​ಸುರತ್ಕಲ್ ಯುವಕನ ಹತ್ಯೆ ಪ್ರಕರಣ: ಮತ್ತೆ ಐವರು ವಶಕ್ಕೆ

Update: 2019-12-04 16:24 GMT

ಮಂಗಳೂರು, ಡಿ.4: ನಗರದ ಹೊರವಲಯ ಸುರತ್ಕಲ್‌ನಲ್ಲಿನ ಬಾರ್‌ವೊಂದರಲ್ಲಿ ಯುವಕನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರು ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.

ಸ್ಥಳೀಯ ನಿವಾಸಿಗಳಾದ ಮನೋಜ್ ಯಾನೆ ಮನು (40), ಶರತ್ ಯಾನೆ ಮುನ್ನಾ (35), ಪ್ರವೀಣ್ ಕುಂದರ್ (42), ದೀಪಕ್ ರಾಜ್ (33), ಮಿಥುನ್ (40) ವಶಕ್ಕೆ ಪಡೆದ ಆರೋಪಿಗಳು. ಘಟನೆ ನಡೆದ ಮರುದಿನ ಮೂವರನ್ನು ವಶಕ್ಕೆ ಪಡೆಯಲಾಗಿತ್ತು.

ಪ್ರಕರಣ ವಿವರ

ಮಂಗಳೂರು ನಗರದ ಹೊರವಲಯ ಸುರತ್ಕಲ್‌ನಲ್ಲಿನ ಬಾರ್‌ನಲ್ಲಿ ನ.29ರಂದು ರಾತ್ರಿ 10:40ಕ್ಕೆ ಗುಡ್ಡೆಕೊಪ್ಲದ ಸಂದೇಶ್ (30)ನನ್ನು ಹತ್ಯೆ ಮಾಡಲಾಗಿತ್ತು. ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಸಂದೇಶ್, ಶಬರಿಮಲೆಗೆ ತೆರಳಿ ನ.28ರಂದು ವಾಪಸಾಗಿದ್ದ. ಮರುದಿನ ರಾತ್ರಿ ಸುರತ್ಕಲ್ ಜಂಕ್ಷನ್ ಸಮೀಪದ ಖಾಸಗಿ ಬಾರ್ ಮುಂಭಾಗ ತನ್ನ ಸ್ನೇಹಿತರನ್ನು ಭೇಟಿಯಾಗಲು ಸಂದೇಶ ತೆರಳಿದ್ದ. ನವರಾತ್ರಿ ಸಮಯದಲ್ಲಿ ಹುಲಿವೇಷ ಹಾಕುವ ತಂಡವನ್ನು ಮುನ್ನಡೆಸುವ ವಿಚಾರವಾಗಿ ಗೆಳೆಯರ ನಡುವೆ ಈ ಹಿಂದೆ ಗಲಾಟೆಯೂ ಆಗಿತ್ತು. ಹಾಗಾಗಿ ಗೆಳೆತನದಲ್ಲಿ ಬಿರುಕು ಮೂಡಿತ್ತು. ಮಾತಿನ ಚಕಮಕಿಯಲ್ಲಿ ಇದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು. ಕುಡಿದ ಮತ್ತಿನಲ್ಲಿದ್ದ ಆರೋಪಿಗಳು, ಬಾರ್‌ನ ಬಾಗಿಲಿನ ಒಳ ಚಿಲಕ ಹಾಕಿ ಸಂದೇಶ್‌ನನ್ನು ಮಾರಕ ಆಯುಧಗಳಿಂದ ಬರ್ಬರವಾಗಿ ಕೊಚ್ಚಿ ಹಾಕಿದ್ದರು ಎಂದು ದೂರಲಾಗಿದೆ.

ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News