ಮಂಗಳೂರು ಪೊಲೀಸರಿಂದ ಪೂರ್ವಯೋಜಿತ ಕೃತ್ಯ : ಮುಸ್ಲಿಂ ಸಂಘಟನೆಗಳ ಆರೋಪ

Update: 2019-12-20 12:57 GMT

ಮಂಗಳೂರು, ಡಿ.20: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿ ಗುರುವಾರ ಮಂಗಳೂರಿನಲ್ಲಿ ನಡೆದ ಹಿಂಸಾಚಾರವು ಪೊಲೀಸರಿಂದ ನಡೆದ ಪೂರ್ವಯೋಜಿತ ಕೃತ್ಯವಾಗಿದೆ ಎಂದು ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಆರೋಪಿಸಿದ್ದಾರೆ.

ನಗರದ ಮಸ್ಜಿದ್ ಇಹ್ಸಾನ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯುಎಚ್ ಗುರುವಾರ ಕೆಲವು ಮುಸ್ಲಿಂ ಯುವಕರು ಶಾಂತಿಯುತ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಪೊಲೀಸರು ಅವರ ಮೇಲೆ ಲಾಠಿಜಾರ್ಜ್ ನಡೆಸಿ ಅಶ್ರುವಾಯಿ ಸಿಡಿಸಿ ಜನರನ್ನು ಆಕ್ರೋಶಿತರನ್ನಾಗಿ ಮಾಡಿದ್ದಾರೆ. ಗೋಲಿಬಾರ್ ಮಾಡಿ ಇಬ್ಬರನ್ನು ಬಲಿ ತೆಗೆದುಕೊಂಡಿದ್ದಾರೆ. ಆದರೆ ಪೊಲೀಸರು ಗೋಲಿಬಾರ್ ಮಾಡುವ ಅಗತ್ಯವೇ ಇರಲಿಲ್ಲ. ಎಲ್ಲವನ್ನೂ ಪೂರ್ವಯೋಜಿತರಾಗಿ ಈ ಕೃತ್ಯ ಎಸಗಿದ್ದಾರೆ ಎಂದರು.

ಪಿಎಫ್‌ಐ ಸಂಘಟನೆಯ ಮುಖಂಡ ಹಾಗೂ ನ್ಯಾಯವಾದಿ ಅಶ್ರಫ್ ಕೆ. ಅಗ್ನಾಡಿ ಮಾತನಾಡಿ ಸೆ.144 ಹಾಕಿದ ಬಳಿಕವೂ ಪರಿಸ್ಥಿತಿ ಕೈ ಮೀರಿದರೆ ಸಾರ್ವಜನಿಕವಾಗಿ ಎಚ್ಚರಿಕೆ ನೀಡಬೇಕು. ಗುಂಪನ್ನು ಚದುರಿಸಬೇಕು. ಆವಾಗಲೂ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ ಮೊಣಕಾಲಿನ ಕೆಳಭಾಗಕ್ಕೆ ಲಘುಲಾಠಿ ಪ್ರಹಾರ ಮಾಡಬಹುದು. ಆದರೆ ಗುರುವಾರ ಪೊಲೀಸರು ಮಾಡಿದ್ದು ಕಾನೂನು ಉಲ್ಲಂಘನೆಯಾಗಿದೆ. ಶಾಲಾ-ಕಾಲೇಜುಗಳು ಬಿಡುವ ಸಂದರ್ಭವನ್ನೂ ಗಮನಕ್ಕೆ ತೆಗೆದುಕೊಳ್ಳದೆ ಅಟ್ಟಾಡಿಸಿಕೊಂಡು ಹೊಡೆದರು. ಪ್ರತಿಭಟನೆಗೆ ಬಂದವರು, ಬಾರದವರನ್ನು ಕೂಡ ಬೆನ್ನಟ್ಟಿದರು. ಅಶ್ರವಾಯಿ ಸಿಡಿಸಿದರು. ಮಸೀದಿ ಸಹಿತ ಸಾರ್ವಜನಿಕವಾಗಿ ಗುಂಡು ಹಾಕಿದರು. ಇದರಿಂದ ಇಬ್ಬರು ಬಲಿಯಾದರೆ, ಮಾಜಿ ಮೇಯರ್ ಕೆ. ಅಶ್ರಫ್ ಸಹಿತ 6 ಮಂದಿಗೆ ಗುಂಡೇಟು ತಗುಲಿದೆ. 38 ಮಂದಿಗೆ ಲಾಠಿಏಟು ಬಿದ್ದಿದ್ದು, ಅವರೆಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಕಂದುಕದ ಜಲೀಲ್‌ ಅವರ ಕಣ್ಣಿಗೆ ಅವರ ಪತ್ನಿಯ ಮುಂದೆಯೇ ಗುಂಡೇಟು ಹಾಕಿ ಪೊಲೀಸರು ಕೊಂದಿದ್ದಾರೆ. ಈ ಮಧ್ಯೆ ಬಂದರ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾದರು, ಪೊಲೀಸರ ಹತ್ಯೆ ಮಾಡಲು ಯತ್ನಿಸಿದರು, ಡಿಸಿಪಿಗಳಿಗೆ ಗಾಯವಾಗಿದೆ ಎಂದೆಲ್ಲಾ ಆಯುಕ್ತ ಡಾ. ಪಿಎಸ್ ಹರ್ಷ ಕಟ್ಟುಕಥೆ ಕಟ್ಟಿದರು ಎಂದು ಆಪಾದಿಸಿದ ಅಶ್ರಫ್ ಅಗ್ನಾಡಿ, ಮಾಜಿ ಮೇಯರ್ ಕೆ. ಅಶ್ರಫ್ ಅವರನ್ನು ಪೊಲೀಸ್ ಆಯುಕ್ತರೇ ಸ್ಥಳಕ್ಕೆ ಕರೆಸಿ ಶಾಂತಿ ಕಾಪಾಡಲು ಜನರಿಗೆ ತಿಳಿ ಹೇಳಿ ಎಂದು ಭಿನ್ನವಿಸಿಕೊಂಡರು. ಅದರಂತೆ ಅಶ್ರಫ್ ಉದ್ರಿಕ್ತ ಜನರನ್ನು ಸಮಾಧಾನಪಡಿಸಿ ಜಲೀಲ್ ಕೃಷ್ಣಾಪುರ, ಮುಸ್ತಫಾ ಕೆಂಪಿ ಅವರ ಜೊತೆ ಬಂದರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಗುಂಡೇಟು ಹಾಕಲಾಗಿದೆ. ಇದರಿಂದ ಅಶ್ರಫ್ ಗಾಯಗೊಂಡು ಇದೀಗ ಚಿಕಿತ್ಸೆ ಪಡೆಯುವಂತಾಗಿದೆ. ಒಟ್ಟಿನಲ್ಲಿ ಪೊಲೀಸರು ಅತ್ಯಂತ ವ್ಯವಸ್ಥಿತವಾಗಿ ಮಂಗಳೂರಿನಲ್ಲಿ ಭಯಾನಕ ವಾತಾವರಣ ಸೃಷ್ಟಿಸಿದರು ಎಂದು ಅವರು ಹೇಳಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತ ಡಾ. ಹರ್ಷ ಗುರುವಾರ ಘಟನೆಯ ಬಗ್ಗೆ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಬಂದರ್ ಠಾಣೆಯ ಸುತ್ತಮುತ್ತ 7 ಸಾವಿರ ಮಂದಿ ಜಮಾಯಿಸಿದ್ದಾರೆ ಎನ್ನುತ್ತಿದ್ದಾರೆ. ಇದೆಲ್ಲಾ ಕಮಿಷನರ್‌ರ ವ್ಯವಸ್ಥಿತ ಪಿತೂರಿಯ ಭಾಗವಾಗಿದೆ ಎಂದು ಎಸ್‌ಡಿಪಿಐ ಮುಖಂಡ ಅಶ್ರಫ್ ಜೋಕಟ್ಟೆ ಆರೋಪಿಸಿದರು.

ಜಮಾಅತೆ ಇಸ್ಲಾಮೀ ಹಿಂದ್ ಮುಖಂಡ ಮುಹಮ್ಮದ್ ಕುಂಞಿ ಮಾತನಾಡಿ ಪೊಲೀಸರು ಅತ್ಯಂತ ವ್ಯವಸ್ಥಿತವಾಗಿ ಇಬ್ಬರನ್ನು ಕೊಂದಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರಲ್ಲದೆ, ಜಿಲ್ಲೆಯ ಜನರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಹಿದಾಯ ಫೌಂಡೇಶನ್‌ನ ಖಾಲಿದ್ ಅಹ್ಮದ್, ಹಿಫ್‌ನ ನಾಝಿಮ್ ಎಸ್.ಎಸ್., ಎಸ್‌ಕೆಎಸ್‌ಎಂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಇಮ್ತಿಯಾಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News