ಆರೋಗ್ಯವಂತ ಮಕ್ಕಳಿಂದ ದೇಶದ ಅಭಿವೃದ್ಧಿ: ಶೀಲಾ ಕೆ.ಶೆಟ್ಟಿ

Update: 2019-12-02 14:35 GMT

ಉಡುಪಿ, ಡಿ.2: ಇಂದಿನ ಮಕ್ಕಳು ಮುಂದಿನ ಭವ್ಯ ಭಾರತದ ಬುನಾದಿ ಗಳು. ಭಾರತದ ಮುಂದಿನ ಪೀಳಿಗೆ ಅನಾರೋಗ್ಯ ಪೀಡಿತರಾದರೆ ಭಾರತದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ಹೀಗಾಗಿ ತಾಯಿ ಹಾಗೂ ಮಕ್ಕಳ ಆರೋಗ್ಯ ದೃಷ್ಠಿಯಿಂದ ಎಲ್ಲರೂ ತಮ್ಮ ಮನೆಯಲ್ಲಿ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಪಂ ಉಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಹೇಳಿದ್ದಾರೆ.

 ಸೋಮವಾರನಗರದ ಬೀಡಿನಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಉಡುಪಿ, ರೋಟರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತೀವ್ರತರ ಮಿಷನ್ ಇಂದ್ರಧನುಷ್ 2.0 ಹಾಗೂ ಡೆಂಗ್ ಮತ್ತು ಚಿಕನ್‌ಗುನ್ಯ ರೋಗ ನಿಯಂತ್ರಣದ ಬಗ್ಗೆ ಮುಂದಿನ ಜನವರಿವರೆಗೆ ನಾಗರಿಕರಿಗೆ ಒಂದು ಸವಾಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ವೈದ್ಯ ವಿಜ್ಞಾನ ಎಷ್ಟು ಅಭಿವೃದ್ಧಿ ಹೊಂದಿದೆಯೋ, ರೋಗಗಳು ಅಷ್ಟೇ ತೀವ್ರಗೊಳ್ಳುತ್ತಿವೆ. ಜೀವನದಲ್ಲಿ ಎಲ್ಲದಕ್ಕಿಂತಲೂ ಆರೋಗ್ಯ ಬಹು ಮುಖ್ಯ. ಮಕ್ಕಳು ಆರೋಗ್ಯವಂತರಾಗಿದ್ದರೆ ಎಲ್ಲರಿಗೂ ನೆಮ್ಮದಿ. ಹೀಗಾಗಿ ಆರೋಗ್ಯ ದೃಷ್ಠಿಯಿಂದ ತಾಯಿ ಮಕ್ಕಳನ್ನು ಬಹಳ ಜಾಗೃತೆಯಿಂದ ನೋಡಿಕೊಂಡು, ದೇಶಕ್ಕೆ ಉತ್ತಮ, ಆರೋಗ್ಯವಂತ ಮಕ್ಕಳನ್ನು ನೀಡುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.

ಸೊಳ್ಳೆಯಿಂದ ಹರಡುವ ಡೆಂಗ್, ಚಿಕನ್‌ಗುನ್ಯಗಳಂತ ಮಾರಕ ಕಾಯಿಲೆ ಗಳನ್ನು ಹೊಡೆದೋಡಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹಾಗೂ ಆಶಾ ಕಾರ್ಯಕರ್ತೆಯರು ಶ್ರಮ ವಹಿಸುತಿದ್ದಾರೆ. ಈ ಕಾರ್ಯಕ್ಕೆ ಎ್ಲರೂ ಕೈ ಜೋಡಿಸಿ ಕಾಯಿಲೆಗಳನ್ನು ಬುಡದಿಂದಲೇ ನಾಶಪಡಿಸಬೇಕು ಎಂದರು.

ಜಿಪಂನ ಸಿಇಓ ಪ್ರೀತಿ ಗೆಹ್ಲೋಟ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಾಯಿ-ಶಿಶು ಮರಣ ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಯಿಂದ ಅತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ತೀವ್ರತರ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು 4 ತಿಂಗಳಿನಲ್ಲಿ 4 ಹಂತಗಳಲ್ಲಿ ಜಿಲ್ಲೆಯ ಎಲ್ಲೆಡೆ ನಡೆಸಲಾಗುತ್ತಿದೆ ಎಂದು ವಿವರಿಸಿದರು. ಈ ಲಸಿಕಾ ಕಾರ್ಯಕ್ರಮದ ಬಗ್ಗೆ ಈಗಾಗಲೇ ಇದರ ಪ್ರಯೋಜನ ಪಡೆದಿರುವ ತಾಯಂದಿರು ಇತರರಿಗೆ ತಿಳಿ ಹೇಳಿ, ಕಾರ್ಯಕ್ರಮ ಶೇ.100 ಯಶಸ್ವಿಯಾಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಡೆಂಗ್ ಮತ್ತು ಚಿಕನ್‌ಗುನ್ಯ ರೋಗವನ್ನು ತಡೆಗಟ್ಟಿರಿ ಎಂಬ ಕರಪತ್ರವನ್ನು ಜಿಪಂ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಬಿಡುಗಡೆ ಮಾಡಿದರು. ಹಾಗೂ ಸೊಳ್ಳೆ ಪರದೆಗಳನ್ನು ನಗರಸಭ ಸದಸ್ಯೆ ರಜನಿ ಹೆಬ್ಬಾರ್ ವಿತರಿಸಿದರು.

ಕಾರ್ಯಕ್ರಮದಲ್ಲಿ ಡಿಎಚ್‌ಓ ಡಾ.ಸುಧೀರ್‌ಚಂದ್ರ ಸೂಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸ್ಸಿ ಗೊನ್ಸಾಲ್ವಿಸ್, ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಸ್ವಾಗತಿಸಿ ದರು. ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮರಾವ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ರೋಟರಿ ಕ್ಲಬ್‌ನ ರಾಮಚಂದ್ರ ಉಪಾಧ್ಯಾಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News