ಯುನಿವೆಫ್ ಕುದ್ರೋಳಿ ಶಾಖೆಯಿಂದ ಮೊಹಲ್ಲಾ ಸಭೆ

Update: 2019-11-29 15:02 GMT

ಮಂಗಳೂರು : ಯುನಿವೆಫ್ ಕರ್ನಾಟಕ ನವೆಂಬರ್ 22ರಿಂದ  2020ರ ಜನವರಿ 24ರವರೆಗೆ "ಮಾನವ ಸಂಬಂಧಗಳು ಮತ್ತು ಪ್ರವಾದಿ ಮುಹಮ್ಮದ್ (ಸ)" ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ "ಅರಿಯಿರಿ ಮನುಕುಲದ ಪ್ರವಾದಿಯನ್ನು" ಅಭಿಯಾನದ ಅಂಗವಾಗಿ ಕುದ್ರೋಳಿ ಶಾಖೆ ವತಿಯಿಂದ ಮೊಹಲ್ಲಾ ಸಭೆಯು ಕುದ್ರೋಳಿಯ ಯಾಸೀನ್ ಮಂಡಿ ಬಳಿ ನಡೆಯಿತು.

"ಪ್ರಚಲಿತ ವಿದ್ಯಮಾನ ಮತ್ತು ಪ್ರವಾದಿಯವರ ಬೋಧನೆ" ಎಂಬ ವಿಷಯದಲ್ಲಿ ಸಂಪನ್ಮೂಲ ವ್ಯಕ್ತಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಮಾತಾಡಿ "ಎಲ್ಲಾ ಕಾಲಗಳಲ್ಲೂ ಸತ್ಯ ಪ್ರಬೋಧನೆಗೆ ಅಡ್ಡಿ ಆತಂಕಗಳು ಎದುರಾಗಿದ್ದವು. ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧ ನಡೆಯುವ ಪ್ರಚಲಿತ ವಿದ್ಯಮಾನಗಳು ನಮ್ಮನ್ನು ಸತ್ಯದ ಮಾರ್ಗದಲ್ಲಿ ಇನ್ನಷ್ಟು ಗಟ್ಟಿಗೊಳಿಸಬೇಕೇ ಹೊರತು ನಾವೆಂದೂ ಎದೆಗುಂದಬಾರದು. ಪ್ರವಾದಿ ಮುಹಮ್ಮದ್ (ಸ) ತನ್ನ ಪ್ರವಾದಿತ್ವದ ಆರಂಭದ ಹಂತದಲ್ಲಿ ಧರ್ಮ ಪ್ರಚಾರದ ಮಾರ್ಗದಲ್ಲಿ ಅನುಭವಿಸಿದ ಯಾತನೆಗಳು, ಎದುರಿಸಿದ ಅಡ್ಡಿ ಆತಂಕಗಳು ಅವರನ್ನು ಕುಗ್ಗಿಸದೆ ಅವರ ಸಂಕಲ್ಪವನ್ನು ಇನ್ನಷ್ಟು ಗಟ್ಟಿಗೊಳಿಸಿ ಯಶಸ್ಸಿನ ಹಾದಿಯನ್ನು ಅವರಿಗೆ ಸುಲಭಗೊಳಿಸಿತು. ವಿಶ್ವಾಸ ಮತ್ತು ಐಕ್ಯತೆಯಿಂದ ಸಮಸ್ಯೆಗಳನ್ನು ಎದುರಿಸಲು ಪ್ರವಾದಿಯ ಜೀವನ ನಮಗೆ ಮಾದರಿಯಾಗಬೇಕು" ಎಂದು ಹೇಳಿದರು.

ಯುನಿವೆಫ್ ಕಾರ್ಯದರ್ಶಿ ಯು.ಕೆ. ಖಾಲಿದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮರ್ ಮುಖ್ತಾರ್ ಕಿರ್ ಅತ್ ಪಠಿಸಿದರು. ಕುದ್ರೋಳಿ ಶಾಖಾಧ್ಯಕ್ಷ ಸೈಫುದ್ದೀನ್ ಕುದ್ರೋಳಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಪಾರೆ, ಜಿಲ್ಲಾ ಕಾರ್ಯದರ್ಶಿ ಅಡ್ವೊಕೇಟ್ ಸಿರಾಜುದ್ದೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News