ಲಿಂಗ ಸೂಕ್ಷ್ಮತೆ ಕಾರ್ಯಾಗಾರದಲ್ಲಿ ಡಾ. ಹಿಲ್ಡಾ ರಾಯಪ್ಪನ್
ಮಂಗಳೂರು, ಡಿ.5: ನಾಲ್ಕು ಗೋಡೆಗಳ ಮಧ್ಯೆ ಮಹಿಳೆಯರ ಮೇಲಿನ ಹಿಂಸೆ ಹೆಚ್ಚುತ್ತಿದೆ. ಗರ್ಭಪಾತಗಳ ಕಾರಣವನ್ನು ವ್ಯವಸ್ಥಿತವಾಗಿ ದಾಖಲಿಸಿಕೊಳ್ಳಬೇಕು ಎಂಬ ನಿಯಮ ಆಸ್ಪತ್ರೆಗಳಲ್ಲಿ ಕೂಡಾ ಪಾಲನೆಯಾಗುತ್ತಿಲ್ಲ. ದ.ಕ ಜಿಲ್ಲೆಯಲ್ಲಿ ಲಿಂಗಾನುಪಾತ ಪ್ರಮಾಣ ಕುಸಿಯಲು ಕಾರಣವಾಗಿರುವ ಅಂಶಗಳ ಕುರಿತು ವಿವಿಧ ರೀತಿಯ ಸಮೀಕ್ಷೆ, ಅಧ್ಯಯನ ನಡೆಯುತ್ತಿದೆ. ಗ್ರಾಮಗಳಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಜನರು ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪುರುಷರು ಕೂಡ ಸ್ಪಂದಿಸುತ್ತಿದ್ದಾರೆ ಎಂದು ಪ್ರಜ್ಞಾ ಕೌನ್ಸೆಲಿಂಗ್‌ನ ನಿರ್ದೇಶಕಿ ಡಾ. ಹಿಲ್ಡಾ ರಾಯಪ್ಪನ್ ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ‘ಬೇಟಿ ಪಡಾವೋ-ಬೇಟಿ ಬಚಾವೊ’ಯೋಜನೆಯಡಿ ಗುರುವಾರ ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾದ ಲಿಂಗ ಸೂಕ್ಷ್ಮತೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸೆಂಟರ್ ಫಾರ್ ಡೆವಲಪ್‌ಮೆಂಟ್ ಸ್ಟಡೀಸ್ ಆ್ಯಂಡ್ ಎಜುಕೇಶನ್ ನಿರ್ದೇಶಕಿ ಡಾ. ರೀಟಾ ನೊರೋನ್ಹಾ ಮಾತನಾಡಿ, ಲಿಂಗಾನುಪಾತ ಕುಸಿತ ಪುರುಷರ ಮೇಲೆ ಕೂಡ ದುಷ್ಪರಿಣಾಮ ಉಂಟು ಮಾಡುತ್ತದೆ ಎಂಬ ವಿಚಾರ ಹೆಚ್ಚಿನವರಿಗೆ ತಿಳಿದಿಲ್ಲ. ನಮ್ಮ ಸಮಾಜ ಗಂಡು ಮತ್ತು ಹೆಣ್ಣು ಮಕ್ಕಳನ್ನು ಭಿನ್ನ ರೀತಿಯಲ್ಲಿ ಬೆಳೆಸುತ್ತಿದೆ. ಹೆಣ್ಣಿನ ರಕ್ಷಣೆಯನ್ನು ಪುರುಷನೇ ಮಾಡಬೇಕು ಎಂಬುದನ್ನು ಹೇಳಲಾಗುತ್ತದೆಯೇ ಹೊರತು ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯ ಎಂದು ಹೇಳಿಕೊಡುವುದಿಲ್ಲ. ಹೆಣ್ಮಕ್ಕಳ ಮೇಲಿನ ದೌರ್ಜನ್ಯಗಳನ್ನು ಸಿನೆಮಾಗಳಲ್ಲಿಯೂ ವೈಭವೀಕರಿಸಲಾಗುತ್ತಿದೆ. ಸಾಂಪ್ರದಾಯಿಕ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದರು.
ಡೀಡ್ಸ್ ಕದ್ರಿಯ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಮಾತನಾಡಿ ಹೆಣ್ಣು ಮಕ್ಕಳಿಗೆ ಗೌರವ ನೀಡುವುದಕ್ಕಿಂತಲೂ ಅವರನ್ನು ಸಮಾನವಾಗಿ ಕಾಣಬೇಕು. ದ.ಕ ಜಿಲ್ಲೆಯ ಅರ್ಧದಷ್ಟು ಗ್ರಾಮಗಳಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆ ಇದೆ. ಲಿಂಗಾನುಪಾತ ಕುಸಿತಕ್ಕೆ ನಿರ್ದಿಷ್ಟ ಕಾರಣ ಇದುವರೆಗೆ ಗೊತ್ತಾಗಿಲ್ಲ. ಅಧ್ಯಯನಗಳು ನಡೆಯುತ್ತಿವೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ವಂದಿಸಿದರು. ಪತ್ರಕರ್ತ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.