ಬಂಟ್ವಾಳ: ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ನಿವಾರಣಾ ಸಭೆ
ಬಂಟ್ವಾಳ, ಡಿ. 18: ಬಂಟ್ವಾಳದಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿಯ ವೇಳೆ ಕೆಲವೊಂಡೆಗೆ 100 ರೂ. ಶುಲ್ಕ ತೆಗೆದುಕೊಳ್ಳುತ್ತಾರೆ. ಆದರೆ, ಈ ಕುರಿತು ಆರೋಗ್ಯ ಇಲಾಖೆಯಲ್ಲಿ ಮಾಹಿತಿ ಕೇಳಿದರೆ ಅಷ್ಟಿಲ್ಲ ಎಂಬ ಉತ್ತರ ನೀಡುತ್ತಾರೆ ಎಂದು ದಲಿತ ಮುಖಂಡ ವಿಶ್ವನಾಥ ಚಂಡ್ತಿಮಾರ್ ಆರೋಪಿಸಿದ್ದಾರೆ.
ಬುಧವಾರ ಬಿ.ಸಿ.ರೋಡಿನ ಎಸ್‍ಜಿಎಸ್‍ವೈ ಸಭಾಂಗಣದಲ್ಲಿ ತಹಶೀಲ್ದಾರ್ ರಶ್ಮಿ ಎಸ್.ಆರ್. ಅಧ್ಯಕ್ಷತೆಯಲ್ಲಿ ನಡೆದ ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ನಿವಾರಣಾ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರು, ಹೆಚ್ಚಿನ ಶುಲ್ಕ ಪಡೆಯುವ ಕೇಂದ್ರಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೀಗಾಗಿ ಅಲ್ಲಿ ಕಾರ್ಡ್ ನೋಂದಣಿಯನ್ನೂ ನಿಲ್ಲಿಸಲಾಗಿದೆ ಎಂದರು.
ಸರಕಾರಿ ಸೇವೆಗಳ ಶುಲ್ಕ ಪಾವತಿಗಾಗಿ ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ನೀಡುವ ನಿಟ್ಟಿನಲ್ಲಿ ಪ್ರತಿಯೊಂದು ಕೇಂದ್ರಗಳಲ್ಲೂ ಶುಲ್ಕ ಪಾವತಿ ಮೊತ್ತದ ಫಲಕ ಅಳವಡಿಸುವಂತೆ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್.ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚರ್ಚಾ ವಿಚಾರಗಳು ಅನುಷ್ಠಾನವಾಗಲ್ಲ:
ಮೂರು ತಿಂಗಳಿಗೊಮ್ಮೆ ನಡೆಯುವ ಪ.ಜಾತಿ ಮತ್ತು ಪ.ಪಂಗಡದ ಕುಂದು ಕೊರತೆ ಸಭೆಯಲ್ಲಿ ಚರ್ಚೆಯಾದ ಯಾವುದೇ ವಿಚಾರಗಳು ಅನುಷ್ಠಾನಗೊಳ್ಳುವುದಿಲ್ಲ. ಈ ಸಭೆಯು ಚಾ ಹಾಗೂ ತಿಂಡಿ ತಿಂದು ಹೋಗುವುದಕ್ಕೆ ಇರುವ ಸಭೆಯೇ ಎಂದು ಮುಖಂಡರಾದ ರಾಜ ಪಲ್ಲಮಜಲು ಹಾಗೂ ಗಂಗಾಧರ್ ಆಕ್ರೋಶ ವ್ಯಕ್ತಪಡಿಸಿದರು.
2 ಕೋ.ರೂ. ನಿಗಮದಿಂದ ಬಾಕಿ:
ಹಣ ಪಾವತಿಯಾಗದೆ ಅಂಬೇಡ್ಕರ್ ವಸತಿ ನಿಗಮದಲ್ಲಿ ಮಂಜೂರಾದ ಮನೆಗಳು ಅರ್ಧದಲ್ಲಿ ಬಾಕಿ ಇದೆ ಎಂದು ದಲಿತ ಮುಖಂಡರು ಸಭೆಯಲ್ಲಿ ತಿಳಿಸಿದಾಗ, ಎಲ್ಲ ವಸತಿ ಯೋಜನೆಗಳ ಹಣ ಪಾವತಿಯೂ ಬಾಕಿಯಿದ್ದು, ಪ್ರಸ್ತುತ ಆರ್‍ಟಿಜಿಎಸ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹೋಗುತ್ತದೆ. ಹೀಗಾಗಿ ಅದರ ಮಾಹಿತಿ ನಮಗೆ ಲಭ್ಯವಾಗುವುದಿಲ್ಲ. ಬಂಟ್ವಾಳ ತಾಲೂಕಿನ 58 ಗ್ರಾಪಂ ವ್ಯಾಪ್ತಿಯಲ್ಲಿ 2 ಕೋ.ರೂ.ನಿಗಮದಿಂದ ಪಾವತಿಯಾಗಲು ಬಾಕಿಯಿದ್ದು, ಪಾವತಿಗಾಗಿ ಉಸ್ತುವಾರಿ ಸಚಿವರು ನಿಗಮಕ್ಕೆ ಸೂಚನೆ ನೀಡಿದ್ದಾರೆ ಎಂದು ತಾ.ಪಂ. ಇಒ ರಾಜಣ್ಣ ಅವರು ಸಭೆಗೆ ತಿಳಿಸಿದರು.
ಬ್ಯಾಂಕ್ ಸಾಲ ನೀಡುತ್ತಿಲ್ಲ:
ಅರಣ್ಯ ಇಲಾಖೆಯಿಂದ ನೀಡಲಾದ ಗ್ಯಾಸ್ ಸಂಪರ್ಕಕ್ಕೆ ಫಲಾನುಭವಿಗಳಿಂದ 100 ರೂ.ಪಡೆಯಲಾಗಿದೆ. ಆದರೆ, ಪೊಲೀಸ್ ದೂರಿನ ಕುರಿತು ತಿಳಿಸಿದಾಗ ತಮಗೆ 100 ರೂ.ಹಿಂದಿರುಗಿಸಿದ್ದಾರೆ ಎಂದು ವಿಶ್ವನಾಥ್ ತಿಳಿಸಿದಾಗ, ನಾನು ಮಂಜೂರು ಮಾಡುವ ಕಾರ್ಯ ಮಾಡುತ್ತೇವೆ. ಉಳಿದಂತೆ ಅದನ್ನು ಏಜೆಸ್ಸಿಯವರೇ ನೋಡಿಕೊಳ್ಳುತ್ತಾರೆ ಎಂದು ವಲಯ ಅರಣ್ಯಾಧಿಕಾರಿ ಸುರೇಶ್ ತಿಳಿಸಿದರು.
ಪ.ಜಾ., ಪ.ಪಂ.ದವರಿಗೆ ಕೆಲವೊಂದು ಬ್ಯಾಂಕ್‍ಗಳಲ್ಲಿ ಸಾಲ ನೀಡುವುದಿಲ್ಲ ಎಂದು ಸಭೆಯಲ್ಲಿ ಆರೋಪ ಕೇಳಿಬಂದಾಗ, ಈ ಕುರಿತು ದೂರು ನೀಡಿದರೆ ವಿಚಾರಿಸುವುದಾಗಿ ತಹಶೀಲ್ದಾರ್ ತಿಳಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಕುಂದುಕೊರತೆ ಸಭೆ ನಡೆಸುವಂತೆ ಆಗ್ರಹ ಕೇಳಿಬಂದಾಗ, ಸಭೆ ನಡೆಸುವಂತೆ ತಹಶೀಲ್ದಾರ್ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಅವರಿಗೆ ಸೂಚಿಸಿದರು.
ವೇದಿಕೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಜಯಶ್ರೀ ಉಪಸ್ಥಿತರಿದ್ದರು.