ವರ್ಷಕ್ಕೊಮ್ಮೆ ಪೊಲೀಸರ ಆರೋಗ್ಯ ತಪಾಸಣೆ: ಎಸ್ಪಿ ನಿಶಾ ಜೇಮ್ಸ್

Update: 2019-12-01 14:28 GMT

ಉಡುಪಿ, ಡಿ.1: ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಕೆಲಸದ ಒತ್ತಡದ ಮಧ್ಯೆ ಪೊಲೀಸರಿಗೆ ತಮ್ಮ ಕುಟುಂಬ ಹಾಗೂ ಆರೋಗ್ಯದ ಬಗ್ಗೆ ಗಮನ ಕೊಡಲು ಸಾಧ್ಯವಾಗು ತ್ತಿಲ್ಲ. ಈ ನಿಟ್ಟಿನಲ್ಲಿ ವರ್ಷಕ್ಕೊಮ್ಮೆ ಪೊಲೀಸರ ಆರೋಗ್ಯ ತಪಾಸಣೆ ನಡೆಸಲು ಗೃಹ ಇಲಾಖೆ ಕ್ರಮ ಕೈಗೊಂಡಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ.

ಉಡುಪಿ ಆದರ್ಶ ಆಸ್ಪತ್ರೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರಿಗೆ ರವಿವಾರ ಆಸ್ಪತ್ರೆಯಲ್ಲಿ ಏರ್ಪಡಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆರೋಗ್ಯದ ಬಗ್ಗೆ ಸಿಬ್ಬಂದಿಗಳ ನಿರ್ಲಕ್ಷದಿಂದ ಸಾಕಷ್ಟು ದುಷ್ಪರಿಣಾಮಗಳು ಬೀರುತ್ತಿವೆ. ಇದರಿಂದ ಕರ್ತವ್ಯ ನಿರ್ವಹಿಸುವ ವೇಳೆ ಹಲವು ಅವಘಡಗಳು ಸಂಭವಿಸಿರುತ್ತದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇಲಾಖೆ ಯಿಂದಲೇ ಪೊಲೀಸರ ಆರೋಗ್ಯ ತಪಾಸಣೆ ಕೆಲಸ ಮಾಡಲಾಗುವುದು. ಪೊಲೀಸರು ನಿಯಮಿತ ಆಹಾರ ಸೇವನೆ ಮತ್ತು ವ್ಯಾಯಾಮ ಮಾಡುವ ಮೂಲಕ ಉತ್ತಮ ಆರೋಗ್ಯವನ್ನು ಕಾಪಾಡಬೇಕು ಎಂದರು.

ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿ, ಒತ್ತಡ, ಬದಲಾದ ಜೀವನ ಶೈಲಿ, ಆಹಾರ ಪದ್ಧತಿಯಿಂದ ಶೇ. 18 ರಿಂದ 25ರಷ್ಟು ಮಂದಿಗೆ ರಕ್ತದೊತ್ತಡ ಸಮಸ್ಯೆ ಕಂಡುಬರುತ್ತದೆ. ಇದರಲ್ಲಿ ಹೆಚ್ಚಿನವರಿಗೆ ಕಾಯಿಲೆಯ ಯಾವುದೇ ಕುರುಹುಗಳು ಇಲ್ಲದೇ ಅವಘಡಗಳು ಸಂಭವಿಸುತ್ತವೆ. ಆದುದರಿಂದ 30 ವರ್ಷದ ಬಳಿಕ ವರ್ಷಕ್ಕೆ 2 ಬಾರಿ ರಕ್ತ ಪರೀಕ್ಷೆ ನಡೆಸಿ ಆರೋಗ್ಯ ಕಾಳಜಿ ವಹಿಸಬೇಕು ಎಂದು ತಿಳಿಸಿದರು.

ದೇಶದಲ್ಲಿ ಶೇ.8ರಿಂದ 10ರಷ್ಟು ಮಂದಿ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಸ್ತೆ ಅಪಘಾತ ಬಿಟ್ಟರೆ ನಂತರ ಅತ್ಯಂತ ಹೆಚ್ಚು ಅಂಗಾಂಗ ಗಳನ್ನು ತೆಗೆಯುವುದು ಸಕ್ಕರೆ ಕಾಯಿಲೆಯಿಂದ. ಇಲ್ಲಿ ನಿಯಮಿತ ಆರೋಗ್ಯ ಕಾಳಜಿ ಮಾಡಿದರೆ ಇಂತಹ ಅವಘಡಗಳಿಗೆ ಕಡಿವಾಣ ಹಾಕಬಹುದು. ಶೇ.30ರಷ್ಟು ಜನರಿಗೆ ಹೆಚ್ಚಿನ ತೂಕದಿಂದ ಅನೇಕ ಕಾಯಿಲೆಗಳು ಬರುತ್ತಿವೆ ಎಂದರು.

ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಪ್ರೊ.ಎ.ರಾಜಾ, ಹೆರಿಗೆ ಮತ್ತು ಸೀರೋಗ ತಜ್ಞ ಡಾ.ಎಂ.ಎಸ್.ಉರಾಳ, ಮೂಳೆ ತಜ್ಞ ಡಾ.ಮೋಹನ್‌ದಾಸ್ ಶೆಟ್ಟಿ, ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಮಲಾ ಚಂದ್ರಶೇಖರ್ ಉಪಸ್ಥಿತರಿದ್ದರು. ಡಿಯಾಗೋ ಕ್ವಾಡ್ರಸ್ ಕಾರ್.ಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News