ಕಲಾವಿದರ ಜೀವನಾನುಭವದಿಂದ ಕಲೆಯ ಜೀವಂತಿಕೆ: ಕಿಶನ್ ಹೆಗ್ಡೆ
ಮಂಗಳೂರು, ನ. 25: ಯಕ್ಷಗಾನ ಆಟ-ಕೂಟಗಳಿಗೆ ನಿರ್ದಿಷ್ಟವಾದ ಮಾರ್ಗಸೂಚಿ ಗ್ರಂಥಗಳಿಲ್ಲ. ಹಿರಿಯರು ಅಥವಾ ಗುರುಗಳ ಮಾರ್ಗದರ್ಶನದಲ್ಲಿ ಅದು ಮುಂದುವರಿದಿದೆ. ಹಾಗಾಗಿ ಯಾವುದೇ ಕಲೆಯ ಜೀವಂತಿಕೆ ಇರುವುದು ಆಯಾಯ ರಂಗದಲ್ಲಿ ದುಡಿದು ಶ್ರೇಷ್ಠತೆ ಪಡೆದ ಕಲಾವಿದರ ಜೀವನಾನುಭವದಲ್ಲಾಗಿದೆ ಎಂದು ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಸಹಿತ ಪಂಚ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಹೇಳಿದ್ದಾರೆ.
ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಇವರು ಮಂಗಳೂರು ವಿ.ವಿ. ಡಾ.ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗ ದೊಂದಿಗೆ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ಅಂಗವಾಗಿ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಏರ್ಪಡಿಸಿದ 7ನೇ ವರ್ಷದ ಕನ್ನಡ ನುಡಿ ಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ ದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನದ ಶಿಲೆ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಯಕ್ಷಗಾನ ತಾಳಮದ್ದಳೆ ಬೆಳವಣಿಗೆಗೆ ಚಿಂತನ-ಮಂಥನದೊಂದಿಗೆ ಏಳು ವರ್ಷಗಳಿಂದ ಯಕ್ಷಾಂಗಣ ಮಾಡುತ್ತಿರುವ ಕೆಲಸ ಶ್ಲಾಘನೀಯ ಎಂದರು.
ಶ್ರೀದೇವಿ ಎಜುಕೇಶನ್ ಟ್ರಸ್ಟ್ ಆಡಳಿತ ನಿರ್ದೇಶಕ ಎ. ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
*ಅರ್ಥಗಾರಿಕೆಯಲ್ಲಿ ಹೊಸತನ: ಯಕ್ಷಗಾನ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಮಾತನಾಡಿ ತಾಳಮದ್ದಲೆಯ ಅರ್ಥಗಾರಿಕೆ ಹೊಸತನದೆಡೆಗೆ ಹೊರಳುತ್ತಿದೆ. ಹಲವಾರು ಹೊಸ ಪ್ರತಿಭೆಗಳು ಯಕ್ಷರಂಗಕ್ಕೆ ಬರುತ್ತಿದ್ದಾರೆ. ಇದು ಸಂತಸದ ವಿಷಯ. ಆದರೆ ಪ್ರಸ್ತುತ ಸಿನೆಮಾ ಮತ್ತಿತರ ಕಲೆಗಳನ್ನು ಯಕ್ಷಗಾನದಲ್ಲಿ ಉಪಯೋಗಿಸುವ ಪ್ರಯತ್ನ ನಡೆಯುತ್ತಿರುವುದು ಸರಿಯಲ್ಲ. ಇದರಿಂದ ಯಕ್ಷಗಾನದ ಮೂಲ ಸೊಗಡಿಗೆ ಧಕ್ಕೆಯಾಗುತ್ತದೆ ಎಂದರು.
ಸಂಸ್ಮರಣೆ: ಈ ಸಂದರ್ಭ ಹಿರಿಯ ಕವಿ, ಕಲಾಪೋಷಕ ದಿ. ಕುದ್ರೆಪ್ಪಾಡಿ ಜಗನ್ನಾಥ ಆಳ್ವ ಅವರಿಗೆ ಏರ್ಪಡಿಸಲಾದ ಸಂಸ್ಮರಣೆಯಲ್ಲಿ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ನುಡಿನಮನ ಸಲ್ಲಿಸಿದರು.
ಡಾ ಕೋಳ್ಯೂರುಗೆ ಪ್ರಶಸ್ತಿ: ಹಿರಿಯ ಯಕ್ಷಗಾನ ಸ್ತ್ರೀವೇಷಧಾರಿ 87ರ ಹರೆಯದ ಡಾ.ಕೋಳ್ಯೂರು ರಾಮಚಂದ್ರ ರಾವ್‌ಗೆ 2019ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಅಭಿನಂದನಾ ಭಾಷಣ ಮಾಡಿದರು. ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು, ಯುಎಇ ಎಕ್ಸ್‌ಜೇಂಜ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಸುಧೀರ್ ಕುಮಾರ್ ಶೆಟ್ಟಿ ವೈ., ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಉದ್ಯಮಿ ವಿ.ಕರುಣಾಕರ, ವಿ.ವಿ. ಸಂಧ್ಯಾ ಕಾಲೇಜು ಪ್ರಾಂಶುಪಾಲ ಡಾ. ರಾಮಕೃಷ್ಣ ಎಂ.ಬಿ. ಅತಿಥಿಗಳಾಗಿದ್ದರು.
ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು. ಮಹಿಳಾ ಪ್ರತಿನಿಧಿ ನಿವೇದಿತಾ ಎನ್.ಶೆಟ್ಟಿ ಬೆಳ್ಳಿಪ್ಪಾಡಿ ಪ್ರಶಸ್ತಿ ಫಲಕ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಶೆಟ್ಟಿ ಪಣಿಯೂರು ವಂದಿಸಿದರು.
ಸಮಿತಿ ಪದಾಧಿಕಾರಿಗಳಾದ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಅಶೋಕ ಮಾಡ ಕುದ್ರಾಡಿಗುತ್ತು, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ತೀರ್ಥಹಳ್ಳಿ ವಿಶ್ವನಾಥ ಶೆಟ್ಟಿ, ರವೀಂದ್ರ ರೈ ಕಲ್ಲಿಮಾರು, ಸುಧಾಕರ ರಾವ್ ಪೇಜಾವರ, ಕೆ.ಲಕ್ಷ್ಮಿನಾರಾಯಣ ರೈ ಹರೇಕಳ, ಉಮೇಶ್ ಆಚಾರ್ಯ ಗೇರುಕಟ್ಟೆ, ಸಿದ್ಧಾರ್ಥ ಅಜ್ರಿ, ಶೋಭಾ ಕೇಶವ ಕಣ್ಣೂರು ಉಪಸ್ಥಿತರಿದ್ದರು.
ಷಣ್ಮುಖ ಸಂಧಾನ: ಸಮಾರಂಭದ ಬಳಿಕ ಬಲಿಪ ಪ್ರಸಾದ್ ಭಟ್ ಅವರ ಭಾಗವತಿಕೆಯಲ್ಲಿ ‘ಸಂಧಾನ ಸಪ್ತಕ’ದ ಕೊನೆಯ ಪ್ರಸಂಗ ‘ಷಣ್ಮುಖ ಸಂಧಾನ’ ಯಕ್ಷಗಾನ ತಾಳಮದ್ದಳೆ ಜರುಗಿತು.