ಅದಮಾರು ಮಠದ ಪರ್ಯಾಯಕ್ಕೆ ಭತ್ತ ಮುಹೂರ್ತ
ಉಡುಪಿ, ಡಿ.6: 2020ರ ಜನವರಿ 18ರ ಮುಂಜಾನೆ ನಡೆಯುವ ಅದಮಾರು ಮಠದ ಪರ್ಯಾಯಕ್ಕಾಗಿ ನಡೆಯುತ್ತಿರುವ ಪೂರ್ವಭಾವಿ ಸಿದ್ಧತೆಗಳಲ್ಲಿ ನಾಲ್ಕನೇ ಹಾಗೂ ಕೊನೆಯದಾದ ಧಾನ್ಯ (ಭತ್ತ) ಮುಹೂರ್ತ ಶುಕ್ರವಾರ ಬೆಳಗ್ಗೆ ಸಾಂಪ್ರದಾಯಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀಕೃಷ್ಣ ಮಠದ ಬಡು ಮಾಳಿಗೆಯಲ್ಲಿ ಸಂಪನ್ನಗೊಂಡಿತು.
ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಪರ್ಯಾಯ ಮಹೋತ್ಸವಕ್ಕೆ ಒಂದು ವರ್ಷ ಮೊದಲೇ ಆರಂಭಗೊಳ್ಳುವ ಪೂರ್ವಭಾವಿ ಸಿದ್ಧತೆಗಳಲ್ಲಿ ಭತ್ತ ಮುಹೂರ್ತ ನಾಲ್ಕನೇಯದು. ಇದಕ್ಕೆ ಮೊದಲು ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ಹಾಗೂ ಕಟ್ಟಿಗೆ ಮುಹೂರ್ತಗಳು ನಡೆದಿದ್ದವು. ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ನಡೆಯುವ ಅನ್ನ ದಾಸೋಹಕ್ಕೆ ಬೇಕಾದ ಧಾನ್ಯಗಳ ಸಂಗ್ರಹಕ್ಕಾಗಿ ನಡೆಯುವ ವುುಹೂರ್ತವೇ ಈ ಭತ್ತ ಮುಹೂರ್ತ.
ಸಂಪ್ರದಾಯದಂತೆ ಇಂದು ಮುಂಜಾನೆ ಅದಮಾರು ಮಠದ ದಿವಾನರಾದ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಹಾಗೂ ಮಠದ ಪುರೋಹಿತರಾದ ಶಿಬರೂರು ವಾಸುದೇವ ಆಚಾರ್ಯರ ನೇತೃತ್ವದಲ್ಲಿ ಅದಮಾರು ಮಠದ ಪಟ್ಟ ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಊರಿನ ಗಣ್ಯರು, ಮಠ ಅಭಿಮಾನಿಗಳು ಸಹಿತ ಸಕಲ ಬಿರುದುಬಾವಲಿಗಳೊಂದಿಗೆ ಮೆರವಣಿಗೆಯಲ್ಲಿ ತೆರಳಿ ಚಂದ್ರೇಶ್ವರ, ಅನಂತೇಶ್ವರ ದೇವ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಆ ಬಳಿಕ ಶ್ರೀಮಠಕ್ಕೆ ಮರಳಿ ಅಲ್ಲಿಂದ ಸಾಲಂಕೃತವಾದ ಭತ್ತದ ಮುಡಿಗಳನ್ನು ನಾಲ್ಕು ಮಂದಿ ತಲೆಯಲ್ಲಿ ಹೊತ್ತುಕೊಂಡು ಹಾಗೂ ಇನ್ನೊಂದು ಧಾನ್ಯದ ಚಿಕ್ಕಮುಡಿ ಮತ್ತು ಕಟ್ಟಿಗೆ ರಥದ ಕಲಶಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ಇಟ್ಟು ಚೆಂಡೆ, ವಾದ್ಯ ಬಿರುದು ಬಾವಲಿ ಸಹಿತವಾಗಿ ರಥಬೀದಿಗೆ ಪ್ರದಕ್ಷಿಣೆ ಬಂದು ಶ್ರೀ ಕೃಷ್ಣಮಠದ ಬಡಗುಮಾಳಿಗೆಗೆ ತಂದು ಅಲ್ಲಿ ಮುಡಿಗನ್ನು ಪೀಠದಲ್ಲಿರಿಸಿ ಪೂಜಿಸಲಾಯಿತು.
ಅಲ್ಲದೇ ಬಡಗುಮಾಳಿಗೆಯಲ್ಲಿ ಪೇಜಾವರ, ಪಲಿಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಸೋದೆ, ಪುತ್ತಿಗೆ ಮಠ ಹಾಗೂ ಅನಂತೇಶ್ವರ, ಚಂದ್ರಮೌಳೀಶ್ವರ ದೇವಸ್ಥಾನದ ಪ್ರತಿನಿಧಿಗಳಿಗೆ ನವಗ್ರಹ ದಾನ ನೀಡಲಾಯಿತು. ಆರು ಉಪಮಠಗಳ ಪಾರುಪತ್ಯಗಾರರನ್ನು ಗೌರವಿಸಲಾಯಿತು.
ಈ ಸಂದರ್ಭ ಆಶೀರ್ವಚನ ನೀಡಿದ ಭಾವಿ ಪರ್ಯಾಯ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕಾಲ ಕಾಲಕ್ಕೆ ಮಳೆಯಾಗಲಿ, ಭೂಮಿ ಗಿಡ-ಮರಗಳಿಂದ ಸಮೃದ್ಧಿಯಾಗಿರಲಿ, ಅಕ್ಕಪಕ್ಕದ ದೇಶಗಳಿಗೆ ದೇವರು ಒಳ್ಳೆಬುದ್ಧಿ ನೀಡುವ ಮೂಲಕ ದೇಶಕ್ಕೆ ಕ್ಷೋಭೆ ಬಾರದಿರಲಿ, ಸಜ್ಜನರು ನಿರ್ಭಯದಿಂದಲೂ ದುರ್ಜನರು ಭಯದಿಂದಲೂ ಬದುಕುವ ಪರಿಸ್ಥಿತಿ ನಿರ್ಮಾಣವಾಗಲಿ ಎಂದು ಕೃಷ್ಣನಲ್ಲಿ ಪ್ರಾರ್ಥಿಸಿ ಪೂಜಾ ಕೈಂಕರ್ಯ ನೆರವೇರಿಸುತ್ತೇವೆ. ಇದೇ ಪರ್ಯಾಯದ ಯೋಜನೆ ಎಂದು ತಿಳಿಸಿದರು.
ಕಟ್ಟಿಗೆ ರಥಕ್ಕೆ ಶಿಖರ: ಅನಂತರ ಕೃಷ್ಣ ಮಠದ ಗೋಶಾಲೆಯ ಬಳಿ ನಿರ್ಮಾಣವಾಗಿರುವ ಕಟ್ಟಿಗೆ ರಥಕ್ಕೆ ಇಂದು ಶಿಖರವನ್ನಿಟ್ಟು ಪರಿಪೂರ್ಣ ಗೊಳಿಸಲಾಯಿತು. ಕಟ್ಟಿಗೆ ರಥಕ್ಕೆ ಮಠದ ಮೇಸ್ತ್ರಿ ಸುಂದರ ಅವರು ಕಲಶವನ್ನು ಇರಿಸಿದರು. ಪರ್ಯಾಯದ ಎರಡು ವರ್ಷಗಳ ಅವಧಿಯ ಅನ್ನದಾಸೋಹಕ್ಕೆ ಬೇಕಾದ ಕಟ್ಟಿಗೆಗಳನ್ನು ಈಗಲೇ ಸಂಗ್ರಹಿಸಿ ಅವುಗಳನ್ನು ರಥದ ರೂಪದಲ್ಲಿ ಸಂಗ್ರಹಿಸಿ ಡಲಾಗಿದೆ. ಈ ರಥದ ನಿರ್ಮಾಣಕ್ಕೆ 100 ಟನ್‌ಗೂ ಅಧಿಕ ಕಟ್ಟಿಗೆಯನ್ನು ಬಳಸಲಾಗಿದೆ. ಕಟ್ಟಿಗೆ ರಥದಲ್ಲಿ ಎರಡು ಸಿಂಹ ಹಾಗೂ ದ್ವಾರಪಾಲರ ಗೊಂಬೆಗಳನ್ನು ಇರಿಸಲಾಯಿತು.
ಶಾಸಕ ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯೆ ಶಿಲ್ಪಾ ಸುವರ್ಣ, ನಗರಸಭಾ ಸದಸ್ಯ ಮಂಜುನಾಥ ಮಣಿಪಾಲ, ಶಾರದಾ ವಿದ್ಯಾಲಯ ಮುಖ್ಯಸ್ಥ ಎಂ.ಬಿ. ಪುರಾಣಿಕ್, ನಗರಸಭೆ ಆಯುಕ್ತ ಆನಂದ ಕಲ್ಲೋಳಿಕರ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಗ್ರಿ ರಾಘವೇಂದ್ರ ಉಪಾಧ್ಯಾಯ,ಮ್ಯಾನೇಜರ್ ಗೋವಿಂದರಾಜ್ ಉಪಸ್ಥಿತರಿದ್ದರು.