ಉಡುಪಿ : ಪಟ್ಟಾ ಜಾಗದಲ್ಲಿ ಮರ ತೆಗೆಯಲು ಅನುಮತಿ ಕೋರಿ ಜಿಪಂ ನಿರ್ಣಯ

Update: 2019-11-28 16:22 GMT

ಉಡುಪಿ, ನ.28: ಸಾರ್ವಜನಿಕರು ತಮ್ಮ ಪಟ್ಟಾ ಜಾಗದಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ನೀಡುವ ಕುರಿತಂತೆ ನಿರ್ಣಯ ಮಾಡಿ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಲು ದಿನಕರಬಾಬು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ನಿರ್ಧರಿಸಲಾಯಿತು.

ಪಟ್ಟಾ ಜಾಗದಲ್ಲಿರುವ ಮರಗಳನ್ನು ಕಡಿಯುವ ಕುರಿತಂತೆ ವಿಷಯ ಪ್ರಸ್ತಾಪಿಸಿದ ಸದಸ್ಯೆ ಗೀತಾಂಜಲಿ ಸುವರ್ಣ, ಇತ್ತೀಚೆಗೆ ದೇವಾಲಯಕ್ಕೆ ನೀಡಲು ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿದ್ದ ಮರವನ್ನು ಉಚಿತವಾಗಿ ನೀಡಿದ್ದು, ಈ ಮರ ಕಡಿದ ಬಗ್ಗೆ ಅರಣ್ಯ ಇಲಾಖೆಯಿಂದ ದಂಡ ವಿಧಿಸಿರುವ ಕುರಿತು ತಮ್ಮ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪೂರಕವಾಗಿ ಕಾರ್ಕಳ-ಬೈಲೂರು ರಸ್ತೆಯಲ್ಲಿ ಅಪಾಯಕಾರಿ ಮರಗಳಿದ್ದು, ಇದರಿಂದ ಅಪಘಾತ ಸಂಭವಿಸಿ ಜೀವಹಾನಿ ಯಾಗುವ ಸಾಧ್ಯತೆ ಗಳಿದ್ದರೂ ಇವುಗಳನ್ನು ಈವರೆಗೂ ತೆಗೆಯದ ಅರಣ್ಯ ಇಲಾಖೆಯ ಕಾರ್ಯ ವೈಖರಿ ಬಗ್ಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ದನಿಗೂಡಿಸಿದರು. ಅಪಾಯಕಾರಿ ಮರಗಳನ್ನು ತೆಗೆಯುವ ಕುರಿತಂತೆ ಡಿಎಫ್‌ಓ ಗಮನಕ್ಕೆ ತರುವುದಾಗಿ ಸಿಇಓ ಪ್ರೀತಿ ಗೆಹ್ಲೋಟ್ ನುಡಿದರು. ಪಟ್ಟಾ ಜಾಗದಲ್ಲಿರುವ ಮರಗಳನ್ನು ಕಡಿಯಲು ಅನುಮತಿ ನೀಡುವ ಕುರಿತಂತೆ ನಿರ್ಣಯ ಮಾಡಿ ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಾರಿಗೆ ಸಲ್ಲಿಸಲು ಸಭೆ ತೀರ್ಮಾನಿಸಿತು.

ಕಾರ್ಕಳ ತಾಲೂಕಿನ ರೆಂಜಾಳ ಮತ್ತು ಈದುವಿನಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ಈಗಾಗಲೇ ಸರ್ವೆ ನಡೆಸಿದ್ದು, ಇದುವರೆಗೂ ಹಕ್ಕುಪತ್ರ ನೀಡದ ಬಗ್ಗೆ ಸದಸ್ಯೆ ದಿವ್ಯಶ್ರೀ ಅಮೀನ್ ಆಕ್ಷೇಪ ವ್ಯಕ್ತಪಡಿಸಿದರು. ಈ ಕುರಿತು ಸಂಬಂದಪಟ್ಟ ಅಧಿಕಾರಿಗಳು ಶೀಘ್ರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಇಓ ಸೂಚಿಸಿದು.

ಐಎಸ್‌ಪಿಆರ್‌ಎಲ್ ಯೋಜನೆ ವಿಸ್ತರಣೆ ಕುರಿತಂತೆ ಮಾತನಾಡಿದ ಸದಸ್ಯೆ ಶಿಲ್ಪಾ ಸುವರ್ಣ, ಯೋಜನೆಯ ವಿಸ್ತರಣೆಗೆ ಗ್ರಾಮಸ್ಥರ ವಿರೋಧವಿಲ್ಲ. ಆದರೆ ಪಾದೂರು ಮತ್ತು ಕಳತ್ತೂರಿನಲ್ಲಿ ಭೂವೌಲ್ಯ ಕಡಿಮೆ ಇದ್ದು, ಪಕ್ಕದ ಗ್ರಾಮ ಗಳಲ್ಲಿ ಸುಮಾರು ಐದು ಪಟ್ಟು ಹೆಚ್ಚಿನ ವೌಲ್ಯ ಇದೆ. ಇದರಿಂದಾಗಿ ವಿಸ್ತರಣೆ ಯಿಂದ ಭೂಮಿ ಕಳೆದುಕೊಳ್ಳುವ ರೈತರಿಗೆ ನಷ್ಟವಾಗಲಿದ್ದು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೋರಿದರು. ಇದಕ್ಕೆ ಉತ್ತರಿಸಿದ ಕಾಪು ತಹಶೀಲ್ದಾರ್ ಇಸಾಕ್ ಅವರು ಭೂಮಿಯ ವೌಲ್ಯವನ್ನು ಮೂಲ್ಕಿ ನೊಂದಣಾಧಿಕಾರಿಗಳು ನಿರ್ಧರಿಸ ಬೇಕಿದ್ದು, ಡಿಸೆಂಬರ್‌ನಲ್ಲಿ ಭೂವೌಲ್ಯದ ಪರಿಷ್ಕರಣೆ ನಡೆಯಲಿದೆ ಎಂದರು.

ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಸಂಧ್ಯಾ ಸುರಕ್ಷಾ, ವಿಧವಾ ವೇತನ ವಿತರಣೆಯಲ್ಲಿ ವಿಳಂಬವಾ ಗುತ್ತಿದೆ. ಈ ಬಗ್ಗೆ ಕ್ರಮ ಕೈಗೊ ಳ್ಳುವಂತೆ ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ ತಿಳಿಸಿದರು. ಇದಕ್ಕೆ ಉತ್ತರಿಸಿದ ಬ್ರಹ್ಮಾವರ ತಹಶೀಲ್ದಾರ್ ಕಿರಣ್ ಗೌರಯ್ಯ ಕೆ2 ತಂತ್ರಾಂಶ ಬದಲಾವಣೆ ಯಿಂದ ಸ್ವಲ್ಪ ತೊಂದರೆಯಾಗಿದೆ. ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಯ ಲಿದೆ ಎಂದರು.

ಕೆಲವು ಪಂಚಾಯತ್‌ಗಳಲ್ಲಿ ಕಳೆದ ಬೇಸಿಗೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡಿದವರಿಗೆ ಒಪ್ಪಂದದಂತೆ ಹಣ ಪಾವತಿ ಮಾಡದ ಬಗ್ಗೆ ಸದಸ್ಯ ಸುರೇಶ್ ಬಂಟವಾಡಿ ಆಕ್ಷೇಪ ವ್ಯಕ್ತಪಡಿಸಿದರು. ಗ್ರಾಪಂಗಳು ಒಪ್ಪಂದ ಮಾಡಿಕೊಂಡ ದರದಲ್ಲಿ ಹಣ ಪಾವತಿಸಬೇಕಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಸಿಇಓ ತಿಳಿಸಿದರು.

ಹಾವಂಜೆ ಗ್ರಾಪಂ ವ್ಯಾಪ್ತಿಯಲ್ಲಿ ಜಲಾನಯನ ಕಾಮಗಾರಿಗಳು ಜಲಾನಯನ ಉಪ ಸಮಿತಿಯ ಅನುಮೋದನೆ ಇಲ್ಲದೆ ಅನುಷ್ಠಾನವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಜನಾರ್ದನ ತೋನ್ಸೆ, ಈ ಕುರಿತ ದಾಖಲೆ ಗಳನ್ನು ಒದಗಿಸುವಂತೆ ತಿಳಿಸಿದರು.

ಉತ್ತರಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಲಾನಯನ ಉಪ ಸಮಿತಿಯ ಅನುಮೋದನೆ ಪಡೆದೇ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದ್ದು, ಈ ಬಗ್ಗೆ ಸಂಬಂದ ಪಟ್ಟ ದಾಖೆಗಳನ್ನು ನೀಡುವುದಾಗಿ ತಿಳಿಸಿದರು.

ಹಾವಂಜೆ ಗ್ರಾಪಂ ವ್ಯಾಪ್ತಿಯಲ್ಲಿ ಜಲಾನಯನ ಕಾಮಗಾರಿಗಳು ಜಲಾನಯನ ಉಪ ಸಮಿತಿಯ ಅನುಮೋದನೆ ಇಲ್ಲದೆ ಅನುಷ್ಠಾನವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯ ಜನಾರ್ದನ ತೋನ್ಸೆ, ಈ ಕುರಿತ ದಾಖಲೆ ಗಳನ್ನು ಒದಗಿಸುವಂತೆ ತಿಳಿಸಿದರು.

ಉತ್ತರಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಜಲಾನಯನ ಉಪ ಸಮಿತಿಯ ಅನುಮೋದನೆ ಪಡೆದೇ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿದ್ದು, ಈ ಬಗ್ಗೆ ಸಂಬಂದ ಪಟ್ಟ ದಾಖಲೆಗಳನ್ನು ನೀಡುವುದಾಗಿ ತಿಳಿಸಿದರು. ಕೆಲವು ಪಂಚಾಯತ್‌ಗಳಲ್ಲಿ ಪಿಡಿಓಗಳು ಮತ್ತು ಗ್ರಾಪಂ ಸದಸ್ಯರ ನಡುವೆ ಹೊಂದಾಣಿಕೆ ಇಲ್ಲದ ಬಗ್ಗೆ, ಹಲವು ವರ್ಷಗಳಿಂದ ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ಪಿಡಿಒಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ರಾದ ಪ್ರತಾಪ್ ಹೆಗ್ಡೆ ಮಾರಾಳಿ, ಶೋಭಾ ಜಿ.ಪುತ್ರನ್, ಸುಮಿತ್ ಶೆಟ್ಟಿ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪಕಾರ್ಯದರ್ಶಿಕಿರಣ್ ಪಡ್ನೇಕರ್, ಯೋಜನಾ ನಿರ್ದೇಶಕ ಗುರುದತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News