ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ: ರವಿಕಿರಣ್ ಪುಣಚ

Update: 2019-12-17 07:48 GMT

ಮಂಗಳೂರು, ಡಿ.17: ಹಿಂದಿನ ರಾಜ್ಯ ಸರಕಾರ ಘೋಷಿಸಿದ ಬೆಳೆ ಸಾಲ ಮನ್ನಾ ಯೋಜನೆಯಲ್ಲಿ ಅರ್ಹ ಫಲಾನುಭವಿ ರೈತರ ಖಾತೆಗೆ ತಕ್ಷಣ ಹಣ ಜಮಾ ಮಾಡುವ ಜತೆಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ರೈತ ಸಂಘ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ ಒತ್ತಾಯಿಸಿದ್ದಾರೆ.

ಕರ್ನಾಟಕ ರಜ್ಯಾ ರೈತ ಸಂಘ ಹಾಗೂ ಹಸಿರು ಸೇನೆಯ ದ.ಕ. ಜಿಲ್ಲಾ ಘಟಕದ ಆಶ್ರಯದಲ್ಲಿ ಇಂದು ಜಿಲ್ಲೆಯ ರೈತರ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ನಡೆದ ಹಕ್ಕೊತ್ತಾಯ ಸಭೆಯ್ನುದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಹಕ್ಕೊತ್ತಾಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಅಡಿಕೆ ಬೆಳೆಗಾರರು ಹಳದಿ ಎಲೆ ರೋಗದಿಂದ ನಷ್ಟ ಅನುಭವಿಸಿರುವ ಹಿನ್ನೆಲೆಯಲ್ಲಿ ಪರಿಹಾರ ನೀಡಬೇಕು. ಜಿಲ್ಲೆಯಲ್ಲಿ ಮಂಕಿ ಪಾರ್ಕ್ ಮತ್ತು ನವಿಲು ಪಾರ್ಕ್ ನಿರ್ಮಾಣ ಮಾಡಿ ರೈತರ ಬೆಳೆ ರಕ್ಷಣೆ ಮಾಡಬೇಕು.ವಿಲೇವಾರಿಯಾಗದೆ ಉಳಿದಿರುವ 94ಸಿ,94ಸಿಸಿ ಅರ್ಜಿಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಋಣ ಮುಕ್ತ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಬೇಕು. ಭತ್ತದ ಬೆಳೆಗೆ ವಿಶೇಷ ಪ್ಯಾಕೇಜ್ ನೀಡಬೇಕು. ರಬ್ಬರ್ ಬೆಳೆಗಾರರಿಗೆ ಬೆಂಬಲ ಬೆಲೆ ನೀಡಬೇಕು. ಮೂಡಬಿದಿರೆಯ ಯುಜಿಡಿ ಕಾಮಗಾರಿಯನ್ನು ತಕ್ಷಣ ಅನುಷ್ಠಾನಗೊಳಿಸಬೇಕು ಬಂಟ್ವಾಳ ಎಪಿಎಂಸಿಗೆ ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡೇಕು ಎಂದು ಅವರು ಆಗ್ರಹಿಸಿದರು.

ಹಕ್ಕೊತ್ತಾಯ ಸಭೆಯಲ್ಲಿ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡಿಸ್, ಜಿಲ್ಲಾ ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಪೆರಾಬೆ, ಜಿಲ್ಲಾ ಉಪಾಧ್ಯಕ್ಷ ದಿವಾಕರ ಪೈ, ಶ್ರೀನಿವಾಸ ಗೌಡ ನಿಡಿಂಜಿ ಮೊದಲಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News