ಬಿ.ಸಿ.ರೋಡ್: ಡಿ. 21ರಿಂದ ಕರಾವಳಿ ಕಲೋತ್ಸವ

Update: 2019-12-16 17:00 GMT

ಬಂಟ್ವಾಳ, ಡಿ. 16: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಮತ್ತು ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಡಿ. 21ರಿಂದ ಜ.1ರವರೆಗೆ ಕರಾವಳಿ ಕಲೋತ್ಸವ 2019-20 ಬಿ.ಸಿ.ರೋಡಿನ ಗಾಣದಪಡ್ಪು ಮೈದಾನದಲ್ಲಿ ನಡೆಯಲಿದೆ ಎಂದು ಕರಾವಳಿ ಉತ್ಸವದ ಅಧ್ಯಕ್ಷ ಸುದರ್ಶನ್ ಜೈನ್ ಪಂಜಿಕಲ್ಲು ತಿಳಿಸಿದ್ದಾರೆ.

ಸೋಮವಾರ ಸಂಜೆ ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸ್ಥೆಯ ಕಾರ್ಯಕ್ಷೇತ್ರದ ಸಾಧನೆಯನ್ನು ಸಮುದಾಯಕ್ಕೆ ಮನವರಿಕೆ ಮಾಡಿ ಕೊಡುವುದು ಮತ್ತು ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯನ್ನು ಒದಗಿಸಿಕೊಡಬೇಕೆಂಬ ಸದುದ್ದೇಶದಿಂದ ನಡೆಯುವ ಕರಾವಳಿ ಕಲೋತ್ಸವದಲ್ಲಿ ಮಕ್ಕಳ ಚಿಣ್ಣರೋತ್ಸವ, ನಾಟಕೋತ್ಸವ, ರಾಜ್ಯಮಟ್ಟದ ಪಿಲ್ಮಿ ಡ್ಯಾನ್ಸ್ ಸ್ಪರ್ಧೆ, ಜಿಲ್ಲಾ ಮಟ್ಟದ ಸಿಂಗಾರಿ ಮೇಳ(ಚೆಂಡೆ ಸ್ಫರ್ದೆ), ಜಾನಪದ ನೃತ್ಯ, ಭರನಾಟ್ಯ, ಯಕ್ಷಗಾನ ಮೊದಲಾದ ಸಾಂಸ್ಕøತಿಕ ಕಾರ್ಯಕ್ರಮಗಳ ಸಂಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಮೂರು ಸಾವಿರಕ್ಕೂ ಹೆಚ್ಚಿನ ಕಲಾವಿದರು ಭಾಗವಹಿಲಿದ್ದಾರೆ ಎಂದು ಮಾಹಿತಿ ನೀಡಿದರು.

ಉದ್ಘಾಟನಾ ಸಮಾರಂಭ

ಡಿ. 21ರಂದು ಸಂಜೆ 5ರಿಂದ ಬಿ.ಸಿ.ರೋಡು ಅನ್ನಪೂರ್ಣೇಶ್ವರಿ ಕಲಾಮಂಟಪದಿಂದ ಜಾನಪದ ಡಿಬ್ಬಣದ ಮೆರವಣಿಗೆಯು ರಾಜ್ಯ ಹಾಗೂ ಹೊರ ರಾಜ್ಯ ಜಾನಪದ ತಂಡಗಳೊಂದಿಗೆ ನಡೆಯಲಿದ್ದು, ವೈವಿಧ್ಯಮಯ ಕಾರ್ಯಕ್ರಮಗಳ ಪ್ರಸ್ತುತಿಯೊಂದಿಗೆ ಬಿ.ಸಿ.ರೋಡಿನ ಗಾಣದಪಡ್ಪು ಕೀರ್ತಿಶೇಷ ಕದ್ರಿ ಗೋಪಾಲನಾಥ ಕಲಾವೇದಿಕೆಯತ್ತ ಸಾಗಲಿದೆ. ಸಂಜೆ 6.30ಕ್ಕೆ ಕರಾವಳಿ ಕಲೋತ್ಸವ ಉದ್ಘಾಟನಾ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ವಿವಿಧ ವಸ್ತುಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ಉದ್ಘಾಟನೆ, ಚಿಣ್ಣರ ಚಿತ್ತಾರ ಚಿತ್ರಕಲೆ ಪ್ರದರ್ಶನ ಉದ್ಘಾಟನೆ, ಅಮ್ಯೂಸ್‍ಮೆಂಟ್ ಪಾರ್ಕ್ ಉದ್ಘಾಟನೆ ಹಾಗೂ ಕರಾವಳಿ ಸೌರಭ ಪ್ರಶಸ್ತಿಪ್ರಧಾನ  ಹಾಗೂ ಚಿಣ್ಣರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಜಾನಪದ ನೃತ್ಯ ಪ್ರದರ್ಶನ, ರಾಗ ರಂಜಿನಿ ಸಂಗೀತ ರಸಮಂಜರಿ, ಸರಿಗಮಪ, ಚೆಂಡೆ ಸ್ಪರ್ಧೆ, ಕರಾವಳಿ ಸರಿಗಮ, ಸಂಗೀತ ಸ್ಪರ್ಧೆಯ ಮೆಗಾ ಆಡಿಷನ್, ಕರಾವಳಿ ಝೇಂಕಾರ, ರಂಗಭೂಮಿಯಲ್ಲಿ ಸೇವೆಗೈದ ಹಿರಿಯರಿಗೆ ಸನ್ಮಾನ, ಕೃಷ್ಣ ಕೃಷ್ಣ ಶ್ರೀ ಕೃಷ್ಣ ಯಕ್ಷಗಾನ, ಚಿಣ್ಣರೋತ್ಸವ, ನೃತ್ಯವೈಭವ, ಕಾರವಳಿ ಡ್ಯಾನ್ಸ್ ಧಮಾಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಚಿಣ್ಣರ ಲೋಕ ಟ್ರಸ್ಟ್

ಬಂಟ್ವಾಳ ತಾಲೂಕಿನ ಸಜಿಪಮುನ್ನೂರಿನ ಶ್ರೀಶಾರದಾ ಭಜನಾ ಮಂದಿರದಲ್ಲಿ 2006ರಲ್ಲಿ ಪ್ರಾರಂಭಗೊಂಡ ಸಂಸ್ಥೆ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಮಾತ್ರವಲ್ಲ ರಾಜ್ಯಾದಂತ ಪ್ರಸಿದ್ಧವಾಗಿರುವ ಈ ಸಂಸ್ಥೆಯು ಜಿಲ್ಲಾದ್ಯಂತ 43 ಶಾಖೆಗಳನ್ನು ಪ್ರಾರಂಭಿಸಿದೆ. ಸುಮಾರು 5346 ಮಕ್ಕಳು ಯಕ್ಷಗಾನ, ಸಂಗೀತ, ಜಾನಪದ ನೃತ್ಯ , ಚೆಂಡೆ , ನಾಟಕ ಕಲೆ ಇವೇ ಮೊದಲಾದ ಹಲವು ಸಾಂಸ್ಕೃತಿಕ ಚಟುವಟಿಕಗೆಳ ತರಬೇತಿ ಪಡೆಯುತ್ತಿದ್ದಾರೆ ಹಾಗೂ ಪ್ರದರ್ಶನ ನೀಡುತ್ತಿದ್ದಾರೆ. ಹಲವಾರು ಯುವ ಪ್ರತಿಭೆಗಳನ್ನು ಕಲಾ ಪ್ರಪಂಚಕ್ಕೆ ಪರಿಚಯಿಸಿರುವ ಹೆಮ್ಮೆ ಸಂಸ್ಥೆಗಿದ್ದು, ನುರಿತ ಅನುಭವಿ 31 ತರಬೇತುದಾರರಿಂದ ವಿವಿಧ ಕೇಂದ್ರಗಳಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು ಸುದರ್ಶನ್ ಜೈನ್ ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಮೋಹನದಾಸ ಕೊಟ್ಟಾರಿ ಮುನ್ನೂರು, ಪ್ರಮುಖರಾದ ಜಯರಾಂ ರೈ ವಿಟ್ಲ, ಸೀತರಾಮ ಶೆಟ್ಟಿ, ಕಲಾವಿದ ಎಚ್.ಕೆ.ನಯನಾಡು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News