ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನ

Update: 2019-11-25 17:22 GMT

ಬೆಳ್ತಂಗಡಿ : ಅಂತರಂಗದ ದೀಪವು ಯಾವಾಗ ಪ್ರಜ್ವಲವಾಗುತ್ತದೋ ಆಗ ಧರ್ಮದ ಭಾವ ರೂಪುಗೊಳ್ಳುತ್ತದೆ. ಹಲವಾರು ಮತಧರ್ಮಗಳಿದ್ದರೂ ಎಲ್ಲವೂ ದೇವರೆಡೆಗೆ ಅಂತಿಮವಾಗಿ ಹೋಗುತ್ತದೆ. ಎಲ್ಲರನ್ನೂ ಗೌರವಿಸಬೇಕುವ ವಿಚಾರಧಾರೆಗಳನ್ನು ಅನುಭವಿಸಿ ಜೀರ್ಣಿಸಿಕೊಳ್ಳಬೇಕು. ಬೇಡದ್ದನ್ನು ಬಿಸಾಕಿ ಬೇಕಾದುದನ್ನು ಸಂರಕ್ಷಿಸಿಕೊಳ್ಳಬೇಕು. ಪಾಶ್ಚಾತ್ಯತೆ ಆಧುನಿಕತೆಗಳು ಬರಲಿ ಒಳ್ಳೆಯದು ನಮಗೆ ಏನು ಬೇಕೋ ಅದನ್ನು ಉಳಿಸಿಕೊಳ್ಳೋಣ ಆದರೆ ನಮ್ಮಲ್ಲಿ ಒಂದು ರಾಷ್ಟ್ರಭಾವ  ಇರಬೇಕು ಎಂದು ನಿಕಟಪೂರ್ವ ಲೋಕಸಭಾ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಹೇಳಿದರು.

ಅವರು ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸರ್ವಧರ್ಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿವ್ಯಕ್ತಿತ್ವ ನಿರ್ಮಾಣವಾಗಬೇಕಾದರೆ ಉತ್ತಮ ವೃತ್ತಿಯೊಂದಿಗ ಚಾರಿತ್ರ್ಯ ಇರಬೇಕು. ವ್ಯಕ್ತಿ ಮೊದಲು ಚಾರಿತ್ರ್ಯ ವಂತನಾಗಬೇಕು ಜೀವನದಲ್ಲಿ ಏನನ್ನು ಗಳಿಸುತ್ತೇವೆಯೋ ಅದರಲ್ಲಿ ನಮಗೆ ಬೇಕಾದುದನ್ನು ಇಟ್ಟು ಉಳಿದದ್ದನ್ನು ಇತರರಿಗೆ ಹಂಚುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಒಳ್ಳೆಯವರಾಗಬೇಕು ಅದರೊಂದಿಗೆ ಇನ್ನೊಬ್ವರಿಗೂ ಒಳ್ಳೆಯ ದಾಗಬೇಕು ಎಂಬ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದರು.

ಹೆಗ್ಗಡೆಯವರು ಸಮಾಜದ ಸಾಮಾನ್ಯ ಜನರಲ್ಲಿ ಆತ್ಮವಿಶ್ವಾ ತುಂಬಿಸುವ ಕಾರ್ಯವನ್ನು ಮಾಡಿದ್ದಾರೆ ಇದು ಎಲ್ಲರಿಗೂ ಮಾದರಿಯಾಗಿದೆ ಎಂದರು.

ಇಂಡಿಯನ್ ಲೈಫ್ ಸ್ಟೈಲ್ ಕೋಚ್ ಇಸ್ಕಾನ್ ಗೌರ್ ಗೋಪಾಲದಾಸ್ ಅದ್ಯಕ್ಷತೆ ವಹಿಸಿ ಮಾತನಾಡಿ ಪ್ರಪಂಚದ ನಾನಾ ದೇಶಗಳು ಬೇರೆ ಬೇರೆ ವಿಚಾರಧಾರೆಗಳಲ್ಲಿ ಗುರುತಿಸಿಕೊಂಡಿದೆ. ಆಧ್ಯಾತ್ಮತೆ ಹಾಗೂ ಧಾರ್ಮಿಕತೆ ಭಾರತದ ವೈಶಿಷ್ಟ್ತವಾಗಿದೆ ಆಧ್ಯಾತ್ಮಿಕತೆ ಎಂಬುದು ಧರ್ಮವಲ್ಲ ಅದು ಧರ್ಮವನ್ನು ಮೀರಿದ್ದಾಗಿದೆ ಎಲ್ಲ ಧರ್ಮಗಳೂ ಈ ಆಧ್ಯಾತ್ಮಿಕ ತೆಯನ್ನು ಬೆಳೆಸಿಕೊಂಡಿದೆ ನಮ್ಮ ಶಿಕ್ಷಣಗಳು ಹೇಗೆ ಗಳಿಸಬೇಕು ಎಂಬುದನ್ನು ಕಲಿಸುವ ಕಾರ್ಯವನ್ನು ಮಾತ್ರ ಮಾಡುತ್ತಿದೆ ಅದರೊಂದಿಗೆ ಹೇಗೆ ಬದುಕಬೇಕು ಎಂಬುದನ್ನು ಕಲಿಸುವ ಕಾರ್ಯ ನಡೆಯಬೇಕಾಗಿದೆ ಅದು ನಮ್ಮ ಸಂಸ್ಮೃತಿಯಾಗಿದೆ 
ಹುಟ್ಟು ಸಾವು ನಮ್ಮ ಕೈಯಲ್ಲಿಲ್ಲ ಅದರ ನಡುವೆ ಇರುವ ಬದುಕು ಸದಾ ಸಂಘರ್ಷದಿಂದ ಕೂಡಿದ್ದಾಗಿರುತ್ತದೆ ಈ ಸಂಘರ್ಷವನ್ನು ನಾವು ಹೇಗೆ ಎದುರಿಸಿ ನಿಲ್ಲುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು.

ಪರಿವರ್ತನೆಗಿರುವುದೊಂದೆ ಹಾದಿ ಆಧ್ಯಾತ್ಮಿಕ. ಭಾರತೀಯ ಎಲ್ಲ ಧರ್ಮಗಳ ಪ್ರತಿಪಾದನೆಯೇ ಧರ್ಮದ ಚಿಂತನೆ. ಆದ್ದರಿಂದ ಆದ್ಮಾತ್ಮವೇ ಭಾರತೀಯತೆಯ ಗುರುತು ಹಾಗೂ ವಿಶೇಷತೆ ಎಂದು ಅವರು ವರ್ಣಿಸಿದರು. ಬದುಕಲು ಕಲಿತಲ್ಲಿ ಬದುಕನ್ನುವ ಪ್ರೀತಿಸಿದಲ್ಲಿ ನೆಮ್ಮದಿ ಕಾಣುವೆವು. ಅದೇ ಬದುಕುವ ನಶೆಯಲ್ಲಿ ಸಂಪಾದನೆಯ ತೃಪ್ತಿಗೆ ಬಿದ್ದು ನಮ್ಮತನವನ್ನು ಕಳೆದು ಕೊಳ್ಳುವಂತಾಗಿದೆ. ಇದಕ್ಕಾಗಿ ಧರ್ಮ, ಸಂಸ್ಕೃತಿ ಸಭ್ಯತೆ ಕಲಿಸುವ ಆಧ್ಯಾತ್ಮದತ್ತ ಚಿಂತನೆ ನಡೆಸಿದಾಗ ಬದುಕುವ ಕಲೆ ಕಲಿಸುತ್ತದೆ ಎಂದರು.

ಫೋಕಸ್ ಅಕಾಡೆಮಿ ಜೀವನ ಕೌಶಲ ಮತ್ತು ಉದ್ಯಮಿಶೀಲ ಸಂಸ್ಥೆ ಮೈಸೂರು ಇದರ ಮುಖ್ಯ ಕಾರ್ಯನಿರ್ವಾಹಕ ಡಿ.ಟಿ ರಾಮಾನುಜಮ್ ಜೀವನ ಮತ್ತು ಧರ್ಮ ಎಂಬ ವಿಷಯದ ಕುರಿತು, ದಿ ಟೈಮ್ಸ್ ಗ್ರೂಪ್‍ನ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಕದ್ರಿ ನವನೀತ  ಶೆಟ್ಟಿ, ರಾಜಕೀಯ ಮತ್ತು ಭಾರತೀಯ ಸಿದ್ಧಾಂತ ಎಂಬ ವಿಷಯದ ಕುರಿತು, ಖ್ಯಾತ ಸಾಹಿತಿ ಬೋಳುವಾರ್ ಮಹಮ್ಮದ್ ಕುಂಞಿ  ಉಪನ್ಯಾಸ ನೀಡಿದರು.

ಉಪನ್ಯಾಸಕರನ್ನು ಡಿ.ಸುರೇಂದ್ರ ಕುಮಾರ್ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಸುರೇಂದ್ರ ಕುಮಾರ್, ಪ್ರೊ. ಎಸ್ ಪ್ರಭಾಕರ್ ಉಪಸ್ಥಿತರಿದ್ದರು.

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ.ಯಶೋವರ್ಮ, ಉಪನ್ಯಾಸಕ ಸುನೀಲ್ ಪಂಡಿತ್ ಸನ್ಮಾನ ಪತ್ರ ವಾಚಿಸಿದರು. ಎ.ಪಿ.ಎಂ.ಸಿ ಅಧ್ಯಕ್ಷ ಕೇಶವ ಗೌಡ ಪಿ ವಂದಿಸಿದರು. ಡಾ. ಶ್ರೀಧರ ಭಟ್ ಉಜಿರೆ ನಿರೂಪಿಸಿದರು.

'ಧರ್ಮದ ಹೆಸರಿನಲ್ಲಿ ತಪ್ಪು ಕಾರ್ಯಗಳು ನಡೆಯದಿರಲಿ ಎಂಬುದೇ ಈ ಸರ್ವಧರ್ಮದ ಉದ್ದೇಶ'

ಎಲ್ಲ ಧರ್ಮಗಳ ಹಾಗೂ ಪಂಥಗಳ ಮೂಲ ಉದ್ದೇಶ ಒಂದೇ ಆಗಿರುತ್ತದೆ ಅದೇ ಲೋಕ ಕಲ್ಯಾಣ. ಅವರವರ ರೀತಿ ನೀತಿಗಳು ಬೇರೆಯಾಗಿದ್ದರೂ ಎಲ್ಲರೂ ಪ್ರತಿಪಾದನೆ ಮಾಡುವುದು ಮಾನವ ಹಿತವನ್ನಾಗಿದೆ  ಧರ್ಮ ಎಂಬ ಶಬ್ದಕ್ಕೆ ಅರ್ಥ ಕೇವಲ ರಿಲಿಜಿಯನ್, ಮತ ಪಂಥವೆಂಬರ್ಥವಲ್ಲ. ಇಲ್ಲಿ ಧರ್ಮವೆಂದರೆ ಅದು ಜನರಿಗೆ ಎದ್ದು ನಿಲ್ಲಲು ಕಲಿಸುತ್ತದೆ. ಜೀವನ ಪ್ರದಾನ ಮಾಡುತ್ತದೆ. ಅದುವೇ ನಮ್ಮೊಳಗಿರುವ ಆತ್ಮ ಚೈತನ್ಯ ಇದುವೇ ಧರ್ಮ. ಧರ್ಮವೇ ಜೀವನ, ಧರ್ಮವಿಲ್ಲವೆಂದರೆ ಏನೂ ಇಲ್ಲ. ಧರ್ಮದ ಅಳವಡಿಕೆ ಎಲ್ಲದರಲ್ಲೂ ಇರಬೇಕು. ರಾಜಕರಣದಲ್ಲಿ ಖಂಡಿತವಾಗಿ ಧರ್ಮವಿರಲೇಬೇಕು. ಆಗ ಮಾತ್ರ ಪ್ರೀತಿ-ವಿಶ್ವಾಸಗಳಿಸಬಹುದು. ಪ್ರತಿಯೊಂದು ಕ್ರಿಯೆ, ವ್ಯವಹಾರ, ಆಚರಣೆಯೂ ಸತ್ಯ ನಿಷ್ಠೆಗಳಿಂದ ಕೂಡಿದ್ದರೆ ಅದು ಧರ್ಮ. ಈ ದಾರಿ ತಪ್ಪಿದರೆ ಅದುವೇ ಅಧರ್ಮ. 
- ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಶ್ರೀಕ್ಷೇತ್ರ ಧರ್ಮಸ್ಥಳ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News