ಅಂಗನವಾಡಿಗಳಲ್ಲಿ ಆಹಾರ ಪರಿಶೀಲನೆಗೆ ಕ್ರಮ: ಉಡುಪಿ ಡಿಸಿ ಜಗದೀಶ್

Update: 2019-12-12 16:06 GMT

ಉಡುಪಿ, ಡಿ.12: ಜಿಲ್ಲೆಯಲ್ಲಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ನೀಡುವ ಆಹಾರವನ್ನು ಮಕ್ಕಳ ಆರೋಗ್ಯಕ್ಕೆ ಪೂರಕವಾಗುವಂತೆ, ಅತ್ಯಂತ ಉತ್ಕೃಷ್ಟ ಮಟ್ಟದಲ್ಲಿ ತಯಾರಿಸಿ ವಿತರಿಸಬೇಕು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಅಂಗನವಾಡಿಗಳ ಮೂಲಕ 3 ರಿಂದ 6 ವರ್ಷದ ಪ್ರಸ್ತುತ ಮಕ್ಕಳಿಗೆ ನೀಡುತ್ತಿರುವ ಪುಷ್ಠಿ ಪೌಷ್ಠಿಕ ಆಹಾರದಲ್ಲಿ ಅಗತ್ಯ ಪ್ರಮಾಣದ ಕ್ಯಾಲೋರಿ, ಪ್ರೋಟೀನ್‌ಗಳು ಮತ್ತು ಮಕ್ಕಳ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್‌ಗಳು ಇರುವಂತಹ ಪದಾರ್ಥಗಳಿಂದ ಆಹಾರ ಸಿದ್ದಪಡಿಸಬೇಕು. ಆ ಆಹಾರದ ಗುಣಮಟ್ಟವನ್ನು ಸಂಬಂಧಪಟ್ಟ ಇಲಾಖೆಯಿಂದ ಪರಿಶೀಲಿಸಿ, ಪ್ರಮಾಣಪತ್ರ ಪಡೆದು, ನಂತರ ಮಕ್ಕಳಿಗೆ ವಿತರಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳಿಗೆ ನೀಡುವ ಆಹಾರದಿಂದ ಯಾವುದೇ ರೀತಿಯ ಆರೋಗ್ಯ ವ್ಯತ್ಯಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗನ್ನು ಕೈಗೊಳ್ಳಬೇಕು ಎಂದರು.

ಮಕ್ಕಳ ಆಹಾರ ತಯಾರಿಸುವ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ನೈರ್ಮಲ್ಯ, ಆಹಾರ ತಯಾರಿಸುವಾಗ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಪಾಲಿಸುತ್ತಿರುವ ಕುರಿತು ಪರಿಶೀಲಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಸರಬರಾಜಾದ ಆಹಾರ ಪದಾರ್ಥಗಳ ಪ್ರಮಾಣ, ಸಿದ್ದಪಡಿಸಿದ ಆಹಾರದ ಪ್ರಮಾಣ, ಪ್ಯಾಕೆಟ್‌ಗಳ ತೂಕ, ತಯಾರಿಸಿದ ದಿನಾಂಕ ಮತ್ತು ಅವಧಿ ಮೀರುವ ದಿನಾಂಕ ನಮೂದಿಸಿರುವ ಬಗ್ಗೆ ಪರಿಶೀಲಿಸಬೇಕು. ಇವುಗಳಲ್ಲಿ ಯಾವುದೇ ವ್ಯತ್ಯಯ ಕಂಡು ಬಂದಲ್ಲಿ ಸಂಬಂಧಪಟ್ಟವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿಗಳು ಅಂಗನವಾಡಿಗಳಿಗೆ ದಿಢೀರ್ ಭೇಟಿ ನೀಡಿ, ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರಿ ಶೀಲಿಸುವಂತೆ ಮತ್ತು ಮಕ್ಕಳಿಗೆ ನೀಡುತ್ತಿರುವ ಆಹಾರದ ಪ್ಯಾಕೇಟ್‌ಗಳು ಸೂಕ್ತ ರೀತಿಯಲ್ಲಿ ಬಳಕೆಯಾಗುತ್ತಿರುವ ಬಗ್ಗೆ, ಅಂಗನವಾಡಿಗಳ ಸಮೀಪದ ಮಕ್ಕಳ ಮನೆಗಳಿಗೆ ಭೇಟಿ ನೀಡಿ, ವಿಚಾರಿಸಿ ಹಾಗೂ ಈ ಬಗ್ಗೆ ಸರ್ವೆ ನಡೆಸಿ ವರದಿ ನೀಬೇಕು ಎಂದು ಅವರು ಸೂಚಿಸಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಜಿಲ್ಲಾ ಸರಕಾರಿ ಅಭಿಯೋಜಕಿ ಶಾಂತಾ ಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಭಾರ ಉಪ ನಿರ್ದೇಶಕಿ ವೀಣಾ ವಿವೇಕಾನಂದ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News