ಮಂಗಳೂರು : ನಾಪತ್ತೆಯಾದ ವಿದ್ಯಾರ್ಥಿನಿ ಮುಂಬೈನಲ್ಲಿ ಪತ್ತೆ
ಮಂಗಳೂರು, ಡಿ.3: ನಗರದ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ನಾಪತ್ತೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮಂಗಳವಾರ ಬೆಳಗ್ಗೆ ಮರಳಿ ನಗರಕ್ಕೆ ಆಗಮಿಸಿದ್ದಾಳೆ.
ಕುಲಶೇಖರ ಪದವು ಗ್ರಾಮ ನಿವಾಸಿ ನಾಪತ್ತೆಯಾಗಿದ್ದ ವಿದ್ಯಾರ್ಥಿನಿ.
ವಿದ್ಯಾರ್ಥಿನಿ ನಗರದ ಕಾಲೇಜೊಂದರಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದು ನ.30ರಂದು ಸಂಜೆ 4 ಗಂಟೆಗೆ ಕಾಲೇಜಿನ ವಾರ್ಷಿಕೋತ್ಸವಕ್ಕೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋದಾಕೆ ರಾತ್ರಿಯಾದರೂ ಮನೆಗೆ ಬರಲಿಲ್ಲ. ಕಾಲೇಜು, ನಗರದಲ್ಲಿ ಹುಡುಕಾಡಿದರೂ ಯಾವುದೇ ಸುಳಿವು ಸಿಗಲಿಲ್ಲ. ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದು ವಾರ್ಷಿಕೋತ್ಸವಕ್ಕೆ ಹೋದ ಆಕೆಯನ್ನು ಯಾರೋ ಅಪಹರಿಸಿರುವ ಸಾಧ್ಯತೆಯಿದೆ ಎಂದು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರ ತನಿಖೆ ಚುರುಕು: ವಿದ್ಯಾರ್ಥಿನಿ ನಾಪತ್ತೆಯನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸರು ತನಿಖೆ ಚುರುಕು ಗೊಳಿದ್ದರು. ಆಕೆ ಮುಂಬೈಗೆ ತೆರಳಿರುವ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಮುಂಬೈಗೆ ತೆರಳಿದ ಪೊಲೀಸರು ಆಕೆಯನ್ನು ಮರಳಿ ನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ವಿದ್ಯಾರ್ಥಿನಿ ವೈಯಕ್ತಿಕ ಕಾರಣದಿಂದ ಬೇಸತ್ತು ಮುಂಬೈಗೆ ತೆರಳಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾಳೆ.
ಪೊಲೀಸರು ವಿಚಾರಣೆ ನಡೆಸಿದ ಬಳಿಕ ವಿದ್ಯಾರ್ಥಿನಿ ಪೋಷಕರ ಜತೆ ಮನೆಗೆ ತೆರಳಿದ್ದಾಳೆ.