ಸಿಎಎ, ಎನ್‌ಆರ್‌ಸಿ ದೇಶದ ಸಂವಿಧಾನ, ಹಿಂದೂಗಳ ಬೆನ್ನಿಗೆ ಚೂರಿ ಹಾಕುವ ಕಾಯ್ದೆ : ಶಿವಸುಂದರ್

Update: 2019-12-19 09:31 GMT

 ಉಡುಪಿ, ಡಿ.17: ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಎಂಬ ಎರಡು ಕಾಯ್ದೆಗಳು ಮುಸ್ಲಿಮರ ಎದೆಗೆ ನೇರವಾಗಿ ಚೂರಿ ಹಾಕಿದರೆ, ಈ ದೇಶದ ಹಿಂದೂ ಮತ್ತು ಸಂವಿಧಾನದ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಲಿದೆ. ಆದುದರಿಂದ ಇದರ ವಿರುದ್ಧ ಹಿಂದೂ ಹಾಗೂ ಮುಸ್ಲಿಮರು ಜಂಟಿ ಹೋರಾಟ ಮಾಡಬೇಕು ಎಂದು ಅಂಕಣಕಾರ ಹಾಗೂ ಪ್ರಗತಿಪರ ಹೋರಾಟಗಾರ ಶಿವಸುಂದರ್ ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಹಾಗೂ ಸಹಭಾಗಿ ಸಂಘಟನೆಗಳ ವತಿಯಿಂದ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಇದು ದೇಶದ ಆತ್ಮವನ್ನು ಉಳಿಸುವ ಮತ್ತು ಭಾರತವನ್ನು ಪಾಕಿಸ್ತಾನವನ್ನಾಗಿ ಮಾಡಲು ಹೊರಟವರ ವಿರುದ್ಧ ಮಾಡುತ್ತಿರುವ ಹೋರಾಟ ಆಗಿದೆ. ಈಗ ನಮ್ಮ ಮೇಲೆ ಯುದ್ಧ ಸಾರಿರುವುದು ಪಾಕಿಸ್ತಾನ, ಅಮೆರಿಕಾ ಅಲ್ಲ. ಬದಲು ನಮ್ಮನ್ನು ಆಳುವ ಸರಕಾರವೇ ನಮ್ಮ ಮೇಲೆ ದಾಳಿ ನಡೆಸುತ್ತಿದೆ. ಇವರು ಬ್ರಿಟಿಷ ರಂತೆ ಧರ್ಮ ಆಧಾರಿತವಾಗಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದು ಕೇವಲ ಮುಸ್ಲಿಮರ ಮೇಲಿನ ದಾಳಿ ಅಲ್ಲ, ದೇಶದ ಆತ್ಮ, ಸಂವಿಧಾನ ಮತ್ತು ಮುಸ್ಲಿಮರೇತರ ಮೇಲೂ ನಡೆಯುತ್ತಿರುವ ದಾಳಿಯಾಗಿದೆ ಎಂದು ಅವರು ಹೇಳಿದರು.

‘ಎನ್‌ಆರ್‌ಸಿ ಹಾಗೂ ಸಿಎಎಗೆ ನೇರ ಸಂಬಂಧ ಇದೆ ಮತ್ತು ಇದು ಹಿಂದೂಗಳಿಗೆ ಮಾತ್ರ ರಕ್ಷಣೆ ಕೊಡುತ್ತದೆ’ ಎಂದು ಪಶ್ಚಿಮ ಬಂಗಾಲದ ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಹೇಳಿದ್ದಾರೆ. ಆ ತುಣುಕು ಬಿಜೆಪಿಯ ವೆಬ್ ಸೈಟ್‌ನಲ್ಲಿ ಈಗಲೂ ಇದೆ. ಹಾಗಾಗಿ ಪೊಲೀಸರು ಶಾಂತಿ ಭಂಗದ ಆಧಾರದಲ್ಲಿ ಯಾರನ್ನಾದರೂ ಬಂಧಿಸಬೇಕಾದರೆ ಮೊದಲು ಈ ದೇಶದ ಗೃಹ ಸಚಿವ ಅಮಿತ್ ಶಾರನ್ನು ಬಂಧಿಸಬೇಕು. ಶಾಂತಿಯಿಂದ ಕೂಡಿದ್ದ ಈ ದೇಶಕ್ಕೆ, ನೆಮ್ಮದಿಯಿಂದ ಬದುಕು ಸಾಗಿಸುತ್ತಿದ್ದ ಈ ದೇಶದ ಜನರಲ್ಲಿ ಈ ಕಾಯ್ದೆ ಮೂಲಕ ಆತಂಕ ಬಿತ್ತುವ ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಜೆಪಿಗೆ ಮುಸ್ಲಿಮರ ಓಟು ಅಗತ್ಯ ಇಲ್ಲ. ಕಳೆದ ಎರಡು ಚುನಾವಣೆ ಯಲ್ಲಿ ಬಿಜೆಪಿಯು ಮುಸ್ಲಿಮರಿಗೆ ಟಿಕೆಟೇ ನೀಡಿಲ್ಲ. ಆದರೆ ವಿರೋಧ ಪಕ್ಷಗಳಿಗೆ ಮುಸ್ಲಿಮರ ಓಟು ಇದೆ. ಅದಕ್ಕಾಗಿ ಈ ದೇಶದ 14 ಕೋಟಿ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಂಡು ಇವರೆಲ್ಲ ಈ ದೇಶದ ನಾಗರಿಕರೇ ಅಲ್ಲ ಎಂದು ಹೇಳಲು ಹೊರಟಿದೆ. ವಿರೋಧ ಪಕ್ಷದ ಓಟಿನ ನೆಲೆಯಾಗಿರುವ ಮತ್ತು ಹಿಂದುತ್ವಕ್ಕೆ ಸೈದ್ಧಾಂತಿಕವಾಗಿ ವಿರೋಧವಾಗಿರುವ ಮುಸ್ಲಿಮರಿಗೆ ಪೌರತ್ವವನ್ನು ನಿರಾಕರಿಸುವ ಹುನ್ನಾರದ ಭಾಗವಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ತಿಳಿಸಿದರು.

ಗೃಹ ಸಚಿವಾಲಯದ ಸುತ್ತೋಲೆ ಹೇಳುವ ಪ್ರಕಾರ ಈ ಕಾಯ್ದೆಯಂತೆ ಎಲ್ಲರಿಗೂ ಬೇಕಾಬಿಟ್ಟಿಯಾಗಿ ನಾಗರಿಕತ್ವ ಸಿಗುವುದಿಲ್ಲ. ಇಲ್ಲಿರುವ ಹಿಂದೂಗಳು ಬಾಂಗ್ಲಾದೇಶ, ಪಾಕಿಸ್ತಾನ, ಅಪಘಾನಿಸ್ತಾನದಲ್ಲಿ ನಾಗರಿಕರಾಗಿ ಧಾರ್ಮಿಕ ಧಮನಕ್ಕೆ ತುತ್ತಾಗಿರುವುದನ್ನು ಸಾಬೀತು ಪಡಿಸಬೇಕು. ಭಾರತೀಯ ಎಂಬುದಕ್ಕೆ ದಾಖಲೆ ಇಲ್ಲದವರು ಇನ್ನು ಹೊರ ದೇಶದದಿಂದ ದಾಖಲೆಗಳನ್ನು ಹೇರೆ ತರಲಿ. ಆದುದರಿಂದ ಇದು ಹಿಂದೂಗಳಿಗೆ ಮಾಡುವ ಬಹಳ ದೊಡ್ಡ ಮೋಸ ವಾಗಿದೆ ಎಂದು ಶಿವಸುಂದರ್ ತಿಳಿಸಿದರು.

‘ದೇಶವನ್ನು ಉಳಿಸುವ ಮತ್ತೊಂದು ಸ್ವಾತಂತ್ರ ಸಂಗ್ರಾಮ’

ಸಿಎಎ ಮತ್ತು ಎನ್‌ಆರ್‌ಸಿ ಭಾರತವನ್ನು ಒಡೆಯುವ, ಮೂಲಭೂತವಾಗಿ ತಾರತಮ್ಯ ಎಸಗುವ ಮತ್ತು ದೇಶಕ್ಕೆ ಬೆಂಕಿ ಹಚ್ಚುವ ಕಾಯ್ದೆ ಎಂಬುದಾಗಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಸಂಶೋಧಕ ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ಅದೇ ರೀತಿ ಇದರ ವಿರುದ್ಧ ಈಶಾನ್ಯ ಭಾರತದ ಜನ ಮಾತ್ರ ವಲ್ಲ ಇಡೀ ಭಾರತದ ಪ್ರತಿಯೊಂದು ರಾಜ್ಯಗಳಲ್ಲೂ ಧ್ವನಿ ಎತ್ತಲಾಗುತ್ತಿದೆ. ಇದು ಕೇವಲ ಮುಸ್ಲಿಮರ ಹೋರಾಟ ಅಲ್ಲ. ಬದಲಾಗಿ ಈ ದೇಶವನ್ನು ಉಳಿಸಿಕೊಳ್ಳುವ ಮತ್ತೊಂದು ಸ್ವಾತಂತ್ರ ಸಂಗ್ರಾಮ ಆಗಿದೆ ಎಂದು ಶಿವಸುಂದರ್ ಹೇಳಿದರು.

ಕಾಶ್ಮೀರ, ಅಯೋಧ್ಯೆ ಮುಗಿದು ಇದೀಗ ಈ ಕಾಯ್ದೆ ಮೂಲಕ ದೇಶದ ಅಲ್ಪಸಂಖ್ಯಾತರು ಶಾಶ್ವತವಾಗಿ ಆತಂಕದಲ್ಲಿರುವಂತೆ ಮತ್ತು ಬಹುಸಂಖ್ಯಾತ ಹಿಂದೂಗಳಿಗೆ ತಮ್ಮ ಬದುಕನ್ನು ಕಿತ್ತುಕೊಳ್ಳುತ್ತಿರುವುದು ಅರ್ಥವಾಗದಂತೆ ಭ್ರಾಂತಿ ಹುಟ್ಟಿಸಲು ಹೊಸ ತಂತ್ರವನ್ನು ಬಿಜೆಪಿ ಮಾಡುತ್ತಿದೆ. ಕಳೆದ 45 ವರ್ಷಗಳಲ್ಲಿ ದೇಶ ಕಂಡರಿಯದ ರೀತಿಯ ಬಡತನ ಹಾಗೂ ಬಿಕ್ಕಟ್ಟಿನಿಂದ ನರಳುತ್ತಿದೆ. ಇದರಿಂದ ನಮ್ಮ ಗಮನವನ್ನು ಬೇರೆ ಕಡೆ ಹರಿಸಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಸ್ರೇಲ್ ಮಾದರಿಯಲ್ಲಿ ಈ ದೇಶವನ್ನು ಒಡೆದು ಆಳಲು ಇವರು ಹೊರಟಿದ್ದಾರೆ ಎಂದು ಅವರು ದೂರಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News