ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ

Update: 2019-12-14 15:03 GMT

ಉಡುಪಿ, ಡಿ.14: ತುಳು ಶಿವಳ್ಳಿ ಬ್ರಾಹ್ಮಣರ ಪರಂಪರೆ, ಸಂಸ್ಕೃತಿಯನ್ನು ನಮ್ಮ ಮುಂದಿನ ಪೀಳಿಗೆಯಲ್ಲೂ ಮುಂದುವರಿಯುವಂತೆ ಮಾಡುವ ವಿಶೇಷ ಜವಾಬ್ದಾರಿ ಇಂದಿನ ತಲೆಮಾರಿನ ಮೇಲಿದೆ. ಇದಕ್ಕಾಗಿ ಯುವ ಜನಾಂಗಕ್ಕೆ ನಮ್ಮ ಪರಂಪರೆ, ಸಂಸ್ಕೃತಿಯ ಕುರಿತಂತೆ ಪ್ರೇರಣೆ ನೀಡಬೇಕಾದ ಅಗತ್ಯವಿದೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ತೌಳವ ಪರಂಪರೆಯ ಮೂವರು ಗುರುಗಳಾದ ಶ್ರೀಮಧ್ವಾಚಾರ್ಯರು, ಶ್ರೀವಾದಿರಾಜಾಚಾರ್ಯರು ಹಾಗೂ ಶ್ರೀವಿಜಯಧ್ವಜ ತೀರ್ಥರು ತುಳುವ ಶಿವಳ್ಳಿ ಬ್ರಾಹ್ಮಣರಿಗೆ ದೊಡ್ಡ ಪರಂಪರೆಯನ್ನು, ಸಿದ್ಧಾಂತವನ್ನು ನೀಡಿದ್ದಾರೆ. ವಿಶೇಷವಾಗಿ ನಮಗೆ ತುಳು ಭಾಷೆಯ ಮೇಲಿನ ವಿಶೇಷ ಅಭಿಮಾನ ವಿರಬೇಕು. ಇಂದು ದುರ್ಬಲಗೊಳ್ಳುತ್ತಿರುವ ಶಿವಳ್ಳಿ ತುಳು ಮತ್ತೆ ಗಟ್ಟಿಗೊಳ್ಳಬೇಕಾಗಿದೆ ಎಂದರು.

ಶಿವಳ್ಳಿ ಸಮಾಜ, ಬ್ರಾಹ್ಮಣ ಸಮಾಜ ಹಾಗೂ ಹಿಂದು ಸಮಾಜ ಒಂದಕ್ಕೊಂದು ಪೂರಕವೇ ಹೊರತು ವಿಘಟಕವಲ್ಲ. ಒಂದು ಸಮಾಜವನ್ನು ಗಟ್ಟಿಗೊಳಿಸುವುದರಿಂದ ಮತ್ತೊಂದಕ್ಕೆ ಬಲಬರುತ್ತದೆ. ವಿದ್ಯೆ, ಜ್ಞಾನ ಹಾಗೂ ಸತ್ಕರ್ಮಗಳ ಮೂಲಕ ನಾವು ನಮ್ಮ ಸಮಾಜವನ್ನು ಸದೃಢಗೊಳಿಸಬೇಕು. ಶಿವಳ್ಳಿ ಸಮಾಜಕ್ಕೆ 11 ಮಂದಿ ಪೀಠಾಧಿಪತಿಗಳಿದ್ದಾರೆ, ಇವರು ಸಮಾಜಕ್ಕೆ ಸ್ಪೂರ್ತಿ ತುಂಬಬೇಕು ಎಂದು ಪೇಜಾವರಶ್ರೀಗಳು ಕರೆ ನೀಡಿದರು.

'ಗಾಯತ್ರಿ ಮಂತ್ರ ಜಪಿಸಿ': ತುಳುವ ಶಿವಳ್ಳಿ ಸಮಾಜದವರು ಗಾಯತ್ರಿ ಮಂತ್ರವನ್ನು ತಪ್ಪದೇ ಪ್ರತಿದಿನ ಜಪಿಸಬೇಕು. ಸಮಾಜದ ಎಲ್ಲಾ ಯುವಕರು ಇದನ್ನು ಹೇಳಬೇಕು, ಇದರಿಂದ ಸಾತ್ವಿಕ ಶಕ್ತಿ ಬರುತ್ತದೆ. ಪ್ರತಿದಿನ ಕನಿಷ್ಠ 10 ಗಾಯತ್ರಿ ಮಂತ್ರ ಹೇಳಬೇಕು. ಗಾಯತ್ರಿ ಮಂತ್ರ ಎಂಬುದು ನಮಗೆ ರಾಷ್ಟ್ರಗೀತೆ, ವಿಶ್ವಗೀತೆ ಇದ್ದಂತೆ ಎಂದು ಅವರು ಹೇಳಿದರು.

ವಿಶ್ವ ಸಮ್ಮೇಳನವನ್ನು ಉದ್ಘಾಟಿಸಿದ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ, ಸಮಾಜ ಎಂದು ಗುರುತಿಸಿಕೊಳ್ಳಲು ಭಾಷೆ, ಗುರು, ದೇವರು, ಪ್ರಾಂತ ಹಾಗೂ ಸಮಾಜ ಬೇಕು. ತುಳು ಶಿವಳ್ಳಿಗರಿಗೆ ಇವೆಲ್ಲವೂ ಪರಿಪೂರ್ಣವಾಗಿವೆ ಎಂದರು.

ತುಳು ಶಿವಳ್ಳಿ ಸಮಾಜ ಸ್ವಾಭಿಮಾನಿ ಜನಾಂಗವಾಗಿದೆ. ಎಲ್ಲಿ ಹೋದರೂ ನಮ್ಮತನವನ್ನು ನಾವು ಉಳಿಸಿಕೊಳ್ಳುತಿದ್ದೆವು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದರಲ್ಲಿ ಕೊರತೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಮಾಜ ಕ್ಷೀಣವಾಗುತ್ತದೆ. ಹೀಗಾಗದಂತೆ ನಾವು ಎಚ್ಚರ ವಹಿಸಬೇಕು ಎಂದು ಪಲಿಮಾರುಶ್ರೀಗಳು ನುಡಿದರು.

ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ಶಿವಳ್ಳಿ ಸಮಾಜ ಇಂದು ಒಗ್ಗಟ್ಟಾಗಬೇಕಾಗಿದೆ. ನಮಗಿಂದು ಧ್ವನಿ ಬೇಕಾಗಿದೆ. ನಮ್ಮ ಬೌದ್ಧಿಕ ಶಕ್ತಿಯ ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲಿ ನಡೆದಿರುವ ಸಮಾವೇಶ ಈ ಕೆಲಸವನ್ನು ಮಾಡಬೇಕು. ಸಮಷ್ಟಿ ಹಿತಚಿಂತನೆ ಮಾಡಬೇಕು ಎಂದು ಕರೆ ನೀಡಿದರು.

ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಮಠದ ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು. ಇದೇ ಸಂದರ್ಭದಲ್ಲಿ ಅನಂತರಾಮ ರಾವ್ ಅವರು ಬರೆದ ‘ಭಾಗವತ’ದ ಐದನೇ ಮರುಮುದ್ರಣದ ಆವೃತ್ತಿಯನ್ನು ಪೇಜಾರಶ್ರೀಗಳು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ರಾಮದಾಸ ಮಡಮಣ್ಣಾಯ, ಡಾ.ಬಾಲಕೃಷ್ಣ ಮೂಡಂಬಡಿತ್ತಾಯ, ಕಾರ್ಯಾಧ್ಯಕ್ಷ ಮಂಜುನಾಥ ಉಪಾಧ್ಯಾಯ, ಅಧ್ಯಕ್ಷ ಹರಿಕೃಷ್ಣ ಪುನರೂರು, ಕೇರಳದ ವೆಂಕಟರಮಣ ಪೋತಿ, ರಾಮದಾಸ್ ಭಟ್ ಉಡುಪಿ, ಗೋವಾ ಎನ್‌ಐಟಿ ನಿರ್ದೇಶಕ ಡಾ.ಗೋಪಾಲ ಮುಗೆರಾಯ ಉಪಸ್ಥಿತರಿದ್ದರು.

ಸ್ವಾಗತ ಸಮಿತಿಯ ಪ್ರಧಾನ ಸಂಚಾಲಕರಾದ ಮಂಗಳೂರಿನ ಎಂ.ಬಿ. ಪುರಾಣಿಕ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರೆ, ಪ್ರೊ.ಎಂ.ಎಲ್. ಸಾಮಗ ಕಾರ್ಯಕ್ರಮ ನಿರೂಪಿಸಿದರು. ಮೈಸೂರಿನ ಯು.ಕೆ.ಪುರಾಣಿಕ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News