ಹಿಂಸಾಚಾರಕ್ಕೆ ಪೊಲೀಸ್ ಕಮೀಷನರ್ ಹೊಣೆ : ಡಿವೈಎಫ್ಐ

Update: 2019-12-19 18:05 GMT

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಂಗಳೂರಿನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಲು, ಪೊಲೀಸರ ಗುಂಡೇಟಿಗೆ ಇಬ್ಬರು ನಾಗರಿಕರು ಬಲಿಯಾಗಲು ಪೊಲೀಸ್ ಕಮೀಷನರ್ ಡಾ. ಹರ್ಷಾ ಅವರ ಅತಿರೇಕದ ನಡೆ, ವೈಫಲ್ಯಗಳೇ ಕಾರಣ ಎಂದು ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿಯ ಅಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದ, ಪ್ರತಿಭಟನೆಯಲ್ಲಿ ಹಿಂಸಾಚಾರಕ್ಕೆ ಕಾರಣವಾದ ಅಂಶಗಳ ಬಗ್ಗೆ ಬಲವಾದ ಗುಮಾನಿಗಳಿದ್ದು ಉನ್ನತ ಮಟ್ಟದ ತನಿಖೆ ನಡೆಸಬೇಕು. ತಕ್ಷಣವೆ ಪೊಲೀಸ್ ಕಮೀಷನರ್ ಹರ್ಷ ಅವರನ್ನು ಅಮಾನತುಗೊಳಿಸಿ ದಕ್ಷ ಅಧಿಕಾರಿಯೊಬ್ಬರನ್ನು  ಮಂಗಳೂರಿಗೆ ನೇಮಿಸಬೇಕು ಎಂದು ಅವರು ಮುಖ್ಯ ಮಂತ್ರಿ ಯಡಿಯೂರಪ್ಪನವರನ್ನು ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಪ್ರತಿಭಟನೆಗೆ ಮಂಗಳೂರಿನಲ್ಲಿ ಪೊಲೀಸ್ ಇಲಾಖೆ "ಕಾಣದ ಕೈಗಳು ಗಲಾಟೆ ಎಬ್ಬಿಸುತ್ತವೆ" ಎಂಬ ಕಾರಣ ಮುಂದಿಟ್ಟು ಸಾರಸಗಟಾಗಿ  ಅವಕಾಶ ನಿರಾಕರಣೆ ಮಾಡುತ್ತಿದ್ದದ್ದು ಒಂದು ವಿಭಾಗದ ಜನರಲ್ಲಿ ತೀವ್ರ ಅತೃಪ್ತಿಗೆ ಕಾರಣವಾಗಿತ್ತು. ಇದನ್ನೇ ಮುಂದಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾತ್ಮಕ ಚರ್ಚೆಗಳು ನಡೆಯುತ್ತಿದ್ದವು‌ ಈ ಬೆಳವಣಿಗೆಗಳನ್ನು ಪೊಲೀಸ್ ಅಧಿಕಾರಿಗಳು ಕಡೆಗಣಿಸಿದರು‌. ನಿಷೇಧಾಜ್ಞೆ  ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾದವರನ್ನು ಮನವೊಲಿಸುವ, ರಾಜ್ಯದ ವಿವಿದೆಡೆ ನಡೆದಂತೆ ಶಾಂತಿಯುತ ಧರಣಿಗೆ ಅವಕಾಶ ಮಾಡಿಕೊಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸುವ ಸಾಧ್ಯತೆಗಳಿದ್ದರೂ, ನಿಷೇಧಾಜ್ಞೆ ಉಲ್ಲಂಘನೆಯ ನೆಪವನ್ನೇ ಮುಂದಿಟ್ಟು ಪ್ರತಿಭಟನೆಗಾಗಿ ಗುಂಪು ಸೇರಿದ್ದ ಜನರ ಮೇಲೆ ತೀವ್ರತರದ ಬಲ ಪ್ರಯೋಗಿಸಿದ್ದು  ಸಂಘರ್ಷಕ್ಕೆ ಕಾರಣವಾಗಿದೆ.  ಬಂದರು ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಸಣ್ಣ ಭಾಗದಲ್ಲಷ್ಟೇ ನಡೆದ  ಹಿಂಸಾಚಾರ, ಕಲ್ಲು ತೂರಾಟವನ್ನು ದೊಡ್ಡ ಪ್ರಮಾಣದಲ್ಲಿದ್ದ ಪೊಲೀಸರಿಗೆ ಗೋಲಿಬಾರ್ ನಡೆಸದೆ ನಿಯಂತ್ರಿಸಲು ಸಾಕಷ್ಟು ಅವಕಾಶಗಳಿದ್ದವು. ಕಮಿಷನರ್ ಅವರ ಹಠಮಾರಿತನ, ತಪ್ಪು ಗ್ರಹಿಕೆ, ಪೂರ್ವಾಗ್ರಹಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಾಟಕ್ಕೆ, ಇಬ್ಬರು ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಂಗಳೂರಿಗೆ ಕಪ್ಪು ಚುಕ್ಕೆಯಂತಾದ ಇಂದಿನ‌ ಪೊಲೀಸ್ ಅತಿರೇಕ, ಹಿಂಸಾಚಾರ, ಸಾವು ನೋವುಗಳಿಗೆ ಕಾರಣರಾದ ಪೊಲೀಸ್ ಕಮೀಷನರ್ ಅವರನ್ನು ತಕ್ಷಣವೆ ಅಮಾನತುಗೊಳಿಸಬೇಕು. ಮಂಗಳೂರಿಗೆ ಓರ್ವ ದಕ್ಷ, ಜಾತ್ಯಾತೀತ ನಿಲುವಿನ ಐಪಿಎಸ್ ಅಧಿಕಾರಿಯನ್ನು ಕಮೀಷನರ್ ಆಗಿ ನೇಮಿಸಬೇಕು. ಇಂದಿನ ಹಿಂಸಾಚಾರ, ಪೊಲೀಸ್ ಗೋಲಿಬಾರ್ ಪ್ರಕರಣದ ಹಿಂದಿರುವ ಕಾಣದ ಕೈಗಳ ಪತ್ತೆಗೆ ಉನ್ನತ ಮಟ್ಡದ ತನಿಖೆಗೆ ಆದೇಶಿಸಬೇಕು, ಬಲಿಪಶು ಕುಟುಂಬಗಳಿಗೆ ತಲಾ 25 ಲಕ್ಷ ರೂ. ಪರಿಹಾರ ಒದಗಿಸಬೇಕು  ಎಂದು ಮುನೀರ್ ಕಾಟಿಪಳ್ಳ ಮುಖ್ಯಮಂತ್ರಿಯವರನ್ನು ಒತ್ತಾಯಿಸಿದ್ದಾರೆ. ನಾಗರಿಕರು ಸಹನೆಯಿಂದ ಇದ್ದು ಶಾಂತಿ ಕಾಪಾಡಬೇಕು ಎಂದೂ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News