ಪೇಜಾವರ ಶ್ರೀ ಅನಾರೋಗ್ಯ: ಆಸ್ಪತ್ರೆಗೆ ಹಲವು ಗಣ್ಯರ ಭೇಟಿ

Update: 2019-12-20 15:39 GMT

ಉಡುಪಿ, ಡಿ.20: ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅನಾರೋಗ್ಯ ದಿಂದ ಚಿಕಿತ್ಸೆಗೆ ದಾಖಲಾಗಿರುವ ಹಿನ್ನೆಲೆಯಲ್ಲಿ ಹಲವು ಮಂದಿ ಗಣ್ಯರು ಇಂದು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಭೇಟಿ ನೀಡಿದರು.

ಬೆಳಗ್ಗೆ ಆಸ್ಪತ್ರೆಯಲ್ಲಿ ಪೇಜಾವರ ಸ್ವಾಮೀಜಿಯ ದರ್ಶನ ಪಡೆದ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ಇಡೀ ಸಮಾಜಕ್ಕೆ ಮಾರ್ಗದರ್ಶನವನ್ನು ನೀಡಿ, ಧಾರ್ಮಿಕ ಪ್ರಪಂಚದಲ್ಲಿ ಬಹಳಷ್ಟು ಸಾಧನೆ ಮಾಡಿರುವ ಪೇಜಾವರ ಸ್ವಾಮೀಜಿಯ ಯೋಗಕ್ಷೇಮಕ್ಕಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಬೇಕಾಗಿರುವುದು ಎಲ್ಲರ ಜವಾಬ್ದಾರಿಯಾಗಿದೆ. ಅದೇ ರೀತಿ ನಾವು ಕೂಡ ಜಪ ಹಾಗೂ ವಿಶೇಷ ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ ಎಂದರು.

ಮಧ್ಯಾಹ್ನ ವೇಳೆ ಆಸ್ಪತ್ರೆಗೆ ಆಗಮಿಸಿದ ಕಾಸರಗೋಡು ಎಡನೀರು ಮಠದ ಶ್ರೀಕೇಶವಾನಂದ ಭಾರತಿ ಸ್ವಾಮೀಜಿ, ವೈದ್ಯ ರೊಂದಿಗೆ ಪೇಜಾವರ ಸ್ವಾಮೀಜಿ ಗಳ ಆರೋಗ್ಯ ವಿಚಾರಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಯ ಭೇಟಿಗೆ ಅವಕಾಶ ಇಲ್ಲದ ಕಾರಣ ವೈದ್ಯರೊಂದಿಗೆ ಅವರ ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ. ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.ಅವರು ಬೇಗ ಗುಣಮುಖರಾಗಲಿ ಎಂಬುದಾಗಿ ನಾವು ಪ್ರಾರ್ಥನೆ ಮಾಡಿದ್ದೇವೆ ಎಂದರು.

ಅದೇ ರೀತಿ ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್.ಮೆಂಡನ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾಧಿಕಾರಿ ಜಗದೀಶ್, ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ಜೊತೆ ಪೇಜಾವರ ಸ್ವಾಮೀಜಿಯ ವರ ಆರೋಗ್ಯ ುರಿತು ಮಾಹಿತಿ ಪಡೆದುಕೊಂಡರು.

ಆಸ್ಪತ್ರೆಯಲ್ಲಿ ಭದ್ರತೆ

ಸ್ವಾಮೀಜಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಯ ಆವರಣದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ಆಸ್ಪತ್ರೆಯ ಹಿಂಬದಿಯ ತುರ್ತು ಚಿಕಿತ್ಸಾ ಘಟಕದ ಎದುರು ಪೊಲೀಸ್ ಅಧಿಕಾರಿಗಳು ಸಹಿತ ಹಲವು ಮಂದಿ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ನಳಿನ್ ಕುಮಾರ್ ಕಟೀಲು ಭೇಟಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಪೇಜಾವರ ಶ್ರೀ ಆರೋಗ್ಯವಾಗಿದ್ದಾರೆ. ಬೆಳಗ್ಗೆಗಿಂತ ಈಗ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಇವರು ಹಲವು ವರ್ಷಗಳಿಂದ ದೇವರ ಸೇವೆ ಮಾಡಿಕೊಂಡು ಬಂದವರು. ನಾವೆಲ್ಲಾ ಅವರಲ್ಲಿ ದೇವರನ್ನು ಕಂಡವರು ಎಂದರು.

ಸ್ವಾಮೀಜಿ ಶೀಘ್ರವೇ ಚೇತರಿಕೆಗೊಂಡು ಸಮಾಜ ಕಾರ್ಯದಲ್ಲಿ ತೊಡು ಗುತ್ತಾರೆ ಎಂಬ ವಿಶ್ವಾಸವಿದೆ. ನಾಳೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಮಂಗಳೂರಿನ ಘಟನೆಗಳ ಬಗ್ಗೆ ಪರಿಶೀಲಿಸಿ, ಬಳಿಕ ಇಲ್ಲಿಗೆ ಭೇಟಿ ನೀಡಲಿ ದ್ದಾರೆ ಎಂದು ನಳೀನ್ ಕುಮಾರ್ ಕಟೀಲ್ ತಿಳಿಸಿದರು.

ಶನಿವಾರ ಮುಖ್ಯಮಂತ್ರಿ ಭೇಟಿ

ಪೇಜಾವರ ಸ್ವಾಮೀಜಿ ಚಿಕಿತ್ಸೆ ಪಡೆಯುತ್ತಿರುವ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರಾಜ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶನಿವಾರ ಮಧ್ಯಾಹ್ನ ವೇಳೆ ಭೇಟಿ ನೀಡಲಿರುವರು. ಅದೇ ರೀತಿ ಕೇಂದ್ರ ಸಚಿವರಾದ ಅಮಿತಾ ಶಾ ಅಥವಾ ನಿರ್ಮಲ ಸೀತಾರಾಮನ್ ಕೂಡ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News