ದೇಶದ ‘ಸ್ವಾತಂತ್ರ’ ಬಂಡವಾಳಶಾಹಿಗಳಿಗೆ ಹಸ್ತಾಂತರ : ಭಾಸ್ಕರ ಮಯ್ಯ

Update: 2019-11-24 16:27 GMT

ಮಂಗಳೂರು, ನ. 24: ಸಾಮ್ರಾಜ್ಯಶಾಹಿಗಳನ್ನು ತೊಲಗಿಸುವುದಕ್ಕಾಗಿಯೇ ಹಿಂದೆ ಸ್ವಾತಂತ್ರ ಹೋರಾಟ ನಡೆಸಲಾಗಿತ್ತು. ಹಾಗೇ ದೊರೆತ ಸ್ವಾತಂತ್ರವು ಜನಸಾಮಾನ್ಯರಿಗೆ ಲಭಿಸಬೇಕಿತ್ತು. ಆದರೆ ಇಂದು ಆ ಸ್ವಾತಂತ್ರವು ದೇಶದೊಳಗಿನ ಪಾಳೇಗಾರಿಕೆ, ಬಂಡವಾಳಶಾಹಿ ವರ್ಗಕ್ಕೆ ಹಸ್ತಾಂತರಗೊಂಡಿದೆ. ಇದು ಗಾಂಧೀಜಿ ಆಶಯಕ್ಕೆ ವಿರುದ್ಧವಾಗಿದೆ ಎಂದು ಚಿಂತಕ ಭಾಸ್ಕರ ಮಯ್ಯ ಖೇದ ವ್ಯಕ್ತಪಡಿಸಿದ್ದಾರೆ.

ಸಮುದಾಯ ಮಂಗಳೂರು ವತಿಯಿಂದ ನಗರದ ಸಹೋದಯ ಸಭಾಂಗಣದಲ್ಲಿ ರವಿವಾರ ನಡೆದ ‘ಗಾಂಧಿ- 150 ವಿಚಾರ ಸಂಕಿರಣ’ ಉದ್ಘಾಟಿಸಿ ಅವರು ಮಾತನಾಡಿದರು.

ದೇಶಕ್ಕೆ ಸ್ವಾತಂತ್ರ ದೊರೆಯುವವರೆಗೆ ಮಹಾತ್ಮಾ ಗಾಂಧೀಜಿ ಎಲ್ಲರಿಗೂ ಬೇಕಾಗಿದ್ದರು. ಆದರೆ ಸ್ವಾತಂತ್ರ ದೊರೆತ ಬಳಿಕ ಬಂಡವಾಳಶಾಹಿ ವರ್ಗಗಳಿಗೆ ಗಾಂಧೀಜಿ ಬೇಡವಾದರು. ಗಾಂಧೀಜಿಯ ಸತ್ಯ, ಅಹಿಂಸೆ ಮತ್ತಿತರ ತತ್ವಗಳು ಈ ವರ್ಗಗಳಿಗೆ ದೊಡ್ಡ ಕಂಟಕವಾಗಿತ್ತು ಎಂದು ಭಾಸ್ಕರ ಮಯ್ಯ ಹೇಳಿದರು.

ಈಗಲೂ ಗಾಂಧೀಜಿ ಕುರಿತು ಹಗುರವಾಗಿ ಕೆಲವರು ಮಾತನಾಡುತ್ತಿದ್ದಾರೆ. ಆದರೆ ಗಾಂಧೀಜಿಯವರನ್ನು ಆ ಕಾಲದಲ್ಲೇ ಅಗ್ರಗಣ್ಯ ವಿಜ್ಞಾನಿ ಐನ್‌ಸ್ಟೈನ್ ಮಹಾತ್ಮನ ಸ್ಥಾನದಲ್ಲಿರಿಸಿದ್ದನ್ನು ದೇಶಪ್ರೇಮಿಗಳಾರೂ ಕೂಡ ಮರೆಯಬಾರದು. ಜೀವನದಲ್ಲಿ ಅನೇಕ ಸವಾಲುಗಳು ಎದುರಾದರೂ ಗಾಂಧೀಜಿ ಸತ್ಯ, ಅಹಿಂಸೆಯ ವೌಲ್ಯಗಳನ್ನು ಬಿಟ್ಟುಕೊಡದ ಬಹುದೊಡ್ಡ ವ್ಯಕ್ತಿ ಮಾತ್ರವಲ್ಲ ಶಕ್ತಿಯಾಗಿದ್ದ ಎಂದು ಭಾಸ್ಕರ ಮಯ್ಯ ವ್ಯಾಖ್ಯಾನಿಸಿದರು.

ಗಾಂಧೀಜಿ ಬದಲಾವಣೆಗೆ ಮಾನಸಿಕವಾಗಿ ತಯಾರಿದ್ದರು ಎನ್ನುವುದನ್ನು ಜವಾಹರಲಾಲ್ ನೆಹರೂ ಜತೆಗಿನ ಅವರ ಸುದೀರ್ಘ ಪತ್ರ ಸಂದೇಶಗಳೇ ಹೇಳುತ್ತವೆ. ತಮ್ಮ ಕಲ್ಪನೆಯ ಹಳ್ಳಿಗಳ ಕುರಿತು ಪತ್ರದಲ್ಲಿ ಉಲ್ಲೇಖಿಸಿದ್ದ ಗಾಂಧೀಜಿ, ‘ಹಿಂದ್ ಸ್ವರಾಜ್ ಈಗ ನನ್ನ ಕಣ್ಣೆದುರಿಗಿಲ್ಲ. ಅಂದು ಹೇಳಿದ್ದನ್ನು ಸಿದ್ಧ ಮಾಡಲು ಹೊರಟಿಲ್ಲ. ಹಳೆಯ ವಿಚಾರಗಳನ್ನು ಆಧುನಿಕ ದೃಷ್ಟಿಕೋನದಿಂದ ನೋಡಬಯಸುವುದಾಗಿ’ ಹೇಳಿದ್ದೇ ಅವರು ಬದಲಾವಣೆ ಬಯಸಿದ್ದರು ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಭಾಸ್ಕರ ಮಯ್ಯ ಹೇಳಿದರು.

ಗಾಂಧೀಜಿಯವರ ಕಲ್ಪನೆಯ ಹಳ್ಳಿಯಲ್ಲಿ ವ್ಯಕ್ತಿಗಳು ಕತ್ತಲಿನಲ್ಲಿ ಪ್ರಾಣಿಗಳಂತೆ ಬದುಕುವುದಿಲ್ಲ. ಸ್ತ್ರೀ ಪುರುಷರಿಬ್ಬರೂ ಸಮಾನ ನೆಮ್ಮದಿಯಿಂದ ಬದುಕುತ್ತಾರೆ. ಇಂತಹ ಹಳ್ಳಿಯ ಜನ ಇಡೀ ಜಗತ್ತನ್ನೇ ಎದುರಿಸಲು ಸಿದ್ಧರಾಗಿರುತ್ತಾರೆ. ಅಲ್ಲಿ ರೋಗಿಗಳಿ ರುವುದಿಲ್ಲ. ಜನರು ಶ್ರಮಜೀವಿಗಳಾಗಿರುತ್ತಾರೆ. ಕೆಲವರು ಮಾತ್ರ ಐಷಾರಾಮದಿಂದ ಜೀವನ ನಡೆಸುವುದಲ್ಲ ಎಂಬ ವಾಸ್ತವವನ್ನು ಅರಿತುಕೊಳ್ಳಬೇಕಾಗಿದೆ. ಆದರೆ ಈ ಕಲ್ಪನೆಯ ಹಳ್ಳಿಯನ್ನು ನೆಹರೂ ಒಪ್ಪಿರಲಿಲಿಲ್ಲ. ಗಾಂಧೀಜಿಯ ಯಾವ ಮಾತಿಗೆ ನೆಹರೂ ಮನ್ನಣೆ ನೀಡಿರಲಿಲ್ಲ ಎಂದು ಭಾಸ್ಕರ ಮಯ್ಯ ನುಡಿದರು.

ಗಾಂಧೀಜಿಯು ಸಾಮ್ರಾಜ್ಯಶಾಹಿ ವಿರೋಧಿ ಹೋರಾಟದ ಸೂತ್ರಧಾರಿಯಾಗಿದ್ದರು. ಹಿಂದೂ-ಮುಸ್ಲಿಂ ಏಕತೆಯ ಪ್ರತಿಪಾದಕರಾಗಿದ್ದರು. ಯಂತ್ರ ನಾಗರಿಕತೆಯ ವಿರೋಧಿಯಾಗಿದ್ದರು. ದೇಶಕ್ಕೆ ಒಳಿತಿನ ಸಂದೇಶ ನೀಡಿದ ಗಾಂಧೀಜಿಯ ಕೊನೆಗಾಲದಲ್ಲಿ ಅವರ ಮಾತನ್ನು ಯಾರೂ ಕೇಳುತ್ತಿಲ್ಲ ಎನ್ನುವ ದುಃಖವೂ ಅವರಿಗಿತ್ತು ಎಂದು ಭಾಸ್ಕರ ಮಯ್ಯ ಹೇಳಿದರು.

ಸಮುದಾಯ ಮಂಗಳೂರು ಸಂಘಟನೆಯ ವಾಸುದೇವ ಉಚ್ಚಿಲ್, ಉಪನ್ಯಾಸಕರಾದ ವಾಸುದೇವ ಬೆಳ್ಳೆ, ದಿನೇಶ್ ನಾಯಕ್ ಮಾತನಾಡಿದರು. ಮನೋಜ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News