2020ನೆ ಸಾಲಿನ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಹೆಸರು ಸೇರ್ಪಡೆ-ತಿದ್ದುಪಡಿಗೆ ಅವಕಾಶ
ಮಂಗಳೂರು, ಡಿ.17: ಭಾರತದ ಚುನಾವಣಾ ಆಯೋಗವು ರಾಷ್ಟ್ರೀಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಮಾಡಿದ್ದು, ಡಿ.16ರಿಂದ ಅದನ್ನು ಪ್ರಕಟಿಸಲಾಗಿದೆ. ಮತದಾರರು ಈ ಪಟ್ಟಿಯನ್ನು ವೀಕ್ಷಿಸಿ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಅಲ್ಲದೆ, ಹೆಸರು ಸೇರ್ಪಡೆ ಮತ್ತು ತಿದ್ದುಪಡಿಗೂ ಅವಕಾಶ ಕಲ್ಪಿಸಲಾಗಿದೆ. ಇದೊಂದು ವಿಶೇಷ ಪರಿಷ್ಕರಣೆ ಪಟ್ಟಿಯಾದ ಕಾರಣ ಮತದಾರರು ಜಿಲ್ಲಾಡಳಿತದೊಂದಿಗೆ ಸಹಕರಿಸಲು ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಹೇಳಿದರು.
ದ.ಕ.ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.16ರಿಂದ 2020ರ ಜನವರಿ 15ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲಾಗುತ್ತದೆ. ಜನವರಿ 27ರಂದು ಅವುಗಳ ವಿಲೇವಾರಿ ಮಾಡಲಾಗುವುದು. ಫೆಬ್ರವರಿ 7ರಂದು ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದರು.
ಕರಡು ಮತದಾರರ ಪಟ್ಟಿಯನ್ನು ಜಿಲ್ಲೆಯ ಎಲ್ಲಾ ತಾಲೂಕು ಕಚೇರಿ ಮತ್ತು ಎಲ್ಲಾ ಮತಗಟ್ಟೆಗಳಲ್ಲಿ ಪ್ರಚುರಪಡಿಸಲಾಗಿದೆ. ಇದಕ್ಕಾಗಿ ನೋಂದಣಾಧಿಕಾರಿ ಮತ್ತು ಸಹಾಯಕ ನೋಂದಣಾಧಿಕಾರಿಯನ್ನು ನಿಯುಕ್ತಿಗೊಳಿಸಲಾಗಿದೆ. ಡಿ.16ರಂದು ಪ್ರಕಟಿಸಲಾದ ಕರಡು ಮತದಾರರ ಪಟ್ಟಿಯ ಪ್ರಕಾರ ಜಿಲ್ಲೆಯಲ್ಲಿ 8,38, 185 ಪುರುಷರು, 8,69,381 ಮಹಿಳೆಯರು, 86 ತೃತೀಯ ಲಿಂಗಿಗಳ ಸಹಿತ 17,07,652 ಮತದಾರರಿದ್ದಾರೆ. 2019ರ ಲೋಕಸಭಾ ಚುನಾವಣೆಯ ಸಂದರ್ಭ 17,24,458 ಮತದಾರರಿದ್ದರೆ, ಇದೀಗ 16,806 ಮತದಾರರು ಹೆಚ್ಚಾಗಿದ್ದಾರೆ ಎಂದರು.
ಮಿಂಚಿನ ನೋಂದಣಿ: 2020ರ ಜನವರಿ 1ರಿಂದ ಅನ್ವಯವಾಗುವಂತೆ 18 ವರ್ಷ ಪ್ರಾಯ ತುಂಬಿದ ಮತ್ತು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದ ಅರ್ಹ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲು ಜನವರಿ 6ರಿಂದ 8ರವರೆಗೆ ಮಿಂಚಿನ ನೋಂದಣಿ ಕಾರ್ಯಕ್ರಮವನ್ನು ಎಲ್ಲಾ ಮತಗಟ್ಟೆಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5:30ರವರೆಗೆ ಮಾಡಲಾಗುವುದು. ವಯಸ್ಸಿನ ದೃಢೀಕರಣಕ್ಕಾಗಿ ಶಾಲಾ ಪ್ರಮಾಣ ಪತ್ರಗಳು, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಪಾಸ್‌ಪೋರ್ಟ್, ಎಸೆಸ್ಸೆಲ್ಸಿ/ಪಿಯುಸಿ ಅಂಕಪಟ್ಟಿಗಳು, ಪಾನ್ ಕಾರ್ಡ್, ವೈದ್ಯಕೀಯ ಪ್ರಮಾಣ ಪತ್ರಗಳು, ವಾಸಸ್ಥಳದ ದೃಢೀಕರಣಕ್ಕಾಗಿ ಪಡಿತರ ಚೀಟಿ, ಆಧಾರ್ ಕಾರ್ಡ್, ಗ್ಯಾಸ್ ಸಿಲಿಂಡರ್ ರಶೀದಿ, ವಿದ್ಯುತ್ ಬಿಲ್ ಪಾವತಿ ರಶೀದಿ, ಪಾಸ್‌ಬುಕ್ ಪ್ರತಿ, ಬಾಡಿಗೆ ಕರಾರುಪತ್ರ ಮತ್ತಿತರ ದಾಖಲೆಪತ್ರಗಳ ಪೈಕಿ ಯಾವುದಾದರು ಒಂದನ್ನು ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋಗಳನ್ನು ನೀಡಬೇಕಾಗಿದೆ.
ತಿದ್ದುಪಡಿಗೆ ಅವಕಾಶ: ನಮೂನೆ 6ರಲ್ಲಿ 18 ವರ್ಷ ಪೂರೈಸಿದ ಹೊಸ ಮತದಾರರು, ಒಂದು ವಿಧಾನ ಸಭಾ ಕ್ಷೇತ್ರದಿಂದ ಮತ್ತೊಂದೆಡೆ ವಾಸಸ್ಥಳ ಬದಲಾಯಿಸಿದವರು ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದು. ನಮೂನೆ ‘6ಎ’ರಲ್ಲಿ ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು, ನಮೂನೆ 7ರಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು, ನಮೂನೆ 8ರಲ್ಲಿ ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದ ದೋಷಗಳಿದ್ದರೆ ಸರಿಪಡಿಸಲು, ನಮೂನೆ ‘8ಎ’ರಲ್ಲಿ ಒಂದೇ ವಿಧಾನ ಸಭಾ ಕ್ಷೇತ್ರದೊಳಗೆ ವಾಸ್ಥಳ ಬದಲಾಯಿಸಿದ ಸಂದರ್ಭ ಅರ್ಜಿ ಸಲ್ಲಿಸಬಹುದು.
ಹೊಸದಾಗಿ ಸೇರ್ಪಡೆಯಾಗಿರುವ ಯುವ ಮತದಾರರಿಗೆ ಹಾಗೂ ಮೊದಲ ಬಾರಿ ಸೇರ್ಪಡೆಗೊಂಡ ಮತದಾರರಿಗೆ ಉಚಿತ ಗುರುತಿನ ಚೀಟಿ ನೀಡಲಾಗುವುದು. ನಮೂನೆ 8 ಮತ್ತು 8 ಎರಲ್ಲಿ ಅರ್ಜಿ ಸಲ್ಲಿಸಿ ತಿದ್ದುಪಡಿ/ವರ್ಗಾವಣೆ ಮಾಡಿಸಿಕೊಂಡ ಮತದಾರರಿಗೆ ಪ್ರತೀ ಕಾರ್ಡಿಗೆ 30 ರೂ. ಶುಲ್ಕ ಪಡೆದು ಗುರುತಿನ ಚೀಟಿ ನೀಡಲಾಗುತ್ತದೆ.
ಸಹಾಯವಾಣಿ: ಮತದಾರರಿಗೆ ಸಂಬಂಧಿಸಿದ ವಿಚಾರಣೆಗಾಗಿ 1950 (ಟೋಲ್‌ಫ್ರೀ) ಸಹಾಯವಾಣಿಯನ್ನು ಸಂಪರ್ಕಿ ಸಬಹುದಾಗಿದೆ. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ರೂಪಾ ಎಂಜೆ ಉಪಸ್ಥಿತರಿದ್ದರು.
ಕರಾವಳಿ ಉತ್ಸವ ದಿನಾಂಕ ಬದಲಾವಣೆ
ಕರಾವಳಿ ಉತ್ಸವವನ್ನು ಜನವರಿ 3ರಿಂದ ನಡೆಸಲು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಜನವರಿ 3ರ ಬದಲು ಜನವರಿ 10ರಿಂದ 19ರವರೆಗೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು.