ಉಡುಪಿ ಜಿಲ್ಲೆಯ 23 ದೇವಾಲಯಗಳಲ್ಲಿ ಸಾಮೂಹಿಕ ವಿವಾಹ

Update: 2019-12-05 15:08 GMT

ಉಡುಪಿ, ಡಿ.5: ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಒಟ್ಟು 23 ‘ಎ’ ದರ್ಜೆಯ ದೇವಾಲಯಗಳಲ್ಲಿ 2020ರ ಎ.26ರಂದು ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ರಾಜ್ಯ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಇಂದು ಮಣಿಪಾಲದ ಉಡುಪಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉಡುಪಿ ಜಿಲ್ಲೆಯ ಎ ವರ್ಗದ ದೇವಾಲಯಗಳಲ್ಲಿ ಸಾಮೂಹಿಕ ವಿವಾಹ ನಡೆಸುವ ಕುರಿತಂತೆ ಕರೆದ ವಿವಿಧ ದೇವಾಲಯಗಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವವರು ದೇವಾಲಯದ ಕಚೇರಿ ಯಿಂದ ಅರ್ಜಿ ಪಡೆದು, ಮಾ.27ರ ಒಳಗೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಹೆಸರು ನೊಂದಾಯಿಸಿಕೊಳ್ಳಬೇಕು. ಮಾ.27ರಂದು ವಧು-ವರರ ವಿವರಗಳನ್ನು ನೊಂದಾಯಿಸಿಕೊಳ್ಳಲು ಕಡೆಯ ದಿನವಾಗಿದೆ. ಎ.1ರಂದು ನೊಂದಾಯಿಸಿಕೊಂಡ ವಧು-ವರರ ವಿವರಗಳನ್ನು ಆಯಾ ದೇವಾಲಯಗಳಲ್ಲಿ ಪ್ರಕಟಿಸಲಾಗುವುದು. ಎ.6 ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನವಾಗಿದ್ದು, ಎ.11ರಂದು ವಧು-ವರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು. ಸಾಮೂಹಿಕ ವಿವಾಹದಲ್ಲಿ ಅಪ್ರಾಪ್ತರ ಹಾಗೂ 2ನೇ ವಿವಾಹ ನಿಷಿದ್ಧವಾಗಿದೆ ಎಂದರು.

ವಿವಾಹವಾಗುವ ದಂಪತಿಗಳಿಗೆ ಎಪಿಎಲ್, ಬಿಪಿಎಲ್ ಎಂಬ ಮಾನದಂಡ ಇರುವುದಿಲ್ಲ ಎಂದ ಸಚಿವರು, ಈ ಸಂದರ್ಭದಲ್ಲಿ ವಧು-ವರನಿಗೆ ಸರಕಾರದ ವತಿಯಿಂದ ನೀಡಲಾಗುವ ವಿವಿಧ ಸೌಲಭ್ಯಗಳನ್ನು ವಿವರಿಸಿದರು. ವಿವಾಹ ನಡೆಯುವ ಸ್ಥಳದಲ್ಲೇ ವಿವಾಹ ನೊಂದಣಾಧಿಕಾರಿಗಳಿಂದ ‘ವಿವಾಹ ನೊಂದಣಿ’ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಬಾಂಡ್ ವಿತರಣೆ ಸಹ ನಡೆಯಲಿದೆ ಎಂದು ತಿಳಿಸಿದರು.

ಕೊಲ್ಲೂರು ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಗಿಂತ ಹೊರ ರಾಜ್ಯ (ಕೇರಳ) ದಿಂದ ಬಂದು ಮದುವೆಯಾಗುವವರ ಸಂಖ್ಯೆ ಹೆಚ್ಚಾಗಿದ್ದು, ಅವರ ಸಂಪ್ರದಾಯಕ್ಕೆ ತಕ್ಕಂತೆ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗಲು ಪ್ರೇರೇಪಿಸು ವಂತೆ ದೇವಸ್ಥಾದ ಆಡಳಿತ ಮಂಡಳಿಗೆ ಸೂಚಿಸಿದರು.

ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ನಡೆಸಲು ಅಸಾಧ್ಯವಾದಲ್ಲಿ ಸರಕಾರದ ಅನುಮತಿ ಮೇರೆಗೆ ಸಮೀಪದ ದೇವಸ್ಥಾನದಲ್ಲಿ ನಡೆಸುವಂತಾಗ ಬೇಕು. ಹಾಗೂ ಮದುವೆ ಖರ್ಚು ಭರಿಸಲು ದೇವಾಲಯ ಮಂಡಳಿ ಅಶಕ್ತ ವಾಗಿದ್ದಲ್ಲಿ ಸರಕಾರದಿಂದ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗುತ್ತದೆ ಎಂದರು.

ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಯಶಸ್ವಿಯಾಗಿಸಲು ಜಿಲ್ಲೆಯ ಸರಕಾರಿ ಇಲಾಖೆ, ದೇವಸ್ಥಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಫಲಕ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವಂತೆ ಸೂಚಿಸಿದ ಅವರು, ಸರಕಾರಿ ಹಾಗೂ ದೇವಸ್ಥಾನದ ವೆಬ್‌ಸೈಟ್ ಹಾಗೂ ಸೂಚನಾ ಫಲಕಗಳಲ್ಲಿ ವಿಚಾರಗಳನು್ನ ಪ್ರಚಾರ ಪಡಿಸುವಂತೆ ತಿಳಿಸಿದರು.

ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಜಿಲ್ಲೆಯ ಸಾರ್ವಜನಿಕರು, ಉಡುಪಿ ಜಿಲ್ಲೆಯ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರ ಕಚೇರಿ (ದೂರವಾಣಿ:0820- 2575660)ಯನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಸಭೆಯಲ್ಲಿ ಉಡುಪಿ ಶಾಸಕ ರಘುಪತಿ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಎಲ್ಲಾ ತಾಲೂಕುಗಳ ತಹಶೀಲ್ದಾರರು, ವಿವಿಧ ದೇವಾಲಯಗಳ ಆಡಳಿತ ಮೊಕ್ತೇಸರರು, ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಉಡುಪಿ: ಸಾಮೂಹಿಕ ವಿವಾಹ ನಡೆಯುವ 23 ದೇವಾಲಯಗಳು

ಶ್ರೀಮೂಕಾಂಬಿಕಾ ದೇವಾಲಯ ಕೊಲ್ಲೂರು (ಬೈಂದೂರು ತಾಲೂಕು), ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಾಲಯ ಚಿತ್ತೂರು (ಕುಂದಾಪುರ), ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಾಲಯ ಕಮಲಶಿಲೆ (ಕುಂದಾಪುರ), ಶ್ರೀಜನಾರ್ದನ ಮತ್ತು ಮಹಾಕಾಳಿ ದೇವಾಲಯ ಅಂಬಲಪಾಡಿ (ಉಡುಪಿ) ಶ್ರೀಅನಂತೇಶ್ವರ ಮತ್ತು ಚಂದ್ರವೌಳೀಶ್ವರ ದೇವಾಲಯ ಉಡುಪಿ, ಶ್ರೀ ಹೊಸ ಮಾರಿಗುಡಿ ದೇವಾಲಯ ಕಾಪು, ಶ್ರೀಅನಂತಪದ್ಮನಾಭ ದೇವಾಲಯ ಪೆರ್ಡೂರು (ಉಡುಪಿ), ಶ್ರೀದುರ್ಗಾಪರಮೇಶ್ವರಿ ದೇವಾಲಯ ಮಂದಾರ್ತಿ (ಬ್ರಹ್ಮಾವರ), ಶ್ರೀಮಹಾಲಿಂಗೇಶ್ವರ ದೇವಾಲಯ ಪಡುಬಿದ್ರಿ (ಕಾಪು), ಶ್ರೀಮಹಿಷಮರ್ದಿನಿ ದೇವಾಲಯ ನೀಲಾವರ (ಬ್ರಹ್ಮಾವರ), ಶ್ರೀಅಮೃತೇಶ್ವರಿ ದೇವಾಲಯ ಕೋಟ (ಬ್ರಹ್ಮಾವರ).

ಶ್ರೀವೀರಭದ್ರ ದೇವಾಲಯ ಹಿರಿಯಡ್ಕ (ಉಡುಪಿ), ಶ್ರೀಮಹಿಷಮರ್ದಿನಿ ದೇವಾಲಯ ಕಡಿಯಾಳಿ (ಉಡುಪಿ), ಶ್ರೀದುರ್ಗಾಪರಮೇಶ್ವರಿ ದೇವಾಲಯ ಮುಂಡ್ಕೂರು (ಕಾರ್ಕಳ), ಶ್ರೀಜಯದುರ್ಗಾಪರಮೇಶ್ವರಿ ದೇವಸ್ಥಾನ ಕನ್ನರ್ಪಾಡಿ (ಉಡುಪಿ), ಶ್ರೀಜನಾರ್ದನ ದೇವಸ್ಥಾನ ಕಾಪು, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ನಂದಿಕೂರು (ಕಾಪು), ಗುಡ್ಡೆಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇನಾಪುರ (ಬೈಂದೂರು), ಗುಡ್ಡೆಟ್ಟು ಶ್ರೀ ವಿನಾಯಕ ದೇವಸ್ಥಾನ ಯಡಾಡಿ-ಮತ್ಯಾಡಿ (ಕುಂದಾಪುರ), ಶ್ರೀಶಂಕರನಾರಾಯಣ ದೇವಸ್ಥಾನ ಶಂಕರನಾರಾಯಣ (ಕುಂದಾಪುರ), ಶ್ರೀಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರ (ಕುಂದಾಪುರ), ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಉಪ್ಪುಂದ (ಬೈಂದೂರು), ಶ್ರೀ ಮಾರಿಯಮ್ಮ ದೇವಸ್ಥಾನ ಕಾರ್ಕಳ. ಈ ದೇವಸ್ಥಾನಗಳಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News