ಸರಕಾರದ ತಪ್ಪು ನೀತಿಗಳನ್ನು ಪ್ರಶ್ನಿಸುವುದು ನಮ್ಮ ಹಕ್ಕು: ಅಮರ್ ಜೀತ್ ಕೌರ್
ಮಂಗಳೂರು, ಡಿ.14: ಸರಕಾರದ ತಪ್ಪು ನೀತಿಗಳನ್ನು ಪ್ರಶ್ನಿಸುವುದು ಅಥವಾ ವಿರೋಧಿಸುವುದು ಯಾವುದೇ ರೀತಿಯಲ್ಲಿ ಅಸಹಾಯಕತೆಯಲ್ಲ. ಬದಲಾಗಿ ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯ. ಹಾಗಾಗಿ ಯಾವುದೇ ರೀತಿಯ ದಬ್ಬಾಳಿಕೆಗೆ ನಾವು ಹೆದರಬೇಕಾಗಿಲ್ಲ ಎಂದು ಕೇಂದ್ರ ಸರಕಾರದ ಹೇಳಿಕೆ ವಿರುದ್ಧ ಎಐಟಿಯುಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ ಜಿತ್ ಕೌರ್ ಹೇಳಿದ್ದಾರೆ.
ಅವರು ಇಂದು ಬಿಜೈನ ಕರ್ಣಾಟಕ ಬ್ಯಾಂಕ್ ನೌಕರರ ಸಂಘಟನೆಯ ಸಭಾಂಗಣದಲ್ಲಿ ಎಐಟಿಯುಸಿಯ ಶತಮಾನ ಸಂಭ್ರಮದ ಅಂಗವಾಗಿ ಆಯೋಜಿಸಲಾದ ಸಂವಾದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ ಎಂದು ಹೇಳಲು ರಾಜ್ಯ ಸರಕಾರಗಳಿಗೆ ಅಧಿಕಾರ ಇಲ್ಲ ಎಂದು ಕೇಂದ್ರ ಸರಕಾರದ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಈ ಕಾಯ್ದೆಯ ಆಶಯವೇ ಸಂವಿಧಾನ ವಿರೋಧಿ ಎಂದರು.
ಕಾರ್ಮಿಕ ಶಕ್ತಿ ಹಾಗೂ ಒಗ್ಗಟ್ಟಿಗೆ ಸ್ವಾತಂತ್ರಪೂರ್ವದ ಇತಿಹಾಸವಿದೆ. 1857ರ ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ಮುಂಚಿತವಾಗಿಯೇ ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ್ದು ಕಾರ್ಮಿಕ ವರ್ಗ. ಆದರೆ ಈ ಸಂಗ್ರಾಮವನ್ನು ಹತ್ತಿಕ್ಕಲಾಯಿತು. ಆದರೆ ಅಲ್ಲಿಂದ ಬೀಜವಾಗಿ ಮೊಳೆತು ಕಾರ್ಮಿಕ ಶಕ್ತಿಯ ರೂಪದಲ್ಲಿ ಬೆಳೆದ ದುಡಿಯುವ ವರ್ಗದ ಹೋರಾಟ ಬಳಿಕ ಸಂಘಟನಾತ್ಮಕವಾಗಿ ಬಲ ಪಡೆದಿದೆ. ಅನ್ಯಾಯ, ಶೋಷಣೆ ವಿರುದ್ಧ ಹಾಗೂ ಸಮಾನತೆಗಾಗಿ ಕಾರ್ಮಿಕ ವರ್ಗ ಹೋರಾಟ ನಡೆಸಿದೆ. ಇದೀಗ ಇದೇ ಕಾರ್ಮಿಕ ವರ್ಗಕ್ಕೆ ಅಪಾಯಕಾರಿಯಾಗಿರುವ, ದೇಶದಲ್ಲಿ ದಿನೇ ದಿನೇ ಕುಸಿಯುತ್ತಿರುವ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿರುವ ಈ ಪೌರತ್ವ ಕಾಯ್ದೆ ಹಾಗೂ ನಾಗರಿಕ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಮೂಲಕ ದೇಶವನ್ನು ವಿಭಜಿಸುವ ತಂತ್ರವನ್ನು ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ. ಇದನ್ನು ಕಾರ್ಮಿಕ ವರ್ಗ ಅರಿತುಕೊಳ್ಳಬೇಕಾಗಿದೆ ಎಂದವರು ಹೇಳಿದರು.
ಆರ್‌ಬಿಐಯೇ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದನ್ನು ಹೇಳಿಕೊಂಡಿದೆ. ಹಾಗಿದ್ದರೂ ಕೇಂದ್ರ ಸರಕಾರ ಮಾತ್ರ ಭಾವನಾತ್ಮಕ ವಿಷಯಗಳ ಮೂಲಕ ಜನರು ಪರಸ್ಪರ ದ್ವೇಷ ಬೆಳೆಸಿಕೊಳ್ಳುವಂತಹ ನೀತಿಗಳ ಮೂಲಕ ದೇಶವನ್ನು ವಿಭಜಿಸುವ ಕೆಲಸವನ್ನು ಮಾಡುತ್ತಿದೆ. ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರು ಮಾಡಿದ ವಿಭಜನೆಯ ಕುತಂತ್ರವನ್ನು ಕೇಂದ್ರ ಸರಕಾರವಿಂದು ಮಾಡುತ್ತಿದ್ದು, ಇಂದು ಕುತಂತ್ರವನ್ನು ಬೆಂಬಲಿಸಿದ ಜನರು ಜಾತ್ಯತೀತ ರಾಷ್ಟ್ರವನ್ನು ಒಡೆಯುವ ಸಂಚು ನಡೆಸುತ್ತಿದ್ದಾರೆ. ಮತ್ತೆ ಇದರ ವಿರುದ್ಧ ಹೋರಾಟ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಅದಕ್ಕಾಗಿ ಭಯಪಡಬೇಕಾಗಿಲ್ಲ. ರಾಜ್ಯ ಸರಕಾರಗಳು ಇಂದು ದೇಶವನ್ನು ವಿಭಜಿಸುವ ಈ ಪ್ರಯತ್ನದ ವಿರುದ್ಧ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಅಮರ್‌ಜಿತ್ ಕೌರ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕ್ಕಾರಕ್ಕೆ ಏರುವ ಸಂದರ್ಭ ದೇಶ ಯಾವುದೇ ಅಭಿವೃದ್ಧಿ ಕಂಡಿಲ್ಲ ಎಂದು ಹೇಳಿಕೊಂಡರು. ಹಾಗಾಗಿ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಮೊದಲಾದ ಯೋಜನೆಗಳನ್ನು ತಂದರು. ಆದರೆ ಇಂದು ಅವರೇ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ದೇಶದಲ್ಲಿ ಉದ್ಯೋಗ ನಾಶಕ್ಕೆ ಕಾರಣವಾಗಿದ್ದಾರೆ. ಸ್ವಾತಂತ್ರ ನಂತರ ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದಾಗಿದ್ದರೆ ಇತ್ತೀಚೆಗೆ ಚಂದ್ರಯಾನ-2ನ್ನು ನಾವು ಮಾಡಿದ್ದಾಗಿ ಬೀಗಿದ ಮೋದಿಯವರಿಂದಲೇ ಇಸ್ರೋ ರಚನೆಯಾಗಿದ್ದು ? ಇಸ್ರೋಗೆ 50 ವರ್ಷಗಳ ಇತಿಹಾಸವಿದೆ. ನಮ್ಮ ದೇಶದ ಪರಮಾಣು ಕ್ಷೇತ್ರ, ಬಾಹ್ಯಾಕಾಶ ವಿಜ್ಞಾನ ಮಾಡಿರುವ ಸಾಧನೆ ಮೋದಿ ಅಧಿಕಾರಕ್ಕೆ ಬಂದ ಮೇಲೆ ಆಗಿರುವಂಥದ್ದೇ ಎಂದು ಅಮರ್‌ಜಿತ್ ಕೌರ್ ಪ್ರಶ್ನಿಸಿದರು.
ಕೇಂದ್ರ ಸರಕಾರದ ಇಂತಹ ಒಡೆದು ಆಳುವ, ದ್ವೇಷಭಾವನೆಯ ಆಡಳಿತವನ್ನು ಹಿಮ್ಮೆಟ್ಟಿಸುವಲ್ಲಿ ಕಾರ್ಮಿಕ ವರ್ಗ ಮತ್ತೊಮ್ಮೆ ತನ್ನ ಶಕ್ತಿಯನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಎಐಟಿಯುಸಿ ಮುಖಂಡರಾದ ಎ.ವಿ.ಭಟ್, ವಿನ್ಸೆಂಟ್, ನಾಗರಾಜನ್, ಫಣೀಂದ್ರ ಮೊದಲಾದವರು ಉಪಸ್ಥಿತರಿದ್ದರು