'ಏಜೆನ್ಸಿಗಳ ಮೂಲಕ ವಿದೇಶಗಳಿಗೆ ತೆರಳುವವರ ಗಮನಕ್ಕೆ'

Update: 2019-12-18 07:48 GMT

ಬೆಂಗಳೂರಿನ ಕೋರಮಂಗಲದಲ್ಲಿ ಪಿಒಇ ಕಚೇರಿ ಕಾರ್ಯಾರಂಭ

ವಿದೇಶಗಳಿಗೆ ತೆರಳುವ ಭಾರತೀಯ ಉದ್ಯೋಗಿಗಳ ಹಿತಾಸಕ್ತಿ ಕಾಪಾಡುವ ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್) ಕಚೇರಿಯು ಸದ್ಯ ಬೆಂಗಳೂರಿನಲ್ಲಿ ಕಾರ್ಯಾರಂಭಿಸಿದೆ. ಆದರೆ ಈವರೆಗೆ ಕರ್ನಾಟಕದಲ್ಲಿ ಪಿಒಇ ಕಚೇರಿ ಇಲ್ಲವಾಗಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ಕತರ್, ಒಮಾನ್, ಕುವೈತ್, ಬಹ್‌ರೈನ್, ಮಲೇಷ್ಯಾ, ಲಿಬಿಯಾ, ಜೋರ್ಡಾನ್, ಯೆಮೆನ್, ಸುಡಾನ್, ಬ್ರೂನೆ, ಅಫ್ಘಾನಿಸ್ತಾನ, ಇಂಡೋನೇಷ್ಯ, ಸಿರಿಯಾ, ಲೆಬನಾನ್ ಮತ್ತು ಥೈಲ್ಯಾಂಡ್‌ಗೆ ಉದ್ಯೋಗಕ್ಕೆ ಹೋಗಲು ಬಯಸುವವರು, ವಲಸೆ ಪರಿಶೀಲನೆ ಅಗತ್ಯ ಪಾಸ್‌ ಪೋರ್ಟ್‌ಗಳನ್ನು ಹೊಂದಿರುವವರು Emigration Check Required (ECR) ಕ್ಲಿಯೆರೆನ್ಸ್‌ಗಾಗಿ ಆನ್‌ಲೈನ್ ಮೂಲಕ ಅಥವಾ ಚೆನ್ನೈಗೆ ಪ್ರಯಾಣಿಸಬೇಕಾಗಿತ್ತು. 2013ನೇ ತಂಡದ ಐಎಫ್‌ಎಸ್ (ಭಾರತೀಯ ವಿದೇಶಿ ಸೇವೆಗಳು) ಅಧಿಕಾರಿ ಶುಭಂ ಸಿಂಗ್ ಈಗ ಬೆಂಗಳೂರಿನ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಮಂಗಳೂರು, ಡಿ.18: ಸಾಗರೋತ್ತರ ರಾಷ್ಟ್ರಗಳಿಗೆ ಉದ್ಯೋಗಿಗಳನ್ನು ರವಾನಿಸುವ ವ್ಯವಹಾರ ನಡೆಸುವ ಸಂಸ್ಥೆಗಳು ಭಾರತದ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಡಿ ಕಾರ್ಯಾಚರಿಸುತ್ತಿರುವ ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್- ಪಿಒಇ) ಕಚೇರಿಯಿಂದ ನೋಂದಣಿ ಪ್ರಮಾಣ ಪತ್ರವನ್ನು ಪಡೆಯಬೇಕಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ಇಂತಹ ಸುಮಾರು 15ರಷ್ಟು ಸಂಸ್ಥೆಗಳು ಮಾತ್ರವೇ ನೋಂದಣಿಯಾಗಿವೆ. ನೋಂದಣಿಯಾಗದೆ ರಾಜ್ಯದಿಂದ ಉದ್ಯೋಗಿಗಳನ್ನು ವಿದೇಶಕ್ಕೆ ಕಳುಹಿಸುವ ಅಕ್ರಮ ವ್ಯವಹಾರವನ್ನು ನಡೆಸುತ್ತಿದ್ದಲ್ಲಿ ಅದನ್ನು ತಕ್ಷಣ ನಿಲ್ಲಿಸಬೇಕು ಎಂದು ಕೇಂದ್ರ ಸರಕಾರದ ಅಧೀನದ ಬೆಂಗಳೂರಿನ ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್) ಅಧಿಕಾರಿ ಶುಭಂ ಸಿಂಗ್ (ಐಎಫ್‌ಎಸ್) ತಿಳಿಸಿದ್ದಾರೆ.

ಡಿಸೆಂಬರ್ 3ರಂದು ಬೆಂಗಳೂರಿನ ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಲ್ಲಿ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಕಚೇರಿ ಕಾಯಾರಂಭಿಸಿದ ಬಳಿಕ ಪ್ರಥಮ ಬಾರಿಗೆ ಇಂದು ಮಂಗಳೂರಿಗೆ ಭೇಟಿ ಪರಿಶೀಲನೆ ನಡೆಸಿರುವ ಅವರು ‘ವಾರ್ತಾಭಾರತಿ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಈ ಕಿವಿಮಾತನ್ನು ಅವರು ನೀಡಿದ್ದಾರೆ.

ಅಂತಹ ಏಜೆನ್ಸಿ ಅಥವಾ ಏಜೆಂಟರು ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಬಗ್ಗೆ ದೂರುಗಳು ಬಂದಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳ ವ್ಯವಹಾರಕ್ಕೆ ಅಡ್ಡಿ ಪಡಿಸುವುದು ತಮ್ಮ ಸಂಸ್ಥೆಯ ಉದ್ದೇಶವಲ್ಲ. ಬದಲಾಗಿ ವಿದೇಶಕ್ಕೆ ಉದ್ಯೋಗ ನಿಮಿತ್ತ ತೆರಳುವ ಭಾರತೀಯರ ಸುರಕ್ಷತೆಯನ್ನು ಕಾಪಾಡುವುದು ಹಾಗೂ ಸಂಕಷ್ಟದ ಸಂದರ್ಭದಲ್ಲಿ ಕ್ಲಪ್ತ ಸಮಯದಲ್ಲಿ ಅವರಿಗೆ ನೆರವನ್ನು ನೀಡುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯಾಚರಿಸಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

► ಬೆಂಗಳೂರಿನ ಪಿಇಒ ಕಚೇರಿ ರಾಜ್ಯದ ವಲಸಿಗರಿಗೆ ಯಾವ ರೀತಿಯಲ್ಲಿ ನೆರವಾಗಲಿದೆ?

ವಲಸೆ ಕಾಯ್ದೆ 1983ರಂತೆ, ಕರ್ನಾಟಕದಿಂದ ವಿದೇಶಕ್ಕೆ ಉದ್ಯೋಗಕ್ಕೆ ತೆರಳಲು ಬಯಸುವುದಾದರೆ ಅವರ ಹಕ್ಕುಗಳು ಉಲ್ಲಂಘನೆಯಾಗದಂತೆ ಕಾಪಾಡುವುದು ನನ್ನ ಕಚೇರಿಯ ಪ್ರಮುಖ ಕರ್ತವ್ಯವಾಗಿದೆ. ಇದೇ ವೇಳೆ, ರಾಜ್ಯದಲ್ಲಿ ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ನೇಮಕಾತಿ ಏಜೆಂಟ್ ಸಂಸ್ಥೆಗಳನ್ನು ಮುಚ್ಚುವುದು ನನ್ನ ಕೆಲಸವಾಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 15ರಷ್ಟು ಇಂತಹ ಸಂಸ್ಥೆಗಳು ಮಾತ್ರವೆೀ ನಮ್ಮಂದಿಗೆ ನೋಂದಾಯಿಸಿಕೊಂಡಿವೆ.

► ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ಸಂಸ್ಥೆಗಳನ್ನು ಪಟ್ಟಿ ಮಾಡಿದ್ದೀರಾ?

ಇಲ್ಲ. ಕರ್ನಾಟಕದಿಂದ ವಿದೇಶಕ್ಕೆ ಉದ್ಯೋಗಕ್ಕೆ ಹೋಗಲು ಬಯಸುವ, ವಲಸೆ ಪರಿಶೀಲನೆ ಅಗತ್ಯ ಪಾಸ್‌ಪೋರ್ಟ್‌ಗಳನ್ನು ಹೊಂದಿರುವವರು Emigration Check Required (ECR) ಕ್ಲಿಯೆರೆನ್ಸ್‌ಗಾಗಿ ಆನ್‌ಲೈನ್ ಅಥವಾ ಚೆನ್ನೈಗೆ ಪ್ರಯಾಣಿಸಬೇಕಾಗಿತ್ತು. ಹಾಗಾಗಿ ಸಾಕಷ್ಟು ಏಜೆಂಟ್ ಸಂಸ್ಥೆಗಳು ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಮಾಹಿತಿ ಇದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.

► ಪಿಒಇ ಕಚೇರಿಯನ್ನು ಅಥವಾ ನಿಮ್ಮನ್ನು ಸಂಪರ್ಕಿಸುವುದು ಹೇಗೆ?

ವಿದೇಶಕ್ಕೆ ಉದ್ಯೋಗಕ್ಕೆ ತೆರಳುವ ವಲಸೆ ಪರಿಶೀಲನೆ ಅಗತ್ಯ ಪಾಸ್ (ECR) ಪೋರ್ಟ್ ಗಳನ್ನು ಹೊಂದಿರುವವರು Emigration Check Required (ECR ) ಕ್ಲಿಯೆರೆನ್ಸ್‌ಗಾಗಿ ಪಿಇಒ ಕಚೇರಿಯಡಿ ನೋಂದಣಿಯಾದ ಏಜೆಂಟರು ಅಥವಾ ಏಜೆಂಟ್ ಸಂಸ್ಥೆಗಳನ್ನು Emigrate.gov.in ವೆಬ್‌ಸೈಟ್ ಪರಿಶೀಲಿಸಬಹುದು ಅಥವಾ ತಮ್ಮನ್ನು PoEbengaluru@mea.gov.in  ಇಮೇಲ್ ಅಥವಾ ನನ್ನ ಮೊಬೈಲ್ ಸಂಖ್ಯೆ 8383855411 ಮೂಲಕವೂ ಸಂಪರ್ಕಿಸಬಹುದು. ಇದೇ ವೇಳೆ ಸಾರ್ವಜನಿಕರಲ್ಲಿ ನನ್ನದೊಂದು ಮನವಿ. ಅಕ್ರಮವಾಗಿ ಕಾರ್ಯಾಚರಿಸುತ್ತಿರುವ ಸಂಸ್ಥೆಗಳ ಬಗ್ಗೆ ದೂರುಗಳಿದ್ದಲಿಯೂ ನನಗೆ ಸಲ್ಲಿಸಬಹುದು. ದೂರು ನೀಡುವವರ ಮಾಹಿತಿಯನ್ನು ಗುಪ್ತವಾಗಿರಿಸಲಾಗುತ್ತದೆ. ದೂರಿನ ಬಗ್ಗೆ ತನಿಖೆ ನಡೆಸಿ, ಅಗತ್ಯವಿದ್ದಲ್ಲಿ ಪೊಲೀಸರು ಹಾಗೂ ಸ್ಥಳೀಯಾಡಳಿತದ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಇಂತಹ ಅಕ್ರಮಗಳನ್ನು ನಿಲ್ಲಿಸಲು ಕ್ರಮ ವಹಿಸಲಾಗುವುದು.

ನಮ್ಮ ಕಚೇರಿಯಲ್ಲಿ ನೋಂದಣಿಯಾಗಲು ಬಯಸುವ ನಿರೀಕ್ಷಿತ ಏಜೆಂಟರು ಕೂಡಾ ತಮ್ಮ ನೋಂದಣಿಗೆ ಸಂಬಂಧಿಸಿ Emigrate.gov.in ವೆಬ್‌ಸೈಟ್‌ನಲ್ಲಿ ತಿಳಿಸಲಾದ ದಾಖಲೆಗಳನ್ನು ಒದಗಿಸಿ ನೋಂದಣಿ ಪರವಾನಿಗೆಯನ್ನು ಪಡೆಯಬಹುದು. ಒಟ್ಟಿನಲ್ಲಿ ಸಂಸ್ಥೆಗಳ ವ್ಯವಹಾರ ಕಾನೂನು ಬದ್ಧವಾಗಿರಬೇಕೆಂಬುದು ನಮ್ಮ ಆಶಯ. ಕಚೇರಿಯ ಮೂಲಕ ಶೀಘ್ರವೇ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಒದಗಿಸಲು ಎಲ್ಲಾ ರೀತಿಯ ನೆರವನ್ನು ಒದಗಿಸುವ ಭರವಸೆಯನ್ನು ನಾನು ನೀಡುತ್ತೇನೆ. ಆದರೆ ಯಾರು ಕೂಡಾ ವಲಸೆಗೆ ಸಂಬಂಧಿಸಿದ ಕಾರ್ಯವನ್ನು ಪರವಾನಿಗೆ ಇಲ್ಲದೆ ನಡೆಸಬಾರದು.

► ಒಂದು ವೇಳೆ ಅಕ್ರಮ ವ್ಯವಹಾರದ ಬಗ್ಗೆ ದೂರು ಬಂದಲ್ಲಿ ಶಿಕ್ಷೆ ಹೇಗಿರುತ್ತದೆ?

ವಲಸೆ ಕಾಯ್ದೆ 1983ರಡಿ, ಪೊಲೀಸರ ಸಹಕಾರದಲ್ಲಿ ಇಂತಹ ಅಕ್ರಮ ಸಂಸ್ಥೆಗಳನ್ನು ಪತ್ತೆ ಹಚ್ಚಿ ದಾಖಲೆಗಳನ್ನು ಮುಟ್ಟುಗೋಲು ಹಾಕುವ ಅಧಿಕಾರವನ್ನು ನಮ್ಮ ಕಚೇರಿ ಹೊಂದಿದೆ. ಪ್ರಕರಣವನ್ನು ತನಿಖೆ ನಡೆಸಿ ತಪ್ಪಿತಸ್ಥನೆಂದು ಕಂಡು ಬಂದಲ್ಲಿ, ನಾವು ಪ್ರಕರಣವನ್ನು ಪ್ರೊಟೆಕ್ಟರ್ ಜನರಲ್‌ಗೆ ಹಸ್ತಾಂತರಿಸುತ್ತೇವೆ. ನ್ಯಾಯಾಲಯದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವನ್ನು ಕೂಡಾ ತಪ್ಪಿತಸ್ಥರಿಗೆ ವಿಧಿಸಬಹುದಾಗಿದೆ.

► ಬೆಂಗಳೂರು ಅಲ್ಲದೆ ಹೊಸತಾಗಿ ಎಲ್ಲೆಲ್ಲಾ ಪಿಒಇ ಕಚೇರಿ ಆರಂಭಗೊಂಡಿದೆ?

ಭಾರತ ಸರಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದಡಿ 10 ಪಿಒಇ ಕಚೇರಿಗಳು ದೇಶದ ವಿವಿಧ ಕಡೆ ಕಾರ್ಯಾಚರಿಸುತ್ತಿದ್ದವು. ಇದೀಗ ಬೆಂಗಳೂರು, ಗುವಾಹಟಿ ಹಾಗೂ ಪಟ್ನಾದಲ್ಲಿ ನೂತನ ಪಿಒಇ ಕಚೇರಿಗಳಿಗೆ ಆದೇಶವಾಗಿದೆ. ಪಟ್ನಾ ಹಾಗೂ ಬೆಂಗಳೂರಿನಲ್ಲಿ ಈಗಾಗಲೇ ಕಚೇರಿಗಳು ಆರಂಭಗೊಂಡಿದ್ದು, ಗುವಾಹಟಿಯಲ್ಲಿ ಇನ್ನಷ್ಟೇ ಕಾರ್ಯಾಚರಿಸಬೇಕಿದೆ.

► ಮಂಗಳೂರಿನಲ್ಲಿ ಪಿಒಇ ಕಚೇರಿಯ ಶಾಖೆ ತೆರೆಯುವ ಆಲೋಚನೆ ಇದೆಯೇ?

 ಸದ್ಯಕ್ಕೆ ಇಲ್ಲ. ಕರ್ನಾಟಕದವರಿಗೆ ಈವರೆಗೆ ಚೆನ್ನೈನಲ್ಲಿ ಮಾತ್ರವೇ ಇದ್ದ ಕಚೇರಿ ಇದೀಗ ಬೆಂಗಳೂರಿನಲ್ಲಿ ಆರಂಭಗೊಂಡಿದೆ. ವಿದೇಶಾಂಗ ಸಚಿವಾಲಯ ಈ ಕಚೇರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿದೆ.

Full View

Writer - ವಿಶೇಷ ಸಂದರ್ಶನ: ಸತ್ಯಾ ಕೆ.

contributor

Editor - ವಿಶೇಷ ಸಂದರ್ಶನ: ಸತ್ಯಾ ಕೆ.

contributor

Similar News