ಪರಿಸ್ಥಿತಿಯನ್ನು ಗಮನಿಸಿ ಕರ್ಫ್ಯೂ ಸಡಿಲಿಕೆ : ಡಾ. ಪಿ.ಎಸ್.ಹರ್ಷ

Update: 2019-12-20 15:14 GMT

ಮಂಗಳೂರು, ಡಿ. 20: ಪರಿಸ್ಥಿತಿಯನ್ನು ಗಮನಿಸಿ ಕರ್ಫ್ಯೂ ಸಡಿಲಿಕೆಯ ಬಗ್ಗೆ ಚಿಂತನೆ ಮಾಡಲಾಗುವುದು. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ. ಪಿ.ಎಸ್. ಹರ್ಷ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಡಿ.22ರಂದು ರಾತ್ರಿ 12ಗಂಟೆಯವರೆಗೆ ವಿಧಿಸಲಾಗಿರುವ ಕರ್ಫ್ಯೂವನ್ನು ಶುಕ್ರವಾರ ಮಧ್ಯಾಹ್ನ 12 ರಿಂದ 2 ಗಂಟೆಯವರೆಗೆ ಸಡಿಲಿಸಲಾಗಿತ್ತು ಎಂದ ಅವರು ಎಲ್ಲಾ ಠಾಣೆ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್  ಮಾಡಲಾಗಿದೆ. ಗುರುವಾರ ಸೆಕ್ಷನ್ 144 ಇದ್ದ ಸಂದರ್ಭ ಕಾನೂನು ಉಲ್ಲಂಘಿಸಿ ನಡೆದ ಪ್ರತಿಭಟನೆ ಸಂದರ್ಭದ ಬಳಿಕ ನಡೆದ ಅಹಿತಕರ ಘಟನೆಯಲ್ಲಿ 33 ಮಂದಿ ಪೊಲೀಸರು ಗಾಯಗೊಂಡಿದ್ದು, 5 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಇದುವರೆಗೆ ದಕ್ಷಿಣ ಪೊಲೀಸ್ ಮತ್ತು ಉತ್ತರ ಪೊಲೀಸ್ ಠಾಣೆಯಲ್ಲಿ ಒಟ್ಟು 7 ಪ್ರಕರಣಗಳು ದಾಖಲಾಗಿದ್ದು, 7 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.

ಇಂದು ಯಾವೂದೇ ಅಹಿತಕರ ಘಟನೆ ನಡೆದಿಲ್ಲ. ಕಾಸರಗೋಡಿನಿಂದ ಪತ್ರಕರ್ತರು ಎಂದು ಹೇಳಿಕೊಂಡು ಬಂದ ಕೆಲವರ ಬಳಿ ಮಾನ್ಯತೆ ಪಡೆದ ಗುರುತು ಪತ್ರವನ್ನು ಕೇಳಿದ್ದೇವೆ. ನಗರದಲ್ಲಿ ಕರ್ಫ್ಯೂ ಹೇರಿರುವ ಹಿನ್ನೆಲೆಯಲ್ಲಿ ನಗರದೊಳಗೆ ಬರುವವರ ಗುರುತು ಪತ್ರವನ್ನು ಕೆಲವು ನಿಗದಿತ ಪ್ರದೇಶಗಳಲ್ಲಿ ಕೇಳುತ್ತಿದ್ದೇವೆ. ಗುರುತು ಪತ್ರದ ಸರಿಯಾದ ದಾಖಲೆ ಇಲ್ಲದವರನ್ನು ವಾಪಾಸು ಕಳುಹಿಸಿದ್ದೇವೆ. ಗುರುವಾರ ನಡೆದ ಪ್ರಕರಣಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ತನಿಖೆ ನಡೆದ ಬಳಿಕ ಉತ್ತರ ನೀಡುವುದಾಗಿ ಡಾ. ಹರ್ಷ ತಿಳಿಸಿದ್ದಾರೆ.

ಎಡಿಜಿಪಿ ಆಗಮನ:- ರಾಜ್ಯದ ಎಡಿಜಿಪಿ ದಯಾನಂದ್ ಮಂಗಳೂರು ನಗರಕ್ಕೆ ಆಗಮಿಸಿದ್ದು, ಪ್ರಕರಣದ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಡಾ. ಪಿ.ಎಸ್.ಹರ್ಷ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News