ಐಎಸ್‌ಪಿಆರ್ ಸಮಸ್ಯೆ ಪರಿಹಾರಕ್ಕೆ ಸಂತ್ರಸ್ಥರ ಮನವಿ : ನಿಯೋಗದಿಂದ ಪೆಟ್ರೋಲಿಯಂ ಸಚಿವರ ಭೇಟಿ

Update: 2019-12-11 15:55 GMT

ಉಡುಪಿ, ಡಿ.11: ಮಜೂರು ಗ್ರಾಪಂ ವ್ಯಾಪ್ತಿಯ ಪಾದೂರು ಗ್ರಾಮದಲ್ಲಿ ಈಗಾಗಲೇ ನಿರ್ಮಾಣಗೊಂಡಿರುವ ಕೇಂದ್ರ ಸರಕಾರ ಸ್ವಾಮ್ಯದ ಭೂಗತ ಕಚ್ಛಾ ತೈಲ ಸಂಗ್ರಹ ಘಟಕ- ಐಎಸ್‌ಪಿಆರ್‌ಎಲ್-ದಿಂದ ಗ್ರಾಮಸ್ಥರಿಗಾಗಿರುವ ಸಮಸ್ಯೆಗಳಿಗೆ ಕೂಡಲೇ ಪರಿಹಾರ ನೀಡುವಂತೆ ಒತ್ತಾಯಿಸಿ ಸಂತ್ರಸ್ಥರ ಪರವಾಗಿ ಸಂಸದೆ ಶೋಭಾ ಕರಂದ್ಲಾಜೆ ಅವರ ನೇತೃತ್ವದ ನಿಯೋಗವೊಂದು ಸೋಮವಾರ ಹೊಸದಿಲ್ಲಿಯಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್‌ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

ಪಾದೂರು ಗ್ರಾಮದ ಭೂಗತ ಕಚ್ಛಾ ತೈಲ ಸಂಗ್ರಹ ಘಟಕ 180 ಎಕ್ರೆ ಜಾಗದಲ್ಲಿ 1ನೇ ಹಂತದ ಯೋಜನೆ ಮುಕ್ತಾಯ ಗೊಂಡಿದ್ದು, ಇದೀಗ 2ನೇ ಹಂತದ ಯೋಜನೆ ಅನುಷ್ಠಾನಗೊಳಿಸಲು 230 ಎಕ್ರೆ ಜಾಗದ ಪ್ರಸ್ತಾವನೆಯನ್ನು ಸಲ್ಲಿಸಿದೆ. ಆದರೆ 1ನೇ ಹಂತದ ಯೋಜನೆ ಸಂದರ್ಭದಲ್ಲಿ ಉಂಟಾಗಿರುವ ಸಮಸ್ಯೆಗಳು ಇನ್ನೂ ಬಗೆಹರಿಯದೇ ಇದ್ದು, ಅವುಗಳನ್ನು ಕೂಡಲೇ ಪರಿಹರಿಸಲು ಒತ್ತಾಯಿಸಿ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರನ್ನು ಒಳಗೊಂಡ ನಿಯೋಗ ಕೇಂದ್ರ ಸಚಿವ ಧಮೇಂರ್ದ್ರ ಪ್ರಧಾನ್‌ರನ್ನು ಒತ್ತಾಯಿಸಿತು.

ಪೈಪ್‌ಲೈನ್ ಅಳವಡಿಕೆ ಸಂದರ್ಭದಲ್ಲಿ ಬಂಡೆ ಸ್ಫೋಟದಿಂದ ಹಾನಿ ಗೊಳಗಾದ 120 ಮನೆಗಳಿಗೆ 1.6 ಕೋಟಿ ರೂ. ನಷ್ಟ ಅಂದಾಜಿಸಿ ಕಂದಾಯ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಗಳು ಜಂಟಿ ಸರ್ವೇ ನಡೆಸಿ ವರದಿಯನ್ನು 2017ರಲ್ಲಿ ಜಿಲ್ಲಾಧಿಕಾರಿಗಳಿಗೆ ನೀಡಿದ್ದರೂ ಈವರೆಗೆ ಯಾವುದೇ ಪರಿಹಾರ ನೀಡಿಲ್ಲ ಎಂದು ಮನವಿಯಲ್ಲಿ ದೂರಲಾಗಿದೆ.

ಎರಡನೇ ಹಂತದ ಕಾಮಗಾರಿ ವೇಳೆ ಪುರಾತನ ಜೈನ ಬಸದಿ ಮತ್ತು ಅರ್ಚಕರ ಮನೆ, ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರ ಮತ್ತು ಶಾಲೆಗಳಿಗೆ ಯಾವುದೇ ರೀತಿಯ ಧಕ್ಕೆ ಬಾರದ ರೀತಿಯಲ್ಲಿ ಅಂತರ ಕಾಯ್ದುಕೊಳ್ಳುವ ಬಗ್ಗೆ, ಸ್ಥಳೀಯರಿಗೆ ಉದ್ಯೋಗಾ ವಕಾಶ, ಗ್ರಾಪಂನ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಿಎಸ್‌ಆರ್‌ನಿಧಿ ನೀಡುವ ಬಗ್ಗೆಯೂ ನಿಯೋಗ ಸಚಿವರೊಂದಿಗೆ ಚರ್ಚಿಸಿತು.

ಸಮಸ್ಯೆಗಳ ಗಂಭೀರತೆಯನ್ನು ಅರಿತುಕೊಂಡು ಸಕರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು,ಸಂಜೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆಯ ಕಚೇರಿಯಲ್ಲಿ ಇಲಾಖೆಯ ಕಾರ್ಯದರ್ಶಿ ಬಿ.ಎನ್.ರೆಡ್ಡಿ ನೇತೃತ್ವದಲ್ಲಿ ಐಎಸ್‌ಪಿಆರ್‌ಎಲ್ ಸಿಇಒ ಎಚ್.ಪಿ.ಎಸ್. ಅಹುಜಾ ಮತ್ತು ಡೆಪ್ಯೂಟಿ ಸಿಇಒ ಅಜಯ್ ದಾಶೋರೆ ಹಾಗೂ ನಿಯೋಗದ ಸಮಕ್ಷಮದಲ್ಲಿ ಯೋಜನೆಯ ಎಲ್ಲಾ ಸಮಸ್ಯೆಗಳನ್ನು ಸವಿಸ್ತಾರವಾಗಿ ಚರ್ಚಿಸಿದರು. ಹೆಚ್ಚಿನ ಸಮಸ್ಯೆ ಬಗೆಹರಿಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ನೀಡಿದರು.

ನಿಯೋಗದಲ್ಲಿ ಜಿಪಂ ಸದಸ್ಯೆ ಶಿಲ್ಪಾ ಜಿ. ಸುವರ್ಣ, ತಾಪಂ ಸದಸ್ಯೆ ಶಶಿಪ್ರಭಾ ಶೆಟ್ಟಿ, ಮಜೂರು ಗ್ರಾಪಂ ಅಧ್ಯಕ್ಷ ಸಂದೀಪ್ ರಾವ್, ಪಾದೂರು ಕಳತ್ತೂರು- ಕುತ್ಯಾರು ಜನಜಾಗೃತಿ ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಮತ್ತು ಸ್ಥಳೀಯ ರಾದ ಸುರೇಂದ್ರಕುಮಾರ್ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News