ಬಿ.ಸಿ.ರೋಡಿನಲ್ಲಿ ಪತ್ರಕರ್ತನಿಗೆ ಹಿಂಟ್ ಆ್ಯಂಡ್ ರನ್ ಪ್ರಕರಣ : ಬಸ್ ಚಾಲಕ ಸೆರೆ

Update: 2019-11-28 18:04 GMT

ಬಂಟ್ವಾಳ, ನ. 28: ತಾಲೂಕಿನ ಬಿ.ಸಿ.ರೋಡಿನಲ್ಲಿ ಪತ್ರಕರ್ತನಿಗೆ ಹಿಂಟ್ ಆ್ಯಂಡ್ ರನ್ ಪ್ರಕರಣದ ಅರಫಾ ಹೆಸರಿನ ಕಂಟ್ರಾಕ್ಟ್ ಕ್ಯಾರೇಜ್ ಬಸ್‍ನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಚಾಲಕನನ್ನು ಬಂಧಿಸಿದ್ದಾರೆ.

ತಾಲೂಕಿನ ಪತ್ರಕರ್ತ, ಮಾಣಿ ಸಮೀಪದ ನೇರಳಕಟ್ಟೆ ನಿವಾಸಿ ಅಬ್ದುಲ್ ಲತೀಫ್ (51) ಅವರು ಬಿ.ಸಿ. ರೋಡಿನ ಹೊಟೇಲ್ ಸತ್ಕಾರ್ ಬಳಿ ಹೆದ್ದಾರಿಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭ ಮಂಗಳೂರಿನಿಂದ ಧಾವಿಸಿ ಬಂದ ಅರಫಾ ಎಂಬ ಹೆಸರಿನ ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್  ಚಾಲಕ ಪ್ರಯಾಣಿಕರನ್ನು ಹತ್ತಿಸುವ ಹಾಗೂ ಇಳಿಸುವ ಧಾವಂತದಲ್ಲಿ ಢಿಕ್ಕಿ ಹೊಡೆದು ಪರಾರಿಯಾಗಿತ್ತು. ಈ ಸಂಬಂಧ ನ. 25ರಂದು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಬಸ್ಸು ಚಾಲಕ-ನಿರ್ವಾಹಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ದೂರು ನೀಡಲಾಗಿತ್ತು.

ಲತೀಫ್ ಅವರ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸರು ಆರೋಪಿತ ಅರಫಾ ಬಸ್ಸಿನ ಚಾಲಕ ಹಾಗೂ ನಿರ್ವಾಹಕರ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಪೊಲೀಸರು ಗುರುವಾರ ಅರಫಾ ಸಿಸಿ ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್ಸುಗಳು ಸಾರಿಗೆ ನಿಯಮಾವಳಿಯಂತೆ ಪರವಾನಿಗೆ ಪಡೆದ ಸ್ಥಳಗಳಲ್ಲಿ ಅಲ್ಲದೆ ದಾರಿ ಮಧ್ಯೆ ಜನರನ್ನು ಹತ್ತಿಸುವಂತೆಯೂ ಇಲ್ಲ, ಇಳಿಸುವಂತೆಯೂ ಇಲ್ಲ. ಮಂಗಳೂರಿನಿಂದ ಜನ ಹತ್ತಿಸಿದ ಬಳಿಕ ನೇರವಾಗಿ ತಮ್ಮ ಪರವಾನಿಗೆಯ ಸ್ಥಳವಾದ ಉಪ್ಪಿನಂಗಡಿ, ಪುತ್ತೂರು, ಧರ್ಮಸ್ಥಳ ಮೊದಲಾದ ನಿರ್ದಿಷ್ಟ ಜಾಗದಲ್ಲಿ ಮಾತ್ರ ನಿಲ್ಲಿಸತಕ್ಕದ್ದು. ನಡುವೆ ನಿಲ್ಲಿಸಿ ಜನ ಹತ್ತಿಸುವುದು ಕಾನೂನು ಬಾಹಿರ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News