​ಡಿ.3: ಸಾಲ ವಸೂಲಿ ನೆಪದಲ್ಲಿ ಹಿಂಸೆ ವಿರೋಧಿಸಿ ಪ್ರತಿಭಟನೆ

Update: 2019-11-30 16:54 GMT

ಉಡುಪಿ, ನ.30: ಬಡ ಮಹಿಳೆಯರನ್ನು ಮೈಕ್ರೋ ಫೈನಾನ್ಸ್ ಸಾಲ ವಸೂಲಿ ನೆಪದಲ್ಲಿ ಬೆದರಿಸುವ ಮತ್ತು ಹಿಂಸಿಸುವುದರ ವಿರುದ್ಧ ಕಾರ್ಕಳ ತಾಲೂಕು ಋಣಮುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಡಿ.3ರಂದು ಬೆಳಗ್ಗೆ 10ಗಂಟೆಗೆ ಕಾರ್ಕಳದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಧಾನ ಸಂಚಾಲಕ ಸುನೀಲ್ ಹೆಗ್ಡೆ ಬೈಲೂರು, ಬೆಳಗ್ಗೆ 10ಗಂಟೆಗೆ ಸಾಲ ಸಂತ್ರಸ್ತರು ಕಾರ್ಕಳ ಅನಂತಶಯನ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಬಂಡಿಮಠ ಬಸ್ ನಿಲ್ದಾಣದಲ್ಲಿ ಸಭೆ ನಡೆಸಲಿರುವರು. ಬಳಿಕ ತಹಶೀಲ್ದಾರ್ ಹಾಗೂ ಕಾರ್ಕಳ ಶಾಸಕರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಬಡ ಮಹಿಳೆಯರ ಮನೆಗೆ ಬಂದು ದುಬಾರಿ ಬಡ್ಡಿ ವಿಧಿಸಿ ಆಧಾರ ರಹಿತ ವಾಗಿ ಕೈ ಸಾಲದ ರೂಪದಲ್ಲಿ ಸಾಲ ನೀಡಿ ಇದೀಗ ದೌರ್ಜನ್ಯ ಎಸಗುವ ಮೈಕ್ರೋ ಫೈನಾನ್ಸ್‌ಗಳ ಕಾನೂನು ಬಾಹಿರ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿ ದರದಲ್ಲಿ, ಆಧಾರ ಕಾರ್ಡ್‌ನ ಆಧಾರದಲ್ಲಿ ಸಾಲ ಒದಗಿಸಬೇಕು. ಋಣಮುಕ್ತ ಕಾಯಿದೆಯಡಿ ಬಡ ಮಹಿಳೆಯರ ಮೈಕ್ರೋ ಫೈನಾನ್ಸ್‌ಗಳ ಸಾಲವನ್ನು ಪೂರ್ತಿ ಮನ್ನಾ ಮಾಡಿ ಋಣಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಅಧ್ಯಕ್ಷ ಮಂಜುನಾಥ ಬೈಲೂರು, ಕಾರ್ಯದರ್ಶಿ ಸುಕೇಶ್ ಬೈಲೂರು, ಮಹಿಳಾ ಸಂಚಾಲಕಿ ರಾಜೀವಿ, ವಲಯ ಅಧ್ಯಕ್ಷ ವಿತೇಶ್ ಬಜಗೋಳಿ, ಸಹ ಸಂಚಾಲಕ ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News