ಕೋಡಿ ಮಾಧವ ಪೂಜಾರಿ ನಿಧನ
ಕುಂದಾಪುರ, ನ. 26: ಕುಂದಾಪುರ ಕೋಡಿಯ ಶ್ರೀಚಕ್ರೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ, ಪಾತ್ರಿ ಮಾಧವ ಎಂ.ಪೂಜಾರಿ ಮಂಗಳವಾರ ಬೆಳಗ್ಗೆ ನಿಧನರಾದರು. ಅವರಿಗೆ 75 ವರ್ಷ ಪ್ರಾಯವಾಗಿತ್ತು. ಇವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಕುಂದಾಪುರದ ಹಿರಿಯ ಧಾರ್ಮಿಕ ನೇತಾರರಲ್ಲಿ ಒಬ್ಬರಾಗಿದ್ದ ಮಾಧವ ಪೂಜಾರಿ, ದೈವಾರಾಧನೆ ಮತ್ತು ಧರ್ಮದ ನೆಲೆಗಳಲ್ಲಿ ಆದರ್ಶದ ಬದುಕನ್ನು ರೂಪಿಸಿಕೊಂಡವರು. ಕೋಮು ಸೌಹಾರ್ದತೆ ಹಾಗೂ ಭ್ರಾತೃತ್ವವನ್ನು ಬದುಕಿನಲ್ಲಿ ಮೈಗೂಡಿಸಿ ಕೊಂಡವರು. ಇತ್ತೀಚೆಗಷ್ಟೇ (ಜುಲೈ) ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಇವರು ತಮ್ಮ ಸ್ಪೂರ್ತಿದಾಯಕ ಪ್ರವಚನ ಗಳಿಂದ, ತಮ್ಮ ಬರಹಗಳ ಮೂಲಕವೂ ಜನಪ್ರಿಯರಾಗಿದ್ದರು.
‘ಸುದ್ದಿಮನೆ’ ಎಂಬ ಪತ್ರಿಕೆಗೆ ಪ್ರಬುದ್ಧ ಲೇಖನಗಳನ್ನು ಬರೆಯುತಿದ್ದ ಮಾಧವ ಪೂಜಾರಿ, ‘ವಿವೇಕವಾಣಿ’ ಎಂಬ ಆಧ್ಯಾತ್ಮಿಕ ಪತ್ರಿಕೆಯನ್ನು ಪ್ರಕಟಿಸು ತಿದ್ದರು. ಕೋಡಿಯ ಚಕ್ರೇಶ್ವರಿ ದೇವಸ್ಥಾನದ ಧರ್ಮದರ್ಶಿಗಳಾಗಿ ಸಹಸ್ರಾರು ಜನರ ಬದುಕಿಗೆ ಬೆಳಕನ್ನು ನೀಡಿದ ಇವರು ಹಠಾತ್ ದೈವಾಧೀನರಾದ ಸುದ್ದಿ ಕೋಡಿಯ ಜನರನ್ನು ಶೋಕತಪ್ತರನ್ನಾಗಿಸಿದೆ.
ಕೋಡಿಯ ಬ್ಯಾರೀಸ್ ಸಂಸ್ಥೆಗಳ ಆರಂಭದ ದಿನಗಳಿಂದಲೂ ನಿಕಟ ಸಂಬಂಧವನ್ನು ಹೊಂದಿದ್ದ ಇವರು, ಹಾಜಿ ಕೆ.ಮೊಹಿದ್ದೀನ್ ಬ್ಯಾರೀಸ್ ಕನ್ನಡ ಮಾಧ್ಯಮ ಶಾಲೆಯ ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ವಿದ್ಯಾರ್ಥಿಗಳಿಗೆ ಆದರ್ಶಗಳನ್ನು ಬೋಧಿಸಿದವರು.
ತಮ್ಮ ಒಡನಾಡಿಯಾಗಿದ್ದ ಮಾಧವ ಪೂಜಾರಿ ಅವರ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿರುವ ಬ್ಯಾರೀಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್ ಬ್ಯಾರಿ, ಹಾಜಿ ಕೆ.ಮೊಹಿದ್ದೀನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ ಹಾಗೂ ಅವರ ಕುಟುಂಬದ ಸದಸ್ಯರು, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಸಂಸ್ಥೆಗಳ ಮುಖ್ಯಸ್ಥರು, ಸಲಹಾ ಮಂಡಳಿಯ ಸದಸ್ಯರು ಹಾಗೂ ವಿದ್ಯಾರ್ಥಿಗಳು, ಇವರ ಅಗಲಿಕೆ ಬ್ಯಾರೀಸ್ ಸಂಸ್ಥೆಗಳಿಗೆ ತುಂಬಲಾರದ ನಷ್ಟವೆಂದು ಬಣ್ಣಿಸಿದ್ದಾರೆ.
ಅಗಲಿದ ಮಾಧವ ಪೂಜಾರಿ ಅವರ ಅವರ ಆತ್ಮಕ್ಕೆ ಶಾಂತಿಯನ್ನು ಕೋರಿ, ಅವರ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿಯನ್ನು ಅವರು ನಂಬಿದ ಚಕ್ರೇಶ್ವರಿ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.