ತಾಪಂನಲ್ಲಿ ಸಿಬ್ಬಂದಿ ಕೊರತೆ; ಸದಸ್ಯರ ಕಳವಳ ಯಥಾಸ್ಥಿತಿ ಪಾಲಿಸಲು ಸಾಮಾನ್ಯ ಸಭೆಯಲ್ಲಿ ನಿರ್ಣಯ

Update: 2019-12-19 15:09 GMT

ಉಡುಪಿ, ಡಿ.19: ಉಡುಪಿ ತಾಲೂಕು ಪಂಚಾಯತ್‌ನಲ್ಲಿರುವ ಸಿಬ್ಬಂದಿಗಳ ಕೊರತೆಯ ಕುರಿತಂತೆ ಗುರುವಾರ ನಡೆದ 21ನೇ ಸಾಮಾನ್ಯ ಸಭೆಯಲ್ಲಿ ಗಮನ ಸೆಳೆದ ಸದಸ್ಯರು, ಸರಕಾರದ ಹೊಸ ಸುತ್ತೋಲೆ ಜಾರಿಯಾಗಿ ಪ್ರಭಾರ ಹುದ್ದೆಗಳು ರದ್ದಾದರೆ, ಉಡುಪಿ ತಾಪಂ ಸಂಪೂರ್ಣ ಖಾಲಿಯಾಗಲಿದೆ ಎಂದು ತೀವ್ರವಾದ ಕಳವಳವನ್ನು ವ್ಯಕ್ತಪಡಿಸಿದರು.

ಗುರುವಾರ ಅಧ್ಯಕ್ಷೆ ನೀತಾ ಗುರುರಾಜ್ ಪೂಜಾರಿ ಅಧ್ಯಕ್ಷತೆಯಲ್ಲಿ ತಾಪಂನ 21ನೇ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಸರಕಾರದ ಸುತ್ತೋಲೆಯನ್ನು ಕಾರ್ಯನಿರ್ವಹಣಾಧಿಕಾರಿ ಮೋಹನ್‌ರಾಜ್ ಸಭೆಗೆ ಓದಿ ತಿಳಿಸಿದರು. ಇದಕ್ಕೆ ಪಕ್ಷಾತೀತವಾಗಿ ಪ್ರತಿಕ್ರಿಯಿಸಿದ ಸದಸ್ಯರು ಇದು ಕಾರ್ಯಗತಗೊಂಡರೆ, ತಾಪಂ ಕಾರ್ಯನಿರ್ವಹಿಸುವುದೇ ಸಾಧ್ಯವಿಲ್ಲ ಎಂದು ವಾದಿಸಿದರು.

ಉಡುಪಿ ತಾಪಂನಲ್ಲಿ ಕಾರ್ಯನಿರ್ವಹಣಾಧಿಕಾರಿ ಸಹಿತ ಇರುವ 29 ಸಿಬ್ಬಂದಿಗಳಲ್ಲಿ ಇಬ್ಬರು ಮಾತ್ರ ಖಾಯಂ ನೌಕರರಿದ್ದಾರೆ. ಉಳಿದಂತೆ ಪ್ರಭಾರ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಮೂಲಸ್ಥಾನಕ್ಕೆ ವರ್ಗಾಯಿಸುವಂತೆ ಸರಕಾರದ ಆದೇಶ ಜಾರಿಯಾದರೆ ದೈನಂದಿನ ಕೆಲಸಕ್ಕೆ ತೊಂದರೆಯಾಗಲಿದೆ. ಹೀಗಾಗಿ ಯಥಾಸ್ಥಿತಿ ಮುಂದುವರಿಸುವಂತೆ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಸುಧೀರ್ ಕುಮಾರ ಶೆಟ್ಟಿ, ತಾಪಂನಲ್ಲಿ ಸಿಬ್ಭಂದಿ ಭರ್ತಿಯಾಗುವವರೆಗೆ ಪ್ರಭಾರ ಹುದ್ದೆಯಲ್ಲಿದ್ದವರನ್ನು ತೆರವು ಮಾಡುವುದು ಬೇಡ. ಸರಕಾರದ ಆದೇಶ ಪಾಲಿಸಲು ಮುಂದಾದರೆ ತಾಪಂ ಖಾಲಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದಾಗ, ಬಹಳಷ್ಟು ಮಂದಿ ಸದಸ್ಯರು ಅವರ ಆತಂಕ್ಕೆ ಸಹಮತ ವ್ಯಕ್ತಪಡಿಸಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಡಾ.ಸುನೀತಾ ಶೆಟ್ಟಿ, ಕಳೆದ ಆರು ತಿಂಗಳಿನಿಂದ ತಾನು ಪ್ರತಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸುತಿದ್ದರೂ, ಪಿಂಚಣಿ ಪಾವತಿಗೆ ಸಂಬಂಧಿಸಿದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಪಾಪ ಸರಕಾರದ ಈ ಪಿಂಚಣಿಯನ್ನೇ ನಂಬಿ ಬಹಳಷ್ಟು ಮಂದಿ ಬಡವರು ದಿನದೂಡುತಿದ್ದಾರೆ. ಬ್ರಹ್ಮಾವರದಲ್ಲಿ ಪಿಂಚಣಿ ಅದಾಲತ್ ನಡೆದರೂ, ಸಮಸ್ಯೆ ಪರಿಹಾರಕ್ಕೆ ಇನ್ನೂ ಕ್ರಮ ತೆಗೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ಬ್ರಹ್ಮಾವರದ ತಹಶೀಲ್ದಾರ್ ಕಿರಣ್ ಗೋರಯ್ಯ, ಕೆ1ರಿಂದ ಕೆ2ಗೆ ವರ್ಗಾಯಿಸುವಲ್ಲಿ ಸಮಸ್ಯೆಗಳು ಕಾಣಿಸಿಕೊಂಡಿರು ವುದರಿಂದ ಇದು ಸಂಭವಿಸಿದೆ. ತಾಂತ್ರಿಕ ಸಮಸ್ಯೆಗಳ ಕುರಿತು ಪಿಂಚಣಿ ನಿರ್ದೇಶನಾಲಯದ ಗಮನ ಸೆಳೆಯಲಾಗಿದೆ ಎಂದರು.

ಹೆಚ್ಚಿನ ಮಂದಿಗೆ ಕಳೆದ ಐದಾರು ತಿಂಗಳ ಪಿಂಚಣಿ ಬಂದಿಲ್ಲ. ಕೆಲವರಿಗೆ ಇತ್ತೀಚೆಗೆ ಒಂದು ತಿಂಗಳ ಪಿಂಚಣಿ ಬಂದಿದೆ. ಯಾವ ತಿಂಗಳ ಪಿಂಚಣಿ ಬಂದಿದೆ, ಇನ್ನುಳಿದ ತಿಂಗಳ ಪಿಂಚಣಿ ತಮ್ಮ ಕೈಸೇರುವುದೇ ಎಂಬ ಬಗ್ಗೆ ಅವರಿಗೆ ಯಾವುದೇ ಮಾಹಿತಿ ಇಲ್ಲ. ಇಲ್ಲಿ ನಮಗಾದರೂ ಸ್ಪಷ್ಟ ಮಾಹಿತಿ ನೀಡಿ, ನಾವು ಅವರಿಗೆ ತಿಳಿಸುತ್ತೇವೆ ಎಂದರು. ಸಮಸ್ಯೆ ಉಂಟಾಗಿರುವ ಪಿಂಚಣಿಗೆ ಸಂಬಂಧಿಸಿದಂತೆ ಹೊಸ ಅರ್ಜಿಗಳನ್ನು ನೀಡುವ ಅಗತ್ಯವಿದೆಯೇ ಎಂದವರು ಪ್ರಶ್ನಿಸಿದರು.

ಬ್ರಹ್ಮಾವರದಲ್ಲಿ 2345 ಪಿಂಚಣಿಯ ಕುರಿತು ಪರಿಶೀಲಿಸಿ ವರದಿ ನೀಡುವಂತೆ ಕೇಳಿಕೊಳ್ಳಲಾಗಿದೆ. ಈಗ ಪರಿಶೀಲನೆಗೆ 136 ಮಾತ್ರ ಬಾಕಿ ಉಳಿದಿವೆ. ಪಿಂಚಣಿ ಮಂಜೂರಾತಿಗೆ ಆದಾಯ ಪ್ರಮಾಣ ಪತ್ರ ಅಗತ್ಯವಿದೆ ಎಂದು ತಹಶೀಲ್ದಾರ್ ನುಡಿದರು.

ಇದೀಗ ವಿಕಲಚೇತನರಿಗೂ ಹೊಸ ಹೊಸ ವಿವರಗಳನ್ನು ಕೇಳುತಿದ್ದಾರೆ. ಈ ಮೊದಲು ಅವರಿಗೆ ಆದಾಯ ಪ್ರಮಾಣ ಪತ್ರ ಸಲ್ಲಿಕೆಗೆ ಕೇಳುತ್ತಿರಲಿಲ್ಲ. ಈಗ ಅದನ್ನು ಕೇಳುತಿದ್ದಾರೆ. ಅಲ್ಲದೇ ಖುದ್ದಾಗಿ ಹಾಜರಿರುವಂತೆ ಕೇಳಲಾಗುತ್ತಿದೆ. ವಿಕಲಚೇತನರಿಗೆ ಇದು ತ್ರಾಸದಾಯವಲ್ಲವೇ ಎಂದು ಡಾ.ಸುನೀತಾ ಶೆಟ್ಟಿ ಪ್ರಶ್ನಿಸಿದರು.

ಕಳೆದ ಆರು ತಿಂಗಳಿನಿಂದ ಪಿಂಚಣಿ ಕುರಿತು ಪ್ರಶ್ನೆ ಕೇಳುತಿದ್ದೇನೆ. ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇನ್ನು ನಾನು ಕಾಯಲಾರೆ. ಎಲ್ಲಾ ಪಿಂಚಣಿದಾರರನ್ನು ಸೇರಿಸಿ ನಾನು ಧರಣಿ ಕುಳಿತುಕೊಳ್ಳುತ್ತೇನೆ ಎಂದು ಅವರು ಎಚ್ಚರಿಕೆ ನೀಡಿದಾಗ, ನಾಳೆ ಬ್ರಹ್ಮಾವರದಲ್ಲಿ ಪಿಂಚಣಿ ಅದಾಲತ್ ನಡೆಯಲಿದೆ, ಅಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಮೋಹನ್‌ರಾಜ್ ನುಡಿದರು.

 ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆಗೆಸುವ ಕುರಿತಂತೆಯೂ ಲಕ್ಷ್ಮೀನಾರಾಯಣ ಪ್ರಭು ಮತ್ತೊಮ್ಮೆ ಪ್ರಶ್ನೆಯನ್ನೆತ್ತಿದರು. ಉಪಾಧ್ಯಕ್ಷ ಭುಜಂಗ ಶೆಟ್ಟಿ ಸೇರಿದಂತೆ ಹಲವು ಸದಸ್ಯರು ತಮ್ಮ ಕ್ಷೇತ್ರದಲ್ಲಿರುವ ಇಂಥ ಮರಗಳ ಕುರಿತು ವಿವರಿಸಿದರು. ಅರಣ್ಯ ಇಲಾಖೆ ಮರಗಳನ್ನು ಕಡಿಯಲು ಅನುಮತಿ ಯನ್ನೇ ನೀಡುತ್ತಿಲ್ಲ ಎಂದು ಸದಸ್ಯರು ದೂರಿದರು.

ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸದಸ್ಯರ ಪ್ರಶ್ನೆಗೆ ಉತ್ತರಿಸಿ, ಈ ಬಗ್ಗೆ ಬಂದ ಎಲ್ಲಾ ಅರ್ಜಿಗಳನ್ನು ಕುಂದಾಪುರದ ಡಿಎಫ್‌ಓ ಅವರಿಗೆ ಅನುಮತಿಗಾಗಿ ಕಳುಹಿಸಲಾಗಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕಿದಾಕ್ಷಣ ಎಲ್ಲಾ ಮರಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷ ಉಪಾಧ್ಯಕ್ಷ ಕೆ.ಭುಜಂಗ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಶರತ್‌ಕುಮಾರ್ ಬೈಲಕೆರೆ, ಕಾಪು ತಹಶೀಲ್ದಾರ್ ಮಹಮ್ಮದ್ ಇಸಾಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News