ಡಿ.22ರಂದು ಬಡಗುಬೆಟ್ಟು ಸೊಸೈಟಿಯ ಶತಮಾನೋತ್ಸವ ಸಮಾರೋಪ

Update: 2019-12-18 16:56 GMT

ಉಡುಪಿ, ಡಿ.18: ಕಳೆದೊಂದು ವರ್ಷದಿಂದ ನಡೆಯುತ್ತಿರುವ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾ ಚರಣೆಯ ಸಮಾರೋಪ ಸಮಾರಂಭ ಇದೇ ಡಿ.22ರಂದು ನಗರದ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಂಜೀವ ಕಾಂಚನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಡಿ.22ರ ರವಿವಾರ 10ಗಂಟೆಗೆ ಸಮಾರಂಭವನ್ನು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಸಿಎಸ್‌ಐ ಕರ್ನಾಟಕ ಸದರ್ನ್ ಡಯಾಸಿಸ್‌ನ ಕೋಶಾಧಿಕಾರಿ ವಿನ್ಸೆಂಟ್ ಪಾಲನ್ನ ಹಾಗೂ ಅಂಬಾಗಿಲು ಸಂತೋಷ ನಗರದ ಖತೀಬ್ ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಅಲ್ ಹಾಜಿ ಮೊಹಮ್ಮದ್ ಹನೀಫ್ ಮದಾನಿ ಆಶೀರ್ವಚನ ನೀಡಲಿದ್ದಾರೆ ಎಂದರು.

ಸಮಾರೋಪ ಸಮಾರಂಭ ಸಂಜೆ 4ಗಂಟೆಗೆ ಮಂಗಳೂರು ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಆಶೀರ್ವಚನ ನೀಡಲಿದ್ದಾರೆ.

ಶತಮಾನೋತ್ಸವ ವರ್ಷದಲ್ಲಿ ಕಳೆದೊಂದು ವರ್ಷದಿಂದ ಸಂಸ್ಥೆ 100ಕ್ಕೂ ಅಧಿಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಸುಮಾರು ಎರಡು ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಸಮಾಜಮುಖಿ ಕಾರ್ಯಕ್ರಮಗಳಿಗೆ ವ್ಯಯಿಸಲಾಗಿದೆ ಎಂದು ಸಂಜೀವ ಕಾಂಚನ್ ವಿವರಿಸಿದರು.

ಇವುಗಳಲ್ಲಿ ಸಂಘದ 2500ಕ್ಕೂ ಅಧಿಕ ಸದಸ್ಯರಿಗೆ ಆರೋಗ್ಯ ವಿಮೆ, ಬಡವರಿಗೆ ಶೌಚಾಲಯ ನಿರ್ಮಾಣ, ಮಂಗಳಮುಖಿಯರಿಗೆ ಹಾಗೂ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಸದಸ್ಯರಿಗೆ ಮನೆ ನಿರ್ಮಾಣಕ್ಕೆ ಸಹಾಯ, ದೇಶದ ವಿವಿಧ ಪ್ರಾಕೃತಿಕ ವಿಕೋಪಕ್ಕೆ ದೇಣಿಗೆ, ಮದ್ಯಪಾನ ವಿಮುಕ್ತಿ ಶಿಬಿರ, ರಕ್ತದಾನ ಶಿಬಿರಗಳು ಸೇರಿವೆ ಎಂದರು.

ಇದೇ ಡಿ.21ರ ಶನಿವಾರ ಸಂಜೆ 4ಕ್ಕೆ ಸಹಕಾರಿ ಸಂಸ್ಥೆಗಳ ಹಾಗೂ ಸಂಘವು ಖಾತೆಗಳನ್ನು ಹೊಂದಿದ ವಿವಿಧ ಬ್ಯಾಂಕರುಗಳ ಜೊತೆ ಸಂವಾದ, ಪೌರ ಕಾರ್ಮಿಕರು ಹಾಗೂ ಮೆಸ್ಕಾಂ ಲೈನ್‌ಮೆನ್‌ಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಶತಮಾನೋತ್ಸವ ಸಮಿತಿ ಸಂಚಾಲಕ ಪುರುಷೋತ್ತಮ ಪಿ.ಶೆಟ್ಟಿ, ಸಂಘದ ಉಪಾಧ್ಯಕ್ಷ ಎಲ್.ಉಮಾನಾಥ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News