ವಸತಿಗಾಗಿ ಪ್ರತೀ ಗ್ರಾಮದಲ್ಲಿ 10 ಎಕರೆ ಜಮೀನು ಕಾಯ್ದಿರಿಸಲು ಸೂಚನೆ

Update: 2019-11-30 15:27 GMT

ಮಂಗಳೂರು, ನ.30: ತಾಲೂಕಿನ ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಬಡವರಿಗೆ ನಿವೇಶನ ನೀಡಲು ಕನಿಷ್ಠ 10 ಎಕರೆ ಜಮೀನು ಗುರುತಿಸಿ ಮುಂದಿನ ಸಭೆಯಲ್ಲಿ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ತಹಶೀಲ್ದಾರರಿಗೆ ಸೂಚಿಸಿದ್ದಾರೆ.

ದ.ಕ. ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಮಂಗಳೂರು ತಾಪಂ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರಕಾರಿ ಜಾಗವನ್ನು ಅತಿಕ್ರಮಣ ಮಾಡುವ ಕೆಲಸ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ನಿವೇಶನರಹಿತರಿಗೆ ಸಮಸ್ಯೆಯಾಗು ತ್ತಿದೆ. ಪ್ರತಿ ಗ್ರಾಮದಲ್ಲಿ ಸರಕಾರಿ ಜಾಗ ಎಷ್ಟಿದೆ ಮತ್ತು ಡೀಮ್ಡ್ ಫಾರೆಸ್ಟ್ ಜಾಗ ಎಷ್ಟಿದೆ ಎಂಬುದನ್ನು ಅಧಿಕಾರಿಗಳು ಗುರುತಿಸ ಬೇಕು ಎಂದು ಉಮನಾಥ ಕೋಟ್ಯಾನ್ ನಿರ್ದೇಶಿಸಿದರು.

ಜಿಪಂ ಸದಸ್ಯ ಜನಾರ್ದನ ಗೌಡ ಮಾತನಾಡಿ, ಮುಚ್ಚೂರು ಸನಿಹದಲ್ಲಿ 17 ಎಕರೆ ನಿವೇಶನ ಕಾಯ್ದಿರಿಸಲಾಗಿದೆ. ಆದರೆ ಇವತ್ತಿನವರೆಗೂ ಅದರ ಗಡಿಗುರುತು, ಸರ್ವೆ ಕೆಲಸ ಆಗಿಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಕೆಲಸ ಕಂದಾಯ ಇಲಾಖೆಯಲ್ಲಿ ವೇಗ ಪಡೆದುಕೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಘನತ್ಯಾಜ್ಯ ಘಟಕಕ್ಕೆ ಜಾಗ ಗುರುತಿಸಿ

ಪ್ರತೀ ಗ್ರಾಮದಲ್ಲಿ ಸ್ಮಶಾನಕ್ಕೆ ಎಷ್ಟು ಜಾಗ ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಬೇಕು. ಗ್ರಾಮವಾರು ಅಥವಾ ಗ್ರಾಪಂ ವ್ಯಾಪ್ತಿಗೊಂದರಂತೆ ಘನತ್ಯಾಜ್ಯ ಘಟಕ ನಿರ್ಮಿಸಲು ಜಾಗ ಗುರುತಿಸಿ ವರದಿ ನೀಡಬೇಕು ಎಂದ ಉಮನಾಥ ಕೋಟ್ಯಾನ್, ಜನಪ್ರತಿನಿಧಿಗಳು ಅಧಿಕಾರಿಗಳಿಗೆ ೆನ್ ಅಥವಾ ಪತ್ರ ಮುಖೇನ ಅಗತ್ಯ ಕೆಲಸಗಳ ಬಗ್ಗೆ ಬರೆದರೆ ಅದಕ್ಕೆ ಉತ್ತರಿಸದೆ ಸುಮ್ಮನಿ ರಬಾರದು. ಅಗತ್ಯವಾಗಿ ಹಿಂಬರಹ ಕಳುಹಿಸಬೇಕು ಎಂದು ಸೂಚಿಸಿದರು.

30,709 ಮಂದಿಯ ಹೆಸರು ರದ್ದು

ಮಂಗಳೂರಿನಲ್ಲಿ 2017-18ನೇ ಸಾಲಿನಲ್ಲಿ ಪಡಿತರ ಚೀಟಿಗೆ ಆಧಾರ್ ಲಿಂಕ್ ಮಾಡದ 30,709 ಮಂದಿಯನ್ನು ಪಡಿತರ ಚೀಟಿಯಿಂದ ಹೆಸರು ತೆಗೆಯಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಎರಡು ಕಡೆ ಅರ್ಜಿ

ಉಜ್ವಲ ಯೋಜನೆಯಡಿ ಕೆಲವರು ಎರಡೆರಡು ಕಡೆಗಳಲ್ಲಿ ಅರ್ಜಿ ಹಾಕಿದ್ದಾರೆ. ಎರಡು ಕಡೆಯೂ ದಾಖಲಾಗಿರುವುದರಿಂದ ಉಜ್ವಲ ಯೋಜನೆಯ ಪ್ರಯೋಜನ ಪಡೆಯಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇದನ್ನು ಪರಿಹರಿಸಲು ಅಧಿಕಾರಿಗಳು ಗಮನ ಹರಿಸಬೇಕು ಎಂದು ಜಿಪಂ ಸದಸ್ಯ ವಿನೋದ್‌ಕುಮಾರ್ ಬೊಳ್ಳೂರು ಹೇಳಿದರು. ಇದಕ್ಕೆ ಉತ್ತರಿಸಿದ ಆಹಾರ ಇಲಾಖೆ ಅಧಿಕಾರಿಗಳು, ಇದು ಗ್ಯಾಸ್ ಏಜೆನ್ಸಿಗಳ ವ್ಯಾಪ್ತಿಗೆ ಬರುತ್ತದೆ. ಇಲಾಖೆ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

44 ಹೆಕ್ಟೇರ್ ಜಾಗಕ್ಕೆ ಹಾನಿ

ಈ ಬಾರಿ ಮಳೆಗಾಲದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ, ಕೊಳೆರೋಗ, ಬೆಳೆ ಹಾನಿಗೆ ಸಂಬಂಧಿಸಿದಂತೆ 44 ಹೆಕ್ಟೇರ್‌ನಷ್ಟು ಜಾಗಕ್ಕೆ ಹಾನಿಯಾಗಿದೆ. ಈ ಬಗ್ಗೆ ಶಿಾರಸ್ಸು ಮಾಡಿ ತಹಶೀಲ್ದಾರರಿಗೆ ನೀಡಲಾಗಿದೆ. ಶೀಘ್ರ ಸಂತ್ರಸ್ತರಿಗೆ ಅನುದಾನ ಬರಲಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾಲೂಕಿನಲ್ಲಿರುವ ಬಿಸಿಎಂ ಹಾಸ್ಟೆಲ್‌ಗಳಿಗೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ಕೆಲಸ ಕಾರ್ಯ, ವಿದ್ಯಾರ್ಥಿಗಳ ಚಲನವಲನಗಳ ಬಗ್ಗೆ ಪರಿಶೀಲಿಸುತ್ತಿರಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಸೂಚಿಸಿದರು.

ತಾಲೂಕು ಪಶು ಸಂಗೋಪನಾ ಇಲಾಖೆಯಡಿ 35 ಪಶು ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳಿದ್ದು, ಸಿಬಂದಿ ಕೊರತೆ ಇದೆ. ಮಂಜೂರಾದ 130 ಹುದ್ದೆಗಳ ಪೈಕಿ 5 ಮುಖ್ಯ ಪಶುವೈದ್ಯಾಧಿಕಾರಿ, 5 ಹಿರಿಯ ಪಶು ವೈದ್ಯಾಧಿಕಾರಿ ಸಹಿತ 95 ಹುದ್ದೆ ಖಾಲಿ ಇದೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಗಮನ ಸೆಳೆದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಪಂ ಇಒ ಸದಾನಂದ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News