ರಾಜ್ಯ ಯಾಕೆ ಹೊತ್ತಿ ಉರಿಯಬೇಕೆಂದು ಯು.ಟಿ.ಖಾದರ್ ಉತ್ತರಿಸಲಿ: ದ.ಕ. ಜಿಲ್ಲಾ ಬಿಜೆಪಿ

Update: 2019-12-19 11:36 GMT

ಮಂಗಳೂರು, ಡಿ.19: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ರಾಜ್ಯ ಹೊತ್ತಿ ಉರಿಯಲಿದೆ ಎಂದು ಶಾಸಕ ಯು.ಟಿ.ಖಾದರ್ ಹೇಳಿಕೆ ನೀಡಿರುವುದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇಂತಹ ಹೇಳಿಕೆ ನೀಡುವ ಮೂಲಕ ಜವಾಬ್ದಾರಿಯುತ ಸ್ಥಾನದಲ್ಲಿರುವ ಖಾದರ್ ಅಕ್ರಮ ನುಸುಳುಕೋರರ ಪರವಾಗಿ ಮಾತನಾಡಿದ್ದಾರೆ ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಆರೋಪಿಸಿದ್ದಾರೆ.

ಗುರುವಾರ ಮಂಗಳೂರಿನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಪರವಾಗಿ ಇರುವ ಮುಸ್ಲಿಮರು ಖಾದರ್ ಅವರ ಹೇಳಿಕೆಯನ್ನು ಖಂಡಿತ ಒಪ್ಪುವುದಿಲ್ಲ. ಜಿಲ್ಲೆಯ ಜಾತ್ಯತೀತ ಹಣೆಪಟ್ಟಿಯ ಕೋಮುವಾದಿ ನಾಯಕ ಇವರಾಗಿದ್ದು, ಈ ಕಾಯ್ದೆಯನ್ನು ಇಸ್ಲಾಂ ವಿರೋಧಿ ಎಂದು ಬಿಂಬಿಸುವ ಮೂಲಕ ಸಾಮರಸ್ಯ ಕದಡಿಸಲು ಯತ್ನಿಸುತ್ತಿದ್ದಾರೆ. ಆದ್ದರಿಂದ ಯಾಕಾಗಿ ರಾಜ್ಯ ಹೊತ್ತಿ ಉರಿಯಬೇಕು ಎಂಬ ಬಗ್ಗೆ ಖಾದರ್ ಜನತೆಗೆ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಕರಾವಳಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರು, ಸಂಸದರು ಇದ್ದಾರೆ. ನಿಮ್ಮಲ್ಲಿ ಕೇಳಿ ಕಾಯ್ದೆಯನ್ನು ಅನುಷ್ಠಾನಗೊಳಿಸುವ ಅನಿವಾರ್ಯ ಬಿಜೆಪಿಗೆ ಬಂದಿಲ್ಲ. ಪ್ರಸಕ್ತ ಅಧಿಕಾರ ಇಲ್ಲದೆ ಕಾಂಗ್ರೆಸ್ ಹಾಗೂ ಕಾಂಗ್ರೆಸಿಗರು ಚಡಪಡಿಸುತ್ತಿದ್ದಾರೆ. ಆದ್ದರಿಂದಲೇ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹಾಗಾಗಿ ಖಾದರ್ ಹೇಳಿಕೆಗೆ ಕಿವಿಗೊಡಗೆ ಜನತೆ ಶಾಂತಿ, ಸೌಹಾರ್ದ ಜೀವನಕ್ಕೆ ಮುಂದಾಗಬೇಕು. ಈ ಕಾಯ್ದೆಯನ್ನು ಬೆಂಬಲಿಸಬೇಕು ಎಂದರು.
ಕೇಂದ್ರ ಸರಕಾರ ಜಾರಿಗೊಳಿಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆ ಇಲ್ಲ. ಈ ಸತ್ಯ ಗೊತ್ತಿದ್ದರೂ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ರಾಜಕೀಯ ವಿರೋಧಕ್ಕಾಗಿ ಪ್ರತಿಭಟನೆ ನಡೆಸುತ್ತಿವೆ. ಈ ಕಾಯ್ದೆ ದೇಶದ ಒಳಿತಾಗಿ ಇರುವುದು ಎಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದವರು ಹೇಳಿದರು.

 ಹಿಂದುಗಳಿಗೆ ಜಗತ್ತಿನಲ್ಲಿ ಇರುವ ಏಕೈಕ ದೇಶ ಎಂದರೆ ಭಾರತ ಮಾತ್ರ. ಆದರೆ ನುಸುಳುಕೋರ ಪೈಕಿ ಮುಸ್ಲಿಮ್ ಸೇರಿದಂತೆ ಬೇರೆ ಧರ್ಮಗಳಿಗೆ ಆಯಾ ದೇಶಗಳಿವೆ. ಈ ಹಿನ್ನೆಲೆಯಲ್ಲಿ ನುಸುಳುಕೋರ ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಧರ್ಮಗಳ ನಿರಾಶ್ರಿತರಿಗೆ ಭಾರತದಲ್ಲಿ ಪೌರತ್ವ ನೀಡಲು ಈ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಇದನ್ನೇ ತಪ್ಪಾಗಿ ಅರ್ಥೈಸಲಾಗುತ್ತಿದ್ದು, ವಿನಾಕಾರಣ ಪ್ರತಿಭಟನೆ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಹೇಳಿದರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿರುವುದರಿಂದ ಅದನ್ನು ದೇಶದ ಎಲ್ಲ ರಾಜ್ಯಗಳೂ ಅನುಷ್ಠಾನಗೊಳಿಸಬೇಕಾಗುತ್ತದೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳಿಗೆ ಇದನ್ನು ಪಾಲಿಸದೇ ಇರಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮಾಜಿ ಸಚಿವರೂ ಶಾಸಕರೂ ಆಗಿರುವ ಯು.ಟಿ.ಖಾದರ್ ಅರ್ಥಮಾಡಿಕೊಳ್ಳಬೇಕು ಎಂದು ಜಿತೇಂದ್ರ ಕೊಟ್ಟಾರಿ ಹೇಳಿದರು.

ಹಿಂದೆ ನೆಹರೂ, ಇಂದಿರಾ ಬಳಿಕ ಮಮತಾ ಬ್ಯಾನರ್ಜಿ ಕೂಡ ಇಂತಹ ತಿದ್ದುಪಡಿ ಕಾಯ್ದೆಯ ಅವಶ್ಯಕತೆ ಬಗ್ಗೆ ಮಾತನಾಡಿದ್ದರು. ಈಗ ಕೇವಲ ರಾಜಕೀಯ ಉದ್ದೇಶಕ್ಕಾಗಿ ವಿರೋಧಿಸುತ್ತಿದ್ದಾರೆ. ಆದರೆ ಕೇಂದ್ರ ಗೃಹ ಸಚಿವರು ದೇಶದ ಹಿತಾಸಕ್ತಿ ನೆಲೆಯಲ್ಲಿ ಈ ಕಾಯ್ದೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದಿರುವುದು ಸರಿಯಾಗಿಯೇ ಇದೆ. 350ಕ್ಕೂ ಅಧಿಕ ಸಂಸದರನ್ನೊಳಗೊಂಡು ಚರ್ಚಿಸಿಯೇ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಎಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಏಕಪಕ್ಷೀಯವಾಗಿ ಜಾರಿಗೆ ತಂದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ನಿತಿನ್ ಕುಮಾರ್, ಸತೀಶ್ ಪ್ರಭು, ಸಂದೇಶ್ ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಶಾಸಕ ಖಾದರ್ ವಿರುದ್ಧ ದೂರು
ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಬಹಿರಂಗವಾಗಿ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಶಾಸಕ ಯು.ಟಿ.ಖಾದರ್ ನೀಡಿರುವ ಹೇಳಿಕೆ ವಿರುದ್ಧ ದ.ಕ. ಬಿಜೆಪಿ ಯುವ ಮೋರ್ಚಾ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ ಎಂದು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂದೇಶ್ ಶೆಟ್ಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News