ಉದ್ಯಮಗಳು ಎದುರಿಸುತ್ತಿರು ಸಮಸ್ಯೆಗಳಿಗೆ ಸೂಕ್ತ ಪರಿಹಾರ: ಎಸ್.ಜಿಯಾವುಲ್ಲಾ

Update: 2019-12-19 18:31 GMT

ಉಡುಪಿ, ಡಿ.19: ಇಂದು ಕೈಗಾರಿಕಾ ವಲಯ ಬಿಕ್ಕಟ್ಟನ್ನು ಎದುರಿಸುತ್ತಿದೆ, ಸಮಸ್ಯೆ ಇದೆ. ಹೀಗಾಗಿ ರಾಜ್ಯದಾದ್ಯಂತ ಸಣ್ಣ ಮತ್ತು ಮಧ್ಯಮ ದರ್ಜೆ ಕೈಗಾರಿಕೆಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೈಗೊಳ್ಳುವ ನಿಟ್ಟಿನಲ್ಲಿ, ಎಲ್ಲಾ ಜಿಲ್ಲೆಗಳಲ್ಲೂ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಆಲಿಸಿ, ಅವರೊಂದಿಗೆ ಸಂವಾದವನ್ನು ನಡೆಸಲಾಗುತ್ತಿದೆ ಎಂದು ರಾಜ್ಯ ಎಂಎಸ್‌ಎಂಇ ನಿರ್ದೇಶನಾಲಯದ ನಿರ್ದೇಶಕ ಎಸ್. ಝಿಯಾವುಲ್ಲಾ ತಿಳಿಸಿದ್ದಾರೆ.

ಗುರುವಾರ ಉಡುಪಿಯ ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘಗಳ ಸಹಯೋಗದೊಂದಿಗೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ, ಶಿವಳ್ಳಿ ಕೈಗಾರಿಕಾ ವಲಯದ ಡಿಎಸ್‌ಐಎ ಸಭಾಂಗಣದಲ್ಲಿ ಆಯೋಜಿಸಿದ ಆಹಾರ ಉತ್ಪಾದನೆ, ಕೃಷಿ ನೀತಿ-2015 ಮತ್ತು ಕಾರ್ಮಿಕ ವೇತನ ಸಂಹಿತೆ-2019ರ ಕುರಿತು ಅರಿವು ಮೂಡಿಸುವ ಸಂವಾದ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಎಂಎಸ್‌ಎಂಇ ನಿರ್ದೇಶನಾಲಯ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರ ಸಮಸ್ಯೆಗಳನ್ನು ಅರಿತು, ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜಿಲ್ಲೆಗಳಲ್ಲಿ ಉದ್ದಿಮೆದಾರರಿಂದ ಪಡೆದ ಅಭಿಪ್ರಾಯಗಳನ್ನು ಸಂಗ್ರಹಿಸಿ, ಉದ್ದಿಮೆದಾರರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು, ಮುಂದಿನ ಬಜೆಟ್‌ನಲ್ಲಿ ಈ ಬಗ್ಗೆ ಸೂಕ್ತ ಕಾರ್ಯಕ್ರಮ ರೂಪಿಸಲು ಪ್ರಯತ್ನಿಸ ಲಾಗುತ್ತಿದೆ ಎಂದವರು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ, ಜಿಲ್ಲೆಯ ಎಂಎಸ್‌ಎಂಇ ಉದ್ದಿಮೆದಾರರು ತಮ್ಮ ಅನೇಕ ಸಮಸ್ಯೆಗಳ ಕುರಿತು ನಿರ್ದೇಶಕರ ಗಮನ ಸೆಳೆದರು. ಉದ್ದಿಮೆಗಳು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಎದುರಿಸುತ್ತಿರುವ ಸಮಸ್ಯೆ, ಸಾಲಗಳಿಗೆ ನೀಡಬೇಕಾದ ಭದ್ರತೆ ಸಮಸ್ಯೆ, ಬಡ್ಡಿ ಪ್ರಮಾಣ ಹೆಚ್ಚಳ, ಗೇರುಬೀಜ ಉದ್ದಿಮೆ ಗಳು ಮಂಗಳೂರು ಬಂದರಿನಲ್ಲಿ ಎದುರಿಸುತ್ತಿರುವ ಸವಾಲು ಗಳು, ಕಂಪೆನಿ ಸೆಕ್ರಟರಿ ನೇಮಕದಲ್ಲಿ ವಿಧಿಸಿರುವ ಷರತ್ತುಗಳ ಪಾಲನೆಯಲ್ಲಿನ ಸಮಸ್ಯೆಗಳು, ಕಾರ್ಮಿಕ ವೇತನ ಸಂಹಿತೆಯಲ್ಲಿನ ಸಮಸ್ಯೆಗಳು, ಪ್ಲಾಸ್ಟಿಕ್ ಉದ್ದಿಮೆದಾರರ ಸಮಸ್ಯೆಗಳು, ಎಪಿಎಂಸಿ ಹಾಗೂ ಕೆಎಸ್‌ಎಫ್‌ಸಿಯಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನ ಸೆಳೆದರು.

ಇದೇ ಸಂದರ್ಭ ಉದ್ದಿಮೆದಾರರರು ನೀಡಿದ ದೂರು ಮನವಿಗಳನ್ನು ಆಲಿಸಿದ ಎಸ್.ಝಿಯಾವುಲ್ಲಾ , ಈ ಎಲ್ಲಾ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಸಂಬಂದಪಟ್ಟ ಇಲಾಖೆಗಳ ಗಮನ ಸೆಳೆದು, ಅವುಗಳ ಶೀಘ್ರ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದರು.

ತಮ್ಮ ನಿರ್ದೇಶನಾಲಯ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬರ ಸಮಸ್ಯೆಯನ್ನೂ ಆಲಿಸಿ, ಅದಕ್ಕನುಗುಣವಾಗಿ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು. ಇದರಿಂದ ಸರಕಾರಕ್ಕೆ ಉದ್ಯಮ ಸ್ನೇಹಿ ಕಾರ್ಯ ನೀತಿಗಳನ್ನು ರೂಪಿಸಲು ಸಹಾಯವಾಗುವುದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಕಾಸಿಯಾ ಅಧ್ಯಕ್ಷ ಆರ್.ರಾಜು, ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಮಾನಂದ್ ನಾಯಕ್, ಎಂಎಸ್‌ಎಂಇ ನಿರ್ದೇಶನಾಲಯದ ಅಪರ ನಿರ್ದೇಶಕ ಎಚ್.ಎಂ.ಶ್ರೀನಿವಾಸ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಸಂಘ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತೋಟಗಾರಿಕೆ, ಕರ್ನಾಟಕ ಕೃಷಿ ವ್ಯವಹಾರ ಅಭಿವೃದ್ದಿ ನಿಗಮದ ಜಂಟಿ ನಿರ್ದೇಶಕಿ ಎನ್.ಅಂಬಿಕಾ ಕೃಷಿ ಯೋಜನೆಗಳ ಕುರಿತು ಹಾಗೂ ಸಿಎಫ್‌ಟಿಆರ್‌ಐನ ಹಿರಿಯ ವಿಜ್ಞಾನಿ ಡಾ. ಕುಡ್ಚಿಕರ್ ಆಹಾರ ಉತ್ಪಾದನೆ ಕುರಿತು, ಕಾರ್ಮಿಕ ವೇತನ ಸಂಹಿತೆ -2019 ಕುರಿತು ಹೇಮಚಂದ್ರ ಮಾಹಿತಿಗಳನ್ನು ಹಂಚಿಕೊಂಡರು.

ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐ.ಆರ್.ಪೆನಾರ್ಂಡಿಸ್ ಸ್ವಾಗತಿಸಿದರು. ಜಿಲ್ಲೆಯ ದೊಡ್ಡ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಉದ್ದಿಮೆದಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News