ಸಿಂಡಿಕೇಟ್ ಬ್ಯಾಂಕ್ ಉಳಿಸಿ ಆಂದೋಲನ : ಪ್ರತಿಭಟನಾರ್ಥವಾಗಿ ನ.30ರಂದು ರಕ್ತದಾನ ಶಿಬಿರ

Update: 2019-11-28 13:37 GMT

ಉಡುಪಿ, ನ.28: ಸಿಂಡಿಕೇಟ್ ಬ್ಯಾಂಕನ್ನು ವಿಲೀನಗೊಳಿಸುವ ಕುರಿತ ಕೇಂದ್ರ ಸರಕಾರದ ಏಕಪಕ್ಷೀಯ ನಿರ್ಣಯವನ್ನು ವಿರೋಧಿಸಿ ಸಿಂಡಿಕೇಟ್ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಪ್ರತಿಭಟನಾರ್ಥವಾಗಿ ರಕ್ತದಾನ ಶಿಬಿರವನ್ನು ನ.30ರಂದು ಮಣಿಪಾಲದ ಸಿಂಡಿಕೇಟ್ ಹೌಸ್‌ನಲ್ಲಿ ಹಮ್ಮಿಕೊಂಡಿದೆ.

ಪ್ರತಿಭಟನೆಗಳನ್ನು ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡುವ ಬದಲು ಸಿಂಡಿಕೇಟ್ ಬ್ಯಾಂಕಿನ ಗ್ರಾಹಕರ ಗಮನವನ್ನು ಈ ಸಮಸ್ಯೆಯತ್ತ ಸೆಳೆಯುವ ನಿಟ್ಟಿನಲ್ಲಿ ಸಾಮಾಜಿಕ ನೆರವಿನ ಉದ್ದೇಶದ ರಕ್ತದಾನವನ್ನು ಆಯೋಜಿಸುತ್ತಿದ್ದೇವೆ ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಯು.ಶಶಿಧರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಇಂದು ತಿಳಿಸಿದ್ದಾರೆ.

ಬ್ಯಾಂಕ್ ವಿಲೀನಗಳು ತಾತ್ಕಾಲಿಕ ಪರಿಹಾರ ನೀಡಿದೆಯೇ ಹೊರತು ಬ್ಯಾಂಕ್‌ಗಳಲ್ಲಿನ ಕೆಟ್ಟ ಸಾಲ, ಕೆಟ್ಟ ಆಡಳಿತದಂತಹ ಸಮಸ್ಯೆಗಳಿಗೆ ನಿಜವಾದ ಪರಿಹಾರ ಒದಗಿಸಿಲ್ಲ. ವಿಲೀನದ ನಂತರ ಬ್ಯಾಂಕಿನ ಉದ್ದೇಶಗಳು ಅನೈಚ್ಛಿಕ ವಾಗಿ ಬದಲಾಗು ವುದರಿಂದ ಸಾಮಾನ್ಯ ಜನರಿಗೆ ಹಾಗೂ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ನಷ್ಟವಾಗಲಿದೆ ಎಂದು ಅವರು ದೂರಿದರು.

ಬ್ಯಾಂಕ್ ಆಫ್ ಬರೋಡ ಮತ್ತು ವಿಜಯಾ ಬ್ಯಾಂಕ್‌ಗಳ ಸಮಸ್ಯೆಗಳು ವಿಲೀನದ ನಂತರ ಸ್ವಲ್ಪವೂ ಕಡಿಮೆಯಾಗಿಲ್ಲ. ಎರಡು ಬ್ಯಾಂಕ್‌ಗಳ ಶೇರು ದಾರರು ತಮ್ಮ ಹೂಡಿಕೆಯ ಶೇ.25ರಷ್ಟು ಕಳೆದುಕೊಂಡಿದ್ದಾರೆ. ಈ ಉದ್ದೇಶಿತ ವಿಲೀನದ ಮೂರನೆ ಹಂತವೂ ಸಂಪೂರ್ಣ ಅವೈಜ್ಞಾನಿಕವಾಗಿದೆ. ನಿರಂತರ ನಷ್ಟದಲ್ಲಿ ಸಾಗುತ್ತಿರುವ ಬ್ಯಾಂಕ್‌ಗಳು ತಮ್ಮ ಅಸ್ತಿತ್ವವನ್ನು ಕಳೆದು ಕೊಳ್ಳಬೇಕಾಗಿದೆ ಎಂದು ಅವು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಶಂಕರ್ ಕುಂದಾಪುರ, ಸೂರಜ್ ಉಪ್ಪೂರು, ಮಾರಿಯೋ ಮಥಾಯಿಸ್, ಸುಜನ್ ಎಚ್., ನರಸಿಂಹಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News