ಸಹನಾ ವಿಜಯಕುಮಾರ್‌ಗೆ ಚಡಗ ಸ್ಮಾರಕ ಪ್ರಶಸ್ತಿ-2019
Update: 2019-12-19 16:38 GMT
ಉಡುಪಿ, ಡಿ.19: ಕನ್ನಡದ ಹೆಸರಾಂತ ಸಾಹಿತಿ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಲ್ಲಿ ಕೊಟೇಶ್ವರದ ಎನ್.ಆರ್.ಎ. ಎಮ್.ಎಚ್ ಪ್ರಕಾಶನ ಸಂಸ್ಥೆ ಪ್ರತಿ ವರ್ಷ ನೀಡುವ ‘ಸೂರ್ಯನಾರಾಯಣ ಚಡಗ ಸ್ಮಾರಕ ಪ್ರಶಸ್ತಿ-2019’ಕ್ಕೆ ಬೆಂಗಳೂರಿನ ಲೇಖಕಿ ಸಹನಾ ವಿಜಯ ಕುಮಾರ್ ಅವರ ‘ಕಶೀರ’ ಕೃತಿ ಆಯ್ಕೆಯಾಗಿದೆ.
ಪ್ರಶಸ್ತಿ ಸಮಿತಿಯ ಸಂಚಾಲಕಿ ಶಾರದಾ ಭಟ್ ಇವರು ಈ ವಿಷಯ ತಿಳಿಸಿದ್ದು, ಕಾಶ್ಮೀರದ ಪ್ರಚಲಿತ ವಿದ್ಯಮಾನಗಳನ್ನೊಳಗೊಂಡ ಈ ಕೃತಿ ತೀರ್ಪುಗಾರರ ಮೌಲ್ಯಮಾಪನದಂತೆ ಪ್ರಶಸ್ತಿಗೆ ಅರ್ಹತೆ ಪಡೆದುಕೊಂಡಿದೆ ಎಂದಿದ್ದಾರೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆಗಳನ್ನೊಳಗೊಂಡಿದ್ದು, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸದ್ಯವೇ ನಡೆಯಲಿದೆ ಎಂದು ಪ್ರಶಸ್ತಿ ಸಮಿತಿಯ ಪ್ರಕಟಣೆ ತಿಳಿಸಿದೆ.