ಕನ್ನಡಕ್ಕಿಂತ ಶ್ರೀಮಂತ ಭಾಷೆ ಇನ್ನೊಂದಿಲ್ಲ: ಲಾಲಾಜಿ ಮೆಂಡನ್
ಕಾಪು, ಡಿ.17: ಕನ್ನಡ ಭಾಷೆಗಿಂತ ಶ್ರೀಮಂತವಾದ ಭಾಷೆ ಇನ್ನೊಂದಿಲ್ಲ. ಸಾಕಷ್ಟು ಸಾಹಿತ್ಯ ಭಂಡಾರವೇ ಕನ್ನಡ ಭಾಷೆಯಲ್ಲಿದೆ. ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡ ಬೇಕು ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದ್ದಾರೆ.
ಮೂಡುಬೆಳ್ಳೆಯ ಸಂತ ಲಾರೆನ್ಸ್ ಚರ್ಚ್‌ನ ಸೌಹಾರ್ದ ಸಭಾಭವನದಲ್ಲಿ ಮಂಗಳವಾರ ಆಯೋಜಿಸಲಾದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾಪು ಘಟಕದ ಕಾಪು ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರಿಗಿಂತ ಅನ್ಯ ಭಾಷಿ ಗರ ಸಂಖ್ಯೆಯೇ ಹೆಚ್ಚಿದೆ. ಇಂದು ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಕನ್ನಡ ಭಾಷೆಯನ್ನು ಉಳಿಸಿಕೊಂಡು ಆಂಗ್ಲ ಭಾಷೆಯನ್ನು ಕಲಿಸುವ ಕಾರ್ಯ ಆಗಬೇಕು ಎಂದರು.
ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಆಶೀ ವರ್ಚನ ನೀಡಿ, ಕನ್ನಡ ಸಾಹಿತ್ಯದಲ್ಲಿ ಸಾಕಷ್ಟು ಜ್ಞಾನ ಇದೆ. ಅದನ್ನು ಅಧ್ಯಯನ ಮಾಡುವ ಮೂಲಕ ನಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಮಕ್ಕಳಲ್ಲಿ ಕನ್ನಡದ ಬಗ್ಗೆ ಪ್ರೀತಿ ಬೆಳೆಸಲು ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು ಎಂದು ತಿಳಿಸಿದರು.
ಕೃತಿಗಳನ್ನು ಬಿಡುಗಡೆಗೊಳಿಸಿದ ಕಸಾಪ ರಾಜ್ಯ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಯಾವುದೇ ಭಾಷೆಯಲ್ಲಿ ಕಲಿತರೂ ಮಾತೃ ಭಾಷೆಯನ್ನು ಮಾತ್ರ ಎಂದಿಗೂ ಮರೆಯಬಾರದು. ಹೊರಗಿನಿಂದ ಬಂದು ಇಲ್ಲಿ ಹಲವು ವರ್ಷಗಳ ಕಾಲ ನೆಲೆಸಿರುವವರಿಗೆ ಕನ್ನಡ ಕಲಿಸುವ ಕೆಲಸ ಮಾಡ ಬೇಕು. ಅದು ಬಿಟ್ಟು ಅವರ ಭಾಷೆಯನ್ನೇ ನಾವು ಕಲಿತು ವ್ಯವಹರಿಸು ವುದು ಸರಿಯಲ್ಲ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷತೆಯನ್ನು ಸಂಶೋಧಕ, ಹಿರಿಯ ಜಾನಪದ ವಿದ್ವಾಂಸ ಕೆ.ಎಲ್ ಕುಂಡಂತಾಯ ವಹಿಸಿದ್ದರು. ಮೂಡುಬೆಳ್ಳೆ ಚರ್ಚ್‌ನ ಧರ್ಮಗುರು ಅತಿ ವಂ.ಕ್ಲೆಮೆಂಟ್ ಮಸ್ಕರೇನಸ್ ಮಾತನಾಡಿದರು. ಜಿಪಂ ಸದಸ್ಯ ವಿಲ್ಸನ್ ರೋಡ್ರಿಗಸ್, ಹರೀಶ್ ಕಟಪಾಡಿ ಸಂಪಾದಿಸಿದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಕಸಾಪ ಜಿಲ್ಲಾ ಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿದರು.
ಪ್ರಥಮ ಸಮ್ಮೇಳನದ ಸರ್ವಾಧ್ಯಕ್ಷ ಮುದ್ದು ಮೂಡಬೆಳ್ಳೆ ಧ್ವಜ ಹಸ್ತಾಂತರಿಸಿದರು. ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಎಸ್.ಹೆಗ್ಡೆ ರಾಷ್ಟ್ರಧ್ವಜಾ ರೋಹಣ ಮತ್ತು ಕಾಪು ಕಸಾಪ ಅಧ್ಯಕ್ಷ ಪುಂಡಲೀಕ ಮರಾಟೆ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಸ್ವಾಗತ ಸಮಿತಿಯ ಉಪಾಧ್ಯಕ್ಷ ಶಿವಾಜಿ ಸುವರ್ಣ ನುಡಿ ನಮನ ಸಲ್ಲಿಸಿದರು. ಕಾರ್ಕಳ ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಸಂದೇಶ ವಾಚಿಸಿದರು.
ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯೆ ಶಿಲ್ಪಾ ಸುವರ್ಣ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್, ತಾಪಂ ಸದಸ್ಯೆ ಸುಜಾತಾ ಸುವರ್ಣ, ಬಂಟಕಲ್ಲು ಶ್ರೀದುರ್ಗಾಪರ ಮೇಶ್ವರಿ ದೇವಳದ ಮೊಕ್ತೇಸರ ಶಶಿಧರ ವಾಗ್ಳೆ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಶಿರ್ವ ಎಸ್ಸೈ ಅಬ್ದುಲ್ ಖಾದರ್, ಮೆಸ್ಕಾಂ ಹಿರಿಯ ಅಧಿಕಾರಿ ಮಾರ್ತಾಂಡಪ್ಪ, ಬ್ರಹ್ಮಾವರ ಕಸಾಪ ಅಧ್ಯಕ್ಷ ನಾರಾಯಣ ಮಡಿ, ಭಾರತ ಸೇವಾದಳದ ಪಕೀರ ಗೌಡ, ಆರೂರು ತಿಮ್ಮಪ್ಪಶೆಟ್ಟಿ ಉಪಸ್ಥಿತರಿದ್ದರು.
ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಕಟ್ಟಿಂಗೇರಿ ದೇವದಾಸ ಹೆಬ್ಬಾರ್ ಸ್ವಾಗತಿಸಿದರು. ಕಾರ್ಯದರ್ಶಿ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ವಂದಿಸಿದರು. ಉಪನ್ಯಾಸಕ ಎಡ್ವರ್ಡ್ ಲಾರ್ಸನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
ವೈಭವದ ಶೋಭಾಯಾತ್ರೆ
ಮೂಡುಬೆಳ್ಳೆ ಪೇಟೆಯಿಂದ ಸಮ್ಮೇಳನದ ಸಭಾಂಗಣದವರೆಗೆ ಕನ್ನಡ ಮಾತೆ ಭುವನೇಶ್ವರಿ ದೇವಿಯ ವೈಭವದ ಶೋಭಾಯಾತ್ರೆ ನಡೆಯಿತು. ಇದಕ್ಕೆ ಕಾಣಿ ಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಸಮ್ಮೇಳನದಲ್ಲಿ ಪ್ರಧಾನ ಗೋಷ್ಠಿ, ಕವಿಗೋಷ್ಠಿ ಮತ್ತು ಮಕ್ಕಳ ಗೋಷ್ಠಿಗಳು ಹಾಗೂ ವಿವಿಧ ಮನೊರಂಜನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಚಿತ್ರಕಲಾ ಪ್ರದರ್ಶನ, ಪುಸ್ತಕ ಪ್ರದರ್ಶನ ಮತ್ತು ಮಾರಾಟ ಆಕರ್ಷಕವಾಗಿತ್ತು.