ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ವಿರುದ್ಧ ದೂರು ದಾಖಲು

Update: 2019-12-17 17:35 GMT

ಬಂಟ್ವಾಳ, ಡಿ. 17: ಕಲ್ಲಡ್ಕ ಶ್ರೀ ರಾಮ ವಿದ್ಯಾಕೇಂದ್ರದ ವಾರ್ಷಿಕ ಕ್ರೀಡೋತ್ಸವದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿದ ಬಾಬರಿ ಮಸೀದಿ ಧ್ವಂಸ ಘಟನೆಯ ಮರುಸೃಷ್ಟಿ ಭಾರೀ ವಿವಾದ ಉಂಟುಮಾಡಿರುವ ಬೆನ್ನಲ್ಲೇ, ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸಹಿತ ವಿದ್ಯಾ ಕೇಂದ್ರದ ಆಡಳಿತ ಮಂಡಳಿಯ ಐವರ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಜಾಮೀನು ರಹಿತ ಪ್ರಕರಣ ದಾಖಲಾಗಿದೆ.

ಪಿಎಫ್‍ಐ ಕಲ್ಲಡ್ಕ ವಲಯದ ಸದಸ್ಯ ಅಬೂಬಕರ್ ಸಿದ್ದಿಕ್ ಎಂಬವರು ಸೋಮವಾರ ದೂರು ನೀಡಿದ್ದು, ಐಪಿಸಿ ಸೆಕ್ಷನ್ 295 (ಎ) ಮತ್ತು 298ರಂತೆ ಅಂದು ರಾತ್ರಿ ಪ್ರಕರಣ ದಾಖಲಾಗಿದೆ. ಒಂದು ಸಮುದಾಯದ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಪವಿತ್ರ ವಸ್ತುಗಳನ್ನು ನಾಶ ಮಾಡಲು ಪ್ರಯತ್ನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಯಾರ್ಯಾರ ವಿರುದ್ಧ ದೂರು ?

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಹಿರಿಯ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್, ಶ್ರೀರಾಮ ಶಾಲಾ ಅಧ್ಯಕ್ಷ ನಾರಾಯಣ ಸೋಮಯಾಜಿ, ಶಾಲಾ ಸಂಚಾಲಕ ವಸಂತ ಮಾದವ, ಶಾಲಾ ಸಮಿತಿ ಸದಸ್ಯ ಚನ್ನಪ್ಪ ಕೋಟ್ಯಾನ್ ಹಾಗೂ ಮುಖ್ಯೋಪಾಧ್ಯಾಯರ ಮೇಲೆ ಪ್ರಕರಣ ದಾಖಲಾಗಿದೆ.

ದೂರಿನಲ್ಲೇನಿದೆ ?

ಡಿ. 15ರಂದು ಬಂಟ್ವಾಳ ತಾಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಹೊನಲು ಬೆಳಕಿನ ಕ್ರೀಡೋತ್ಸವ ಕಾರ್ಯಕ್ರಮದಲ್ಲಿ ಶಾಲೆಯ ಅಪ್ರಾಪ್ತ ವಿದ್ಯಾರ್ಥಿಗಳಿಂದ ಬಾಬರಿ ಮಸೀದಿಯ ಮರುಸೃಷ್ಠಿಯ ಮಾಡಿ ಅಣಕು ಪ್ರದರ್ಶನದ ಮೂಲಕ ಧ್ವಂಸ ಮಾಡಲಾಗಿದೆ. ಕೋಮು ಪ್ರಚೋದಿತ ಘೋಷಣೆ ಕೂಗಿದ್ದಲ್ಲದೆ, ಕೋಮು ದ್ವೇಷವನ್ನು ಉತ್ತೇಜನವನ್ನು ವಿದ್ಯಾರ್ಥಿಗಳ ಮೂಲಕ ಪ್ರದರ್ಶಿಸಲಾಗಿದೆ. 1992ರ ಬಾಬರಿ ಮಸೀದಿ ಧ್ವಂಸ ಕಾನೂನು ಬಾಹಿರವೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಅಪ್ರಾಪ್ತ ವಿದ್ಯಾರ್ಥಿಗಳ ಮನಸಿನಲ್ಲಿ ದ್ವೇಷ ಹಾಗೂ ಹಿಂಸೆಯ ಮನೋಭಾವನೆಯನ್ನು ಹುಟ್ಟುಹಾಕಿದ್ದಲ್ಲದೆ, ಮುಸ್ಲಿಂ ಸಮುದಾಯದ ಧಾರ್ಮಿಕ ನಂಬಿಕೆ ಹಾಗೂ ಭಾವನೆಗಳಿಗೆ ನೋವುಂಟಾಗಿದ್ದು, ಅವಮಾನವಾಗಿದೆ.

ಈ ರೀತಿಯ ಉದ್ದೇಶ ಪೂರ್ವಕವಾಗಿ ಅಣಕು ಪ್ರದರ್ಶನ ಮಾಡಿಸಿ ಹಿಂದೂ, ಮುಸ್ಲಿಮರ ನಡುವೆ ಕೋಮು ಗಲಭೆಗೆ, ಹಿಂಸೆಗೆ ಪ್ರಚೋದನೆ ನೀಡಿದಂತಾಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪಿಎಫ್‍ಐ ಕಲ್ಲಡ್ಕ ವಲಯದ ಸದಸ್ಯ ಅಬೂಬಕರ್ ಸಿದ್ದಿಕ್  ದೂರಿನಲ್ಲಿ ತಿಳಿಸಿದ್ದಾರೆ.

ಏನಿದು ವಿವಾದ? 

1992ರ ಡಿ. 6ರಂದು ಕರಸೇವಕರು ಅಯೋಧ್ಯೆಯಲ್ಲಿನ ಬಾಬರಿ ಮಸೀದಿ ಕಟ್ಟಡವನ್ನು ಧ್ವಂಸಗೊಳಿಸಿದ ಘಟನೆಯನ್ನು ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಅಣಕು ಪ್ರದರ್ಶನದ ಮೂಲಕ ತೋರಿಸಿದ್ದು, ಬಾಬರಿ ಮಸೀದಿಯ ಪ್ರತಿಕೃತಿಯುಳ್ಳ ಬ್ಯಾನರೊಂದನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದೂ, ಬಳಿಕ ಇದನ್ನು ಹರಿದು ತುಂಡು ಮಾಡುವ ಮೂಲಕ ಹಾಗೂ ಕಾಲಿನಿಂದ ತುಳಿಯುವ ಮೂಲಕ ಧ್ವಂಸ ಪ್ರಕ್ರಿಯೆಯನ್ನು ಪ್ರಸ್ತುತಪಡಿಸಲಾಗಿತ್ತು.

ಇದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಮುಸ್ಲಿಂ ಪರ ಸಂಘಟನೆಗಳು ಹಾಗೂ ಹಲವು ಇತರರು ಇದೊಂದು ಕೋಮು ಬೀಜ ಬಿತ್ತುವ ಕ್ರಿಯೆ, ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷದ ಭಾವನೆ ಮೊಳಕೆ ಒಡೆಯುವಂತೆ ಮಾಡುತಿದ್ದಾರೆ ಎಂದು ಆರೋಪಿಸಿ ಕಾಮೆಂಟ್‍ಗಳನ್ನು, ಪೋಸ್ಟ್ ಗಳನ್ನೂ ಹಾಕಿದ್ದರು. ಆದರೆ, ಈ ಪ್ರಸ್ತುತಿಯ ಪರವಾಗಿರುವವರು ಇದೊಂದು ಐತಿಹಾಸಿಕ ಘಟನೆ ಅದನ್ನು ಯಥಾವತ್ತಾಗಿ ಪ್ರಸ್ತುತ ಪಡಿಸಿದ್ದಾರೆ ಎಂದು ಸಮರ್ಥಿಸಿದ್ದರು.

ಕಾರ್ಯಕ್ರಮವನ್ನು ವೀಕ್ಷಿಸಿದ ಪಾಂಡಿಚೇರಿಯ ಉಪ ರಾಜ್ಯಪಾಲೆ ಕಿರಣ್‍ಬೇಡಿ ವಾರ್ಷಿಕ ಕ್ರೀಡಾಕೂಟ ಒಂದು ಅತ್ಯಾಪೂರ್ವ ಕಾರ್ಯಕ್ರಮ. ಜ 26ರಂದು ನವದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಇಲ್ಲಿಯ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕು ಎಂದು ಹೇಳಿದ್ದರು. ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸಹಿತ ಇನ್ನೂ ಹಲವು ಗಣ್ಯರು ಹಾಜರಿದ್ದು, ಅವರೆಲ್ಲರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಿತ್ತು.

ಇನ್ನು ವಿವಾದದ ಸಂಬಂಧ ಮಾತನಾಡಿದ್ದ ಪ್ರಭಾಕರ ಭಟ್, ಬಾಬರಿ ಮಸೀದಿ ಧ್ವಂಸ ಒಂದು ಐತಿಹಾಸಿಕ ಘಟನೆ. ಅದು ಬಾಬರಿ ಕಟ್ಟಡವಾಗಿದ್ದು, ಬಾಬರಿ ಮಸೀದಿ ಅಲ್ಲ. ಅದನ್ನ ನಾಟಕದ ಸ್ವರೂಪದಲ್ಲಿ ತೋರಿಸುವುದುವುರಲ್ಲಿ ತಪ್ಪೇನಿದೆ ? ತಮ್ಮನ್ನು ಕಂಡರಾಗದವರು ಕ್ರೀಡೋತ್ಸವ ಕಾರ್ಯಕ್ರಮದ ಒಂದು ತುಣುಕನ್ನು ತೋರಿಸಿ ಕೋಮು ಸೌಹಾರ್ದತೆ ಕೆದಕುವ ಯತ್ನ ನಡೆಸಿದ್ದಾರೆ ಎಂದಿದ್ದಾರೆನ್ನುವ ಖಾಸಗಿ ಸುದ್ದಿವಾಹಿಸಿಯೊಂದು ವರದಿ ಮಾಡಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News