ಟೋಲ್‌ಗೇಟ್‌ನಲ್ಲಿ ಪಿಸ್ತೂಲು ತೋರಿಸಿ ಬೆದರಿಕೆ ಪ್ರಕರಣ : ಆರೋಪಿ ಕಾರು ಚಾಲಕನಿಗೆ ನ್ಯಾಯಾಂಗ ಬಂಧನ

Update: 2019-11-29 16:29 GMT

ಮಂಗಳೂರು, ನ. 29: ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಗುರುವಾರ ಪಿಸ್ತೂಲು ತೋರಿಸಿ ಟೋಲ್ ಸಂಗ್ರಹಕಾರರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ ಆರೋಪಿ ಕೇರಳದ ಕಾಸರಗೋಡ್ ನಿವಾಸಿ ರಫೀಕ್ ಕೆ.ಎನ್.ಪಿ. (36) ನನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ರಫೀಕ್ ಕಾಸರಗೋಡಿನಿಂದ ಬೈಂದೂರಿಗೆ ತನ್ನ ಕಾರಿನಲ್ಲಿ ಒಬ್ಬಂಟಿಯಾಗಿ ಹೊರಟಿದ್ದು, ಮಧ್ಯಾಹ್ನ 2:40ಕ್ಕೆ ಸುರತ್ಕಲ್ ಎನ್‌ಐಟಿಕೆ ಟೋಲ್‌ಗೇಟ್ ತಲುಪಿದ್ದನು. ಅಲ್ಲಿ ಕಾರನ್ನು ಟೋಲ್‌ಗೇಟ್‌ನ ಮಹಿಳಾ ಸಿಬ್ಬಂದಿ ತಡೆದು ನಿಲ್ಲಿಸಿ ಟೋಲ್ ಶುಲ್ಕ ನೀಡುವಂತೆ ಕೇಳಿದಾಗ ಹಣ ನೀಡಲು ನಿರಾಕರಿಸಿ ವಾದ ಮಾಡಲು ಆರಂಭಿಸಿದ್ದ. ಅಷ್ಟರಲ್ಲಿ ಟೋಲ್‌ಗೇಟ್‌ನ ಪುರುಷ ಸಿಬ್ಬಂದಿ ಬಂದು ಟೋಲ್ ಶುಲ್ಕ ಕೊಡುವಂತೆ ಸೂಚಿಸಿದ್ದರು. ಈ ವೇಳೆ ರಫೀಕ್ ತನ್ನ ಕಾರಿನಿಂದ ಪಿಸ್ತೂಲು ತೆಗೆದು ‘ ತಾಕತ್ತಿದ್ದರೆ ತೆಗೆದುಕೋ, ಹತ್ತಿರ ಬಂದರೆ ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿದ್ದನು’ ಎಂದು ಆರೋಪಿಸಲಾಗಿದೆ.

ಟೋಲ್‌ಗೇಟ್ ಸಿಬ್ಬಂದಿ ನೀಡಿದ ದೂರಿನನ್ವಯ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಐಪಿಸಿ 506 (2)(ಜೀವ ಬೆದರಿಕೆ) ಮತ್ತು ಭಾರತೀಯ ಸಶಸ ಕಾಯ್ದೆ ಕಲಂ 25 ರನ್ವಯ ಪ್ರಕರಣ ದಾಖಲಿಸಿ ಆರೋಪಿ ರಫೀಕ್‌ನನ್ನು ಬಂಧಿಸಿ, ಆತನ  ಕಾರು ಮತ್ತು ಪಿಸ್ತೂಲನ್ನು ವಶ ಪಡಿಸಿಕೊಳ್ಳಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News