸೂರಜ್ ಕಲಾಸಿರಿ-2019' ಉದ್ಘಾಟನೆ
ಕೊಣಾಜೆ: ನಾವು ಪಾಶ್ಚಾತ್ಯ ಸಂಸ್ಕೃತಿಗೆ ಹೆಚ್ಚು ಅವಲಂಬಿತರಾಗದೆ ಭಾರತೀಯ ಸಂಸ್ಕೃತಿಯನ್ನು ಗೌರವಿಸಿ ಮುನ್ನಡೆಸುವ ಜವಾಬ್ದಾರಿ ನಮ್ಮದಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ಹೇಳಿದರು.
ಮುಡಿಪಿನ ಸೂರಜ್ ಸಮೂಹ ವಿದ್ಯಾಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ "ಸೂರಜ್ ಕಲಾಸಿರಿ" -2019 ನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ಮೊಬೈಲ್ ಉಪಯೋಗಿಸುವುದು ತಪ್ಪಲ್ಲ, ಆದರೆ ಮೊಬೈಲ್ ಉಪಯೋಗದ ಮೇಲೆ ಸರಿಯಾದ ನಿಯಂತ್ರಣ ಇರಬೇಕು. ಹೇಗೆಂದರೆ ಔಷಧಿ ಅತಿಯಾಗಿ ತೆಗೆದುಕೊಂಡರೆ ಅದು ವಿಷವಾಗುವುದು, ವಿಷ ಮಿತವಾಗಿ ತೆಗೆದುಕೊಂಡರೆ ಅದು ಔಷಧಿಯಾಗುತ್ತದೆ. ಹಾಗಾಗಿ ಸಂಸ್ಕಾರ ಸಂಸ್ಕೃತಿ ಉಳಿಸುವ ಕಾರ್ಯದಲ್ಲಿ ಸದಾ ಪಾಲ್ಗೊಳ್ಳುತ್ತಾ ಬದುಕಿನುದ್ದಕ್ಕೂ ಜಾಗೃತಿಯಿಂದ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ, ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಚರ್ಚ್ ಧರ್ಮಗುರು ರೆ.ಫಾ.ಡಾ. ಜೆ.ಬಿ. ಸಲ್ದಾನ್ಹ, ಮಂಗಳೂರಿನ ಅರವಿಂದ್ ಮೋಟಾರ್ಸ್ ಆಡಳಿತ ನಿರ್ದೇಶಕ ಆರೂರು ಕಿಶೋರ್ ರಾವ್, ಎಸಿಪಿ ಕೋದಂಡರಾಮ, ಕೊಂಕಣಿ ಅಕಾಡೆಮಿ ಸದಸ್ಯ ಅರುಣ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಜುಬೇರ್ ಹಾಗೂ ಸಂಚಾಲಕಿ ಹೇಮಲತಾ ರೇವಣ್ಕರ್ ಉಪಸ್ಥಿತರಿದ್ದರು.
ಸೂರಜ್ ಸಮೂಹ ಸಂಸ್ಥೆಯ ಅಧ್ಯಕ್ಷ ಮಂಜುನಾಥ್ ಎಸ್. ರೇವಣ್ಕರ್ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಜ್ಞಾನದೀಪ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸೆಲ್ವಿಯಾ ಅಮ್ಮಣ್ಣ ವಂದಿಸಿದರು.
ಇದಕ್ಕೂ ಮುನ್ನ ಮುಡಿಪು ಜಂಕ್ಷನ್ ನಿಂದ ಸೂರಜ್ ಕಲಾಸಿರಿ ನಡೆಯುವ ಗುಲಾಬಿ ಶ್ರೀಪಾದ ವೇದಿಕೆ ತನಕ ಚೆಂಡೆ, ಕುಣಿತ, ಭಜನೆ, ದಫ್, ರಾಜ್ಯದ ವಿವಿಧ ಕಲಾಪ್ರಕಾರಗಳ ನೃತ್ಯ ಹಾಗೂ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.