ಬೆಟ್ಟಂಪಾಡಿ: ಕಚ್ಛಾ ಸ್ಫೋಟಕ ತಯಾರಿ ವೇಳೆ ಸ್ಫೋಟ; ನಾಲ್ವರಿಗೆ ಗಾಯ
ಪುತ್ತೂರು, ಡಿ.6: ಮನೆಯೊಳಗಡೆ ಕಚ್ಛಾ ಸ್ಫೋಟಕ ತಯಾರಿಸುತ್ತಿದ್ದ ವೇಳೆಯಲ್ಲಿ ಅದು ಸಿಡಿದು ನಾಲ್ವರು ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ಸರಳಿಕಾನ ಎಂಬಲ್ಲಿ ಗುರುವಾರ ರಾತ್ರಿ ನಡೆದಿರುವುದು ವರದಿಯಾಗಿದೆ. ನಿವಾಸಿ ಕೇಪು ಗೌಡ ಎಂಬವರ ಪುತ್ರ ಬಾಲಕೃಷ್ಣ ಗೌಡ(54) ಎಂಬವರ ಮೆನಯಲ್ಲಿ ಘಟನೆ ಸಂಭವಿಸಿದೆ.
ಬಾಲಕೃಷ್ಣ ಗೌಡ ತಮ್ಮ ಕೃಷಿ ಬೆಳೆಗಳಿಗೆ ಹಾನಿ ಮಾಡುವ ಕಾಡುಪ್ರಾಣಿಗಳನ್ನು ಕೊಲ್ಲಲೆಂದು ಈ ಕಚ್ಛಾ ಸ್ಫೋಟಕಗಳನ್ನು ತಯಾರಿಸುತ್ತಿದ್ದರೆನ್ನಲಾಗಿದೆ. ಸ್ಫೋಟಕ ಸಾಮಗ್ರಿಗಳನ್ನು ತಂದು ತಮ್ಮ ಮನೆಯಲ್ಲಿ ಕಚ್ಛಾ ಸ್ಫೋಟಕಗಳನ್ನು ತಯಾರಿಸುತ್ತಿದ್ದ ವೇಳೆಯಲ್ಲಿ ಅದು ಸಿಡಿದಿದೆ. ಇದರಿಂದ ಬಾಲಕೃಷ್ಣ ಗೌಡ ಗಂಭೀರ ಗಾಯಗೊಂಡಿದ್ದಾರೆ. ಅಲ್ಲದೆ ಬಾಲಕೃಷ್ಣ ಗೌಡರ ನಾದಿನಿ ವೇದಾವತಿ, ಅವರ ಮಕ್ಕಳಾದ ಕಾರ್ತಿಕ್ ಮತ್ತು ಮೋನಿಶಾ ಎಂಬವರಿಗೂ ಗಾಯಗಳಾಗಿವೆ.
ಗಂಭೀರ ಗಾಯಗೊಂಡಿರುವ ಬಾಲಕೃಷ್ಣ ಗೌಡರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.