ಉಡುಪಿ: ಮಲಬಾರ್ ಗೋಲ್ಡ್‌ನಿಂದ ವಿದ್ಯಾರ್ಥಿ ವೇತನ, ವಸತಿರಹಿತರಿಗೆ ಸಹಾಯ ಧನ ವಿತರಣೆ

Update: 2019-12-09 13:19 GMT

ಉಡುಪಿ, ಡಿ.9: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಸಂಸ್ಥೆಯ ಸಿಆರ್‌ಎಸ್ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನ ಹಾಗೂ ವಸತಿ ರಹಿತರಿಗೆ ಸಹಾಯಧನ ವಿತರಣಾ ಸಮಾರಂಭವು ಸೋಮವಾರ ಸಂಸ್ಥೆಯ ಉಡುಪಿ ಆವರಣದಲ್ಲಿ ಜರಗಿತು.

ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಹಲವು ಮಂದಿ ಮನೆ ಇಲ್ಲದೆ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ಇಂತಹವರಿಗೆ ಮನೆ ನಿರ್ಮಿಸಲು ಸರಕಾರಿ ಯೋಜನೆಯ ಹಣ ಬಹಳಷ್ಟು ಕಡಿಮೆ ಆಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಇಂತಹ ಸ್ಥಿತಿಯಲ್ಲಿ ಮಲಬಾರ್ ಗೋಲ್ಡ್ ಸಂಸ್ಥೆಯು ಮನೆ ನಿರ್ಮಿಸಲು ಸಹಾಯ ಧನ ನೀಡುತ್ತಿರುವುದು ಬಡವರಿಗೆ ಮಾಡುವ ನಿಜವಾದ ಸಹಾಯವಾಗಿದೆ ಎಂದು ತಿಳಿಸಿದರು.

ಶಿಕ್ಷಣಕ್ಕಾಗಿ ಹೊರ ಜಿಲ್ಲೆಯಿಂದ ಉಡುಪಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಿರುವ ಹಾಸ್ಟೆಲ್‌ನಲ್ಲಿನ ಮಕ್ಕಳ ಸಂಖ್ಯೆಯನ್ನು ಏರಿಸಲಾಗಿದ್ದು, ಇದರಿಂದ ಸಾವಿರಾರು ಮಂದಿಗೆ ಅನುಕೂಲವಾಗಿದೆ. ಹೊರ ಜಿಲ್ಲೆಯ ವಿದ್ಯಾರ್ಥಿಗಳು ಪಿಜಿಯಲ್ಲಿ ಸಾವಿರಾರು ರೂ. ಹಣ ವ್ಯಯಿಸಿ ಉಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಸಾಕಷ್ಟು ಹೆಣ್ಣು ಮಕ್ಕಳು ಅರ್ಧದಲ್ಲೇ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ವಿದ್ಯಾರ್ಥಿಗಳಿಗೆ ಮಾಡಿರುವ ಸಹಾಯ ನಿಜಕ್ಕೂ ಸಾರ್ಥಕವಾಗುತ್ತದೆ. ಈ ಮೂಲಕ ಶಿಕ್ಷಣಕ್ಕೆ ಶಕ್ತಿ ನೀಡಿದಂತೆ ಆಗುತ್ತಿದೆ ಎಂದರು.

ಸಿಆರ್‌ಎಸ್ ನಿಧಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರೆಯುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ಕೊಡಬೇಕು. ಆ ಬಡವರಿಗೆ ತಲುಪಿದರೆ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಬಡವರ ಬೆಂಬಲಕ್ಕೆ ನಿಂತಿರುವ ಮಲಬಾರ್ ಗೋಲ್ಡ್‌ಗೆ ಸರಕಾರದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು. ಈ ಸಂಸ್ಥೆಗೆ ಎಲ್ಲ ರೀತಿಯ ಸಹಕಾರ ನೀಡಲು ಸರಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ 19 ವಿವಿಧ ಶಾಲಾ ಕಾಲೇಜುಗಳ ಅರ್ಹ 253 ವಿದ್ಯಾರ್ಥಿನಿಯರಿಗೆ ಒಟ್ಟು 5.93 ಲಕ್ಷ ರೂ. ವಿದ್ಯಾರ್ಥಿ ವೇತನ ಮತ್ತು ಎಂಟು ಅರ್ಹ ವಸತಿ ರಹಿತರಿಗೆ ಎಂಟು ಲಕ್ಷ ರೂ. ಸಹಾಯ ಧನವನ್ನು ವಿತರಿಸಲಾಯಿತು.

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್ ರಹ್ಮಾನ್ ಪ್ರಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ವ್ಯಾಪಾರದಲ್ಲಿ ಬರುವ ಲಾಭಂಶದ ಶೇ.5ರಷ್ಟು ಹಣವನ್ನು ಸಿಎಸ್‌ಆರ್ ನಿಧಿ ನೀಡುತ್ತಿದ್ದು, ಇದರಲ್ಲಿ ಬಡವರಿಗೆ ಉಚಿತ ಔಷಧಿ ವಿತರಣೆ, ಪರಿಸರ ಕಾಳಜಿ, ಉಚಿತ ಗೃಹ ನಿರ್ಮಾಣ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮ ಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ 2019ರ ಮಾರ್ಚ್‌ವರೆಗೆ ಮನೆ ನಿರ್ಮಾಣಕ್ಕೆ 1189 ಕುಟುಂಬಗಳಿಗೆ 5,39,52,000ರೂ. ಸಹಾಯಧನ, 7530 ವಿದ್ಯಾರ್ಥಿನಿಯ ರಿಗೆ 1,60,50,000ರೂ. ವಿದ್ಯಾರ್ಥಿ ವೇತನ, 3,05,131 ರೋಗಿಗಳಿಗೆ 1,59,41,000 ರೂ. ಮೌಲ್ಯದ ಔಷಧಿ ವಿತರಣೆ ಮಾಡಲಾಗಿದೆ. ಕಳೆದ ವರ್ಷ ಉಡುಪಿಯಲ್ಲಿ 6 ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ, 300 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ, 70 ರೋಗಿಗಳಿಗೆ ಔಷಧಿ ವಿತರಿಸ ಲಾಗಿದೆ. ಸಂಸ್ಥೆಯು ದೇಶದಲ್ಲಿ ಈವರೆಗೆ 7,66,143 ಫಲಾನುಭವಿಗಳಿಗೆ 96,93,91,000 ರೂ. ಸಹಾಯಧನವನ್ನು ನೀಡಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜ್ಯುವೆಲ್ಲರಿ ಅಸೋಸಿಯೇಶನ್ ಅಧ್ಯಕ್ಷ ಅಲೆವೂರು ನಾಗರಾಜ ಆಚಾರ್ಯ, ಉಡುಪಿ ನಗರಸಭೆ ಸದಸ್ಯೆ ಮಾನಸಿ ಚಿದಾನಂದ ಪೈ, ಮಾಜಿ ಸದಸ್ಯ ಶ್ಯಾಮ್ ಪ್ರಸಾದ್ ಕುಡ್ವ ಉಪಸ್ಥಿತರಿದ್ದರು. ತಾರಾ ಭಟ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News