ಮಂಗಳೂರಿನಲ್ಲಿ ಮತ್ತೆ 15 ನರ್ಮ್ ಬಸ್ಸುಗಳ ಓಡಾಟ ?

Update: 2019-12-09 14:57 GMT

ಮಂಗಳೂರು, ಡಿ.9: ಕೇಂದ್ರ ಸರಕಾರದ ನರ್ಮ್ ಯೋಜನೆಯಡಿ ದ.ಕ. ಜಿಲ್ಲಾ ಸಾರಿಗೆ ಪ್ರಾಧಿಕಾರಕ್ಕೆ ಮಂಜೂರಾಗಿದ್ದ 15 ನರ್ಮ್ ಬಸ್ಸುಗಳ ಓಡಾಟಕ್ಕೆ ಸಂಬಂಧಿಸಿ ಇದೀಗ ಹೈಕೋರ್ಟ್ ನಿರ್ಧಾರ ಕೈಗೊಳ್ಳಲು ರಾಜ್ಯ ಸರಕಾರದ ವಿವೇಚನೆಗೆ ಬಿಟ್ಟಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಶೀಘ್ರದಲ್ಲೇ ಈ ಬಸ್ಸುಗಳು ನಗರದಲ್ಲಿ ಓಡಾಡುವ ಸಾಧ್ಯತೆ ಕಂಡು ಬಂದಿದೆ.

ಮಂಗಳೂರು ಕೆಎಸ್‌ಆರ್‌ಟಿಸಿಯಲ್ಲಿಂದು ಅಂಬಾರಿ ಡ್ರೀಮ್‌ಕ್ಲಾಸ್ ಮಲ್ಟಿ ಆ್ಯಕ್ಸಿಲ್ ಎಸಿ ಸ್ಲೀಪರ್ ಬಸ್ಸುಗಳಿಗೆ ಚಾಲನೆ ನೀಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಬಗ್ಗೆ ಮಾಹಿತಿ ನೀಡಿದರು.

ಮಂಗಳೂರಿನಲ್ಲಿ 15 ನರ್ಮ್ ಬಸ್ಸುಗಳ ಓಡಾಟಕ್ಕೆ ಸಂಬಂಧಿಸಿ ಹೈಕೋರ್ಟ್ ಸರಕಾರಕ್ಕೆ ಪ್ರಕರಣವನ್ನು ಹಸ್ತಾಂತರಿಸಿದ್ದು, ಜಿಲ್ಲಾಡಳಿತ ಈ ಬಗ್ಗೆ ನಿರ್ಧರಿಸುವಂತೆ ತಿಳಿಸಿದೆ. ಈ ಬಗ್ಗೆ ಜನವರಿ 4ರಂದು ನಿಗದಿಪಡಿಸಲಾಗಿರುವ ಆರ್‌ಟಿಎ (ಪ್ರಾದೇಶಿಕ ಸಾರಿಗೆ ಪ್ರಾಧಿಕಾರ)ದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಮಂಗಳೂರಿಗೆ 35 ನರ್ಮ್ ಬಸ್‌ಗಳಿಗೆ ಪರವಾನಿಗೆ ನೀಡಲಾಗಿತ್ತಾದರೂ 15 ಬಸ್ಸುಗಳ ವಿರುದ್ಧ ಖಾಸಗಿ ಬಸ್ಸು ಮಾಲಕರು ಹೈಕೋರ್ಟ್ ಮೆಟ್ಟಿಲೇರಿದ್ದರು.

ನರ್ಮ್ ವಿಶೇಷತೆಗಳು

ನರ್ಮ್ ಬಸ್‌ನಲ್ಲಿ ಒಂದನೇ ತರಗತಿಯಿಂದ 7ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ, 8ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿನಿಯರಿಗೆ ವಾರ್ಷಿಕ 400 ರೂ., ವಿದ್ಯಾರ್ಥಿಗಳಿಗೆ 600 ರೂ. ರಿಯಾಯಿತಿ ಪಾಸ್ ಸೌಲಭ್ಯ, ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ 900 ರೂ. ರಿಯಾಯತಿ ಪಾಸ್ ಸೌಲಭ್ಯ, ಹಿರಿಯ ನಾಗರಿಕರಿಗೆ ಶೇ.25 ರಿಯಾಯಿತಿ, ವಿಕಲಚೇತನರಿಗೆ 100 ಕಿ.ಮೀ. ವರೆಗೆ ಉಚಿತ ಪ್ರಯಾಣ, ಅಂಧರು, ಎಂಡೋಸಲ್ಫಾನ್ ಪೀಡಿತರು, ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಪಾಸ್ ಸೌಲಭ್ಯ ನೀಡಲಾಗುತ್ತಿದೆ. ನರ್ಮ್ ಬಸ್‌ಗಳು ಲೋಪ್ಲೋರ್ ಬಸ್‌ಗಳಾಗಿರುವುದರಿಂದ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಹಾಗೂ ಅನಾರೋಗ್ಯ ಪೀಡಿತರಿಗೆ ಹತ್ತಿ ಇಳಿಯಲು ಅನುಕೂಲವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News