ದೇಶದಲ್ಲಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣ ಹೆಚ್ಚಳ : ನ್ಯಾಯವಾದಿ ದಿಲ್‌ರಾಜ್ ಕಳವಳ

Update: 2019-12-08 16:34 GMT

ಮಂಗಳೂರು, ಡಿ.8: ದೇಶದಲ್ಲಿ ಹಲ್ಲೆ, ಥಳಿತ, ಹತ್ಯೆ, ವಂಚನೆ, ಅತ್ಯಾಚಾರದಂತಹ ಅಪರಾಧ ಕೃತ್ಯಗಳು ನಿರಂತರ ನಡೆಯು ತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಹೈಕೋರ್ಟ್ ನ್ಯಾಯವಾದಿ ದಿಲ್‌ರಾಜ್ ಕಳವಳ ವ್ಯಕ್ತಪಡಿಸಿದ್ದಾರೆ.

ನಗರರದ ಜೆಪ್ಪುವಿನ ಮರಿಯ ಜಯಂತಿ ಸಭಾಂಗಣದಲ್ಲಿ ರವಿವಾರ ಸಂಜೆ ನಡೆದ ಪಿಯುಸಿಯಲ್ (People's Union for Civil Liberties) ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ನಾಲ್ವರು ಆರೋಪಿ ಗಳನ್ನು ಎನ್‌ಕೌಂಟರ್ ಮಾಡಿದ ಬಗ್ಗೆ ವಿಶ್ವ ಮಟ್ಟದಲ್ಲಿ ಚರ್ಚೆ ನಡೆಯಿತು. ದೇಶದ ಜನತೆ ಭಾವನಾತ್ಮಕವಾಗಿ ಎನ್‌ಕೌಂಟರ್‌ನ್ನು ಸ್ವಾಗತಿಸಿದರು. ಪ್ರತಿಯೊಂದು ಪ್ರಕರಣಕ್ಕೂ ಪೊಲೀಸರೇ ಅಂತ್ಯ ಹಾಡುವುದಾದರೆ ನ್ಯಾಯಾಂಗದ ಪ್ರಸ್ತುತತೆ ಏನು ಎಂದು ಅವರು ಪ್ರಶ್ನಿಸಿದರು.

ಎನ್‌ಕೌಂಟರ್ ಪ್ರಕರಣವನ್ನು ಮೇಲ್ನೋಟಕ್ಕೆ ದೇಶವಾಸಿಗಳು ಸ್ವಾಗತಿಸಿದರೂ ಇದರ ಪರಿಣಾಮ ಮುಂದಿನ ದಿನಗಳಲ್ಲಿ ಆತಂಕಕಾರಿಯಾಗಲಿದೆ. ಪ್ರಕರಣದಲ್ಲಿ ನೇರವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಪ್ರಶ್ನಿಸುವವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಿರುವುದು ಪ್ರಜಾಪ್ರಭುತ್ವ ಅಪಾಯದಲ್ಲಿರುವ ಸಂಕೇತವನ್ನು ಸೂಚಿಸುತ್ತದೆ ಎಂದು ಹೇಳಿದರು.

ದ.ಕ. ಜಿಲ್ಲೆಯಲ್ಲಿ ಪಿಯುಸಿಎಲ್ ಕಾರ್ಯನಿರ್ವಹಣೆಯು ಮಾದರಿಯಾಗುವ ನಿಟ್ಟಿನಲ್ಲಿ ನಡೆಯುತ್ತಿದೆ. ನಿರಂತರ ಹೋರಾಟಗಳನ್ನು ನಡೆಸುತ್ತಾ, ಸುಸಂಸ್ಕೃತ ಸಮಾಜದ ಪ್ರತಿನಿಧಿಯಾಗಿದೆ. ಅನ್ಯಾಯಗಳನ್ನು ಕಂಡಾಗ ನ್ಯಾಯದ ಪರ ಧ್ವನಿ ಎತ್ತುತ್ತದೆ. ಪಿ.ಬಿ.ಡೇಸಾ ಮಾರ್ಗದರ್ಶನ ಪಿಯುಸಿಎಲ್ ಜಿಲ್ಲಾ ಘಟಕಕ್ಕೆ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಎಂ.ಎಫ್.ಸಲ್ಡಾನ, ರೆ.ಫಾ.ಡಾ. ಒಸ್ಮೊಂಡ್ ರೋಶನ್ ಡಿಸೋಜ, ಪಿಯುಸಿಯಲ್ ಜಿಲ್ಲಾ ಮಾಜಿ ಅಧ್ಯಕ್ಷ ಪಿ.ಬಿ.ಡೇಸಾ, ಪಿಯುಸಿಎಲ್ ಜಿಲ್ಲಾ ಕಾರ್ಯದರ್ಶಿ ಅಜೊಯ್ ಡಿಸಿಲ್ವ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪಿಯುಸಿಎಲ್ ಜಿಲ್ಲಾಧ್ಯಕ್ಷ ಈಶ್ವರ್ ರಾಜ್ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News