ಧರ್ಮದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗಿಂತ ಸಂತರೇ ಸುಪ್ರೀಂ: ಪುರಿ ಶ್ರೀನಿಶ್ಚಲಾನಂದ ಸರಸ್ವತಿ ಸ್ವಾಮೀಜಿ

Update: 2019-11-27 16:15 GMT

ಉಡುಪಿ, ನ.27: ಸ್ವತಂತ್ರ ಭಾರತದಲ್ಲಿ ಮುಸ್ಲಿಮ್ ಸಮುದಾಯದ ಮೂವರನ್ನು ರಾಷ್ಟ್ರಪತಿ, ಒಬ್ಬರನ್ನು ಗೃಹ ಸಚಿವ, ಒಬ್ಬರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಹಲವು ಮಂದಿಯನ್ನು ಮುಖ್ಯಮಂತ್ರಿ, ರಾಜ್ಯ ಪಾಲರನ್ನಾಗಿ ಮಾಡಿದ್ದೇವೆ. ಹಿಂದುಗಳ ಉದಾರತೆಯನ್ನು ದೌರ್ಬಲ್ಯ ಎಂದು ತಿಳಿದುಕೊಳ್ಳಬಾರದು. ದೇಶದ ಯಾವ ಭಾಗದಲ್ಲೂ ಬಾಬರ್ ಹೆಸರಿನಲ್ಲಿ ಮಸೀದಿ ನಿರ್ಮಿಸಲು ಅವಕಾಶ ನೀಡಬಾರದು ಎಂದು ಪುರಿ ಗೋವರ್ಧನ ಪೀಠದ ಶ್ರೀನಿಶ್ಚಲಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ.

ಮೂರು ದಿನಗಳ ಕಾರ್ಯಕ್ರಮಕ್ಕಾಗಿ ಇಂದು ಉಡುಪಿಗೆ ಆಗಮಿಸಿದ ಪುರಿ ಸ್ವಾಮೀಜಿ, ಪೇಜಾವರ ಮಠದಲ್ಲಿ ಸಂಜೆ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿಯನ್ನು ಭೇಟಿ ಮಾಡಿ, ರಾಮಮಂದಿರದ ಕುರಿತು ಮಾತುಕತೆ ನಡೆಸಿದರು.

ಅಯೋಧ್ಯೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ತೀರ್ಪು ಒಪ್ಪಲು ಸಾಧ್ಯವಿಲ್ಲ. ಬಾಬರಿ ಮಸೀದಿ ನಿರ್ಮಿಸಲು ಭೂಮಿ ನೀಡಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್‌ಗಿಂತ ಸಂಸತ್ ಮೇಲೆಯಾದರೆ, ಧರ್ಮದ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗಿಂತ ಸಂತರೇ ಸುಪ್ರೀಂ ಆಗಿದ್ದೇವೆ ಎಂದರು.

ಲಾಭಕ್ಕಾಗಿ ರಾಜಕಾರಣಿಗಳು ಏನು ಬೇಕಾದರೂ ಮಾಡುತ್ತಾರೆ. ಅದರ ಪರಿಣಾಮವೇ ಈ ತೀರ್ಪು ಬಂದಿದೆ. ಕೇಂದ್ರದಲ್ಲಿ ಬಹುಮತ ಪಡೆದಿರುವ ಬಿಜೆಪಿ ಸುಪ್ರೀಂ ಕೋರ್ಟ್ ತೀರ್ಪುನ್ನು ತಿರಸ್ಕರಿಸಿ ಸಂಸತ್ತಿನಲ್ಲಿ ಬಾಬರಿ ಮಸೀದಿ ನಿರ್ಮಾಣಕ್ಕೆ ಯಾವುದೇ ಭೂಮಿ ನೀಡುವುದಿಲ್ಲ ಎಂಬುದಾಗಿ ಹೊಸ ನಿರ್ಣಯ ಮಾಡಬೇಕು. ಈ ವಿಚಾರದಲ್ಲಿ ರಾಜಕಾರಣಿಗಳನ್ನು ಎಚ್ಚರಿಸುವ ಹಾಗೂ ಮಾರ್ಗದರ್ಶನ ನೀಡುವ ಕಾರ್ಯವನ್ನು ಸಂತರು ಮಾಡಬೇಕು ಎಂದು ಅವರು ತಿಳಿಸಿದರು.

ನರಸಿಂಹ ರಾವ್ ಪ್ರಧಾನಿಯಾಗಿದ್ದ ಕಾಲದಲ್ಲಿ ನಡೆದ ರಾಜಿ ಸೂತ್ರಕ್ಕೆ ನನ್ನ ಸಮ್ಮತಿ ಇರಲಿಲ್ಲ. ಆ ವಿಚಾರದಲ್ಲಿ ಸಂತರು ಮಧ್ಯಪ್ರವೇಶಿಸಬಾರದಿತ್ತು. ಇಲ್ಲದಿದ್ದರೆ ರಾಮಮಂದಿರ ಕುರಿತ ಇಂದಿನ ನಿರ್ಣಯಗಳು ಅಂದೇ ಆಗುತ್ತಿತ್ತು ಎಂದ ಅವರು ಆಡಳಿತ ನಡೆಸುವವರಲ್ಲಿ ರಾಜಕೀಯ ನೀತಿಯ ಕೊರತೆ ಎದ್ದು ಕಾಣುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪೇಜಾವರ ಸ್ವಾಮೀಜಿ ಮಾತನಾಡಿ, ಈ ವಿಚಾರದಲ್ಲಿ ನಮಗೆ ಸೀಮಿತ ಅಧಿಕಾರ ಮಾತ್ರ ಇದೆ. ಯಾವುದೇ ನಿರ್ಧಾರ ಕೈಗೊಳ್ಳಲು ನಮಗೆ ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳಬೇಕಾಗಿದೆ. ಸಂತರೆಲ್ಲ ಒಂದಾಗಬೇಕು. ರಾಮಮಂದಿರ ನಿರ್ಮಾಣ ಸಂಕಲ್ಪವನ್ನು ಮಾಡಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಿ ಗೋವರ್ಧನ ಪೀಠದ ಕಿರಿಯ ಯತಿ ನಿರ್ವಿಕಲ್ಪಾನಂದ ಸ್ವಾಮೀಜಿ, ಉಡುಪಿ ಶಾಸಕ ಕೆ.ರಘುಪತಿ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಪುರಿ ಸ್ವಾಮೀಜಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಈ ವೇಳೆ ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಅವರನ್ನು ಸ್ವಾಗತಿಸಿದರು. ನಂತರ ಸ್ವಾಮೀಜಿಯನ್ನು ಶಾಲು ಹೊದಿಸಿ ಗೌರವಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News