ಮಂಗಳೂರು ಪೊಲೀಸರ ಗೋಲಿಬಾರ್ ಪ್ರಕರಣ : ಗಾಯಾಳುಗಳ ಆರೋಗ್ಯದಲ್ಲಿ ಚೇತರಿಕೆ

Update: 2019-12-20 16:11 GMT

ಮಂಗಳೂರು, ಡಿ.20: ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರು ನಗರದಲ್ಲಿ ಗುರುವಾರ ಪೊಲೀಸರು ಮತ್ತು ಪ್ರತಿಭಟನಾ ಕಾರರ ನಡುವಿನ ಸಂಘರ್ಷದಲ್ಲಿ ಗಂಭೀರ ಗಾಯಗೊಂಡಿದ್ದ ಗಾಯಾಳುಗಳ ಆರೋಗ್ಯದಲ್ಲಿ ಶುಕ್ರವಾರ ಚೇತರಿಕೆ ಕಂಡುಬಂದಿದೆ.

ಮಂಗಳೂರು ನಗರದ ಖಾಸಗಿ ಆಸ್ಪತ್ರೆಗಳು ಸೇರಿದಂತೆ ವಿವಿಧೆಡೆ ಚಿಕಿತ್ಸೆ ಪಡೆಯುತ್ತಿರುವ ಕೆಲ ಗಾಯಾಳುಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಾರಂಭಿಸಿದೆ. ಇನ್ನು ಹಲವು ಗಾಯಾಳುಗಳು ಐಸಿಯುನಲ್ಲಿ ಶಸ್ತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಏತನ್ಮಧ್ಯೆ, ಕೆಲ ಗಾಯಾಳುಗಳ ದೇಹದಲ್ಲಿ ಜಿನುಗುತ್ತಿರುವ ರಕ್ತಸ್ರಾವ ಕಡಿಮೆಯಾದಲ್ಲಿ ಶೀಘ್ರದಲ್ಲಿಯೇ ಗುಣಮುಖರಾಗಲಿದ್ದಾರೆ ಎನ್ನುವುದು ವೈದ್ಯರ ಅಭಿಪ್ರಾಯ.

ಬಂದರ್‌ನ ಕಂದಕ್ ನಿವಾಸಿ ಅಬುಸಾಲೇಹ್ (40) ನಗರದ ಖಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಂಡುಬಂದಿದೆ. ಇವರು ನಗರದ ಬಂದರ್‌ನಲ್ಲಿ ಪ್ಲಾಸ್ಟಿಕ್ ಕಂಪೆನಿ ಮಳಿಗೆಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ.

‘ಅಬುಸಾಲೇಹ್ ಅವರಿಗೆ ವಾರದ ಹಿಂದೆ ಬಲಗಾಲಿಗೆ ಗಾಯವಾಗಿತ್ತು. ನಾಲ್ಕೈದು ದಿನದಲ್ಲಿ ಗುಣಮುಖರಾಗಿದ್ದ ಅವರು ಗುರುವಾರ ತಾನು ಕೆಲಸ ಮಾಡುವ ಪ್ಲಾಸ್ಟಿಕ್ ಕಂಪೆನಿ ಮಳಿಗೆಗೆ ಭೇಟಿ ನೀಡಿ ಮರುದಿನದಿಂದ ಕೆಲಸಕ್ಕೆ ಬರುವುದಾಗಿ ಹೇಳಿ ಹೋಗಲು ಬಂದಿದ್ದರು. ಬಳಿಕ ಮಾಲಕರೊಂದಿಗೆ ಮಳಿಗೆ ಬಂದ್ ಮಾಡಿಕೊಂಡು ಹೊರ ಬರುವಾಗ ಪೊಲೀಸರು ಗೋಲಿಬಾರ್ ನಡೆಸಿದರು’ ಎಂದು ಘಟನೆಯನ್ನು ‘ವಾರ್ತಾಭಾರತಿ’ ಜತೆಗೆ ಹಂಚಿಕೊಂಡರು.

ಪೊಲೀಸರು ನಡೆಸಿದ ಗೋಲಿಬಾರ್‌ನಿಂದಾಗಿ ಬುಲೆಟ್‌ವೊಂದು ಅಬುಸಾಲೇಹ್ ಅವರ ಬಲಗೈಗೆ ಗಂಭೀರ ಗಾಯ ಮಾಡಿದೆ. ಬಲಗೈನಲ್ಲಿ ಅಂಗೈ ಆಕಾರದ ಮಾಂಸ ಕಿತ್ತು ಹೋಗಿದೆ. ಪ್ಲಾಸ್ಟಿಕ್ ಮಳಿಗೆಯಲ್ಲಿ ಹಮಾಲಿ ಕೆಲಸ ಮಾಡಲು ಕೈಗಳೇ ಆಧಾರವಾಗಿತ್ತು. ಇನ್ನು ಮೂರು ತಿಂಗಳಲ್ಲಿ ಗುಣಮುಖರಾಗುವುದಾಗಿ ವೈದ್ಯರು ಹೇಳುತ್ತಿದ್ದರೂ ಮುಂದಿನ ದಿನಗಳಲ್ಲಿ ಕೈನಲ್ಲಿ ಭಾರ ಹೊರುವ ಸಾಧ್ಯತೆ ಕ್ಷೀಣಿಸಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುತ್ತಿದ್ದ ಪ್ರತಿಭಟನಾಕಾರರು ಮತ್ತು ತನಗೂ ಯಾವುದೇ ಸಂಬಂಧವಿಲ್ಲ. ಗೋಲಿಬಾರ್‌ನಲ್ಲಿ ಅಮಾಯಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದು ಅಕ್ಷಮ್ಯ ಅಪರಾಧವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ರಾಜ್ಯ ಸರಕಾರವು ಕೂಡಲೇ ಸೂಕ್ತ ಕ್ರಮ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಮಂಗಳೂರು ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂದರ್‌ನ ಮುಹಮ್ಮದ್ ಇರ್ಫಾನ್ (31) ಆರೋಗ್ಯದಲ್ಲಿ ಬಹುತೇಕ ಚೇತರಿಕೆ ಕಂಡುಬಂದಿದೆ. ದಕ್ಕೆಯಲ್ಲಿ ಮೀನು ಮಾರಾಟ ಕೆಲಸ ಮಾಡಿಕೊಂಡಿರುವ ಇರ್ಫಾನ್ ಗುರುವಾರ ಬಂದರ್‌ನ ಮಸೀದಿಗೆ ಪ್ರಾರ್ಥನೆ ಸಲ್ಲಿಸಲು ತೆರಳಿದ್ದಾಗ ಗೋಲಿಬಾರ್‌ಗೆ ತುತ್ತಾಗಿದ್ದರು ಎನ್ನಲಾಗಿದೆ.

‘ಪ್ರಾರ್ಥನೆ ಸಮಯವಾದ್ದರಿಂದ ಬಂದರ್‌ನ ಮಸೀದಿಗೆ ಬರುತ್ತಿದೆ. ಮಸೀದಿ ಸಮೀಪಿಸುತ್ತಿದ್ದಾಗ ಪೊಲೀಸರು ವಾಪಸ್ ತೆರಳಲು ಸೂಚಿಸಿದರು. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದೆ. ಇದೇ ಸಂದರ್ಭ ಮೊಬೈಲ್‌ಗೆ ಕರೆಬಂತು. ಕರೆ ಸ್ವೀಕರಿಸುತ್ತಿದ್ದಂತೆ ಪೊಲೀಸರು ಗೋಲಿಬಾರ್ ನಡೆಸಿದರು. ಬುಲೆಟ್‌ವೊಂದು ಕೈಯನ್ನು ಸೀಳಿಕೊಂಡು ಹೊರ ಹೋಗಿದೆ. ಸದ್ಯ ಕೈಯಲ್ಲಿ ಸೋರಿಕೆಯಾಗುತ್ತಿದ್ದ ರಕ್ತ ನಿಂತಿದೆ. ಶೀಘ್ರದಲ್ಲೇ ಗುಣಮುಖರಾಗುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ’ ಎಂದು ಪೊಲೀಸರ ಗುಂಡೇಟು ತಿಂದು ಗಾಯಗೊಂಡ ಮುಹಮ್ಮದ್ ಇರ್ಫಾನ್ ತಿಳಿಸಿದ್ದಾರೆ.

ನಗರದ  ಆಸ್ಪತ್ರೆಯ ಐಸಿಯುನಲ್ಲಿ ದಾಖಲಾಗಿರುವ ಆಸಿಫ್ ಫೈಸಲ್‌ನಗರ (23), ನಾಸಿರ್ ಕಣ್ಣೂರು (24), ಮುಹಮ್ಮದ್ ಇಮ್ರಾನ್ ಉಳ್ಳಾಲ (34) ಗಂಭೀರ ಗಾಯಗೊಂಡಿದ್ದಾರೆ. ಮೂವರ ಆರೋಗ್ಯದಲ್ಲಿ ಅಲ್ಪ ಪ್ರಮಾಣದಲ್ಲಿ ಚೇತರಿಕೆ ಕಾಣಿಸಿದೆ. ಇನ್ನು, ಬಂದರ್‌ನ ಆಟೊಡ್ರೈವರ್ ಮುಹಮ್ಮದ್ ಮಸ್ತಫಾ ತಲಪಾಡಿ (40), ಮುಹಮ್ಮದ್ ನಝೀರ್(47) ಸಣ್ಣ ಪುಟ್ಟ ಗಾಯಗಳಾಗಿದ್ದು, ಆರೋಗ್ಯದಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದಿವೆ.

‘ಪೊಲೀಸರು ಮಾನವೀಯತೆ ಅರಿಯದವರು’

ಪ್ರಾರ್ಥನೆ ಸಲ್ಲಿಸುವುದು ಸಂವಿಧಾನ ಕಲ್ಪಿಸಿರುವ ಧಾರ್ಮಿಕ ಹಕ್ಕುಗಳಲ್ಲೊಂದಾಗಿದೆ. ಪೊಲೀಸರು ಪ್ರಾರ್ಥನೆ ಸಲ್ಲಿಸಲಾದರೂ ಅವಕಾಶ ಕಲ್ಪಿಸಿಕೊಡಬಹುದಾಗಿತ್ತು. ರಕ್ಷಣೆ ನೀಡುವ ಪೊಲೀಸರೇ ಇಂತಹ ಪ್ರಾಣತೆಗೆಯುವ ಕೃತ್ಯದಲ್ಲಿ ಭಾಗಿಯಾದರೆ ಯಾರನ್ನು ನಂಬಬೇಕು. ಪೊಲೀಸರು ಮಾನವೀಯತೆಯ ಮೌಲ್ಯಗಳನ್ನೇ ಅರಿತಿಲ್ಲ ಎಂದು ಪೊಲೀಸರ ಗುಂಡೇಟಿನಿಂದ ಗಾಯಗೊಂಡ ಮುಹಮ್ಮದ್ ಇರ್ಫಾನ್ ಬೇಸರ ವ್ಯಕ್ತಪಡಿಸಿದರು.

ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಾಮಾನ್ಯ ಜನರಿಗೆ ಗುಂಡು ಹಾರಿಸುವಂತಹ ಘಟನೆಗಳು ನಡೆಯುತ್ತಿವೆ ಎನ್ನುವುದಾದರೆ ನಮ್ಮ ಕಾನೂನಿಗೆ ಬೆಲೆ ಎಲ್ಲಿದೆ ? ಅಮಾಯಕರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಗೋಲಿಬಾರ್ ನಡೆಸುವ ಅಧಿಕಾರ ಕೊಟ್ಟವರಾದರೂ ಯಾರು ಎಂದು ಪ್ರಶ್ನಿಸಿದ ಅವರು, ನಿಷೇಧಾಜ್ಞೆ ಮೊದಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಲಾಠಿ ಚಾರ್ಜ್ ಮಾಡದಂತೆ ಸೂಚಿಸಿದ್ದರು. ಅದನ್ನು ಮೀರಿ ಮಂಗಳೂರು ಪೊಲೀಸರು ನಡೆದುಕೊಳ್ಳುತ್ತಿರುವುದು ಕಾನೂನಿನ ವಿರುದ್ಧ ಎಂದರು.

ಪೊಲೀಸರ ಮೇಲೆ ಹಲ್ಲೆಯಾಗಿದೆ ಎನ್ನುವುದು ಪೊಲೀಸ್ ಆಯುಕ್ತರ ದಾಖಲೆ ರಹಿತ ಹೇಳಿಕೆಯಾಗಿದೆ. ಪ್ರತಿಭಟನಾಕಾರರು ಪ್ರತಿಭಟನೆ ಮಾಡುತ್ತಿದ್ದಾಗ ಲಾಠಿ ಚಾರ್ಜ್ ಮಾಡಿ, ಗೋಲಿಬಾರ್ ಮಾಡಿದರು. ಪೊಲೀಸರು ಅಲ್ಲಿ ಪೊಲೀಸರಾಗಿ ಬಂದಿರಲಿಲ್ಲ; ಬದಲಾಗಿ ರೌಡಿಗಳಾಗಿ ಬಂದಿದ್ದರು. ಮುಖ್ಯಮಂತ್ರಿಯ ಆದೇಶವನ್ನೇ ಪಾಲಿಸದ ಮಂಗಳೂರು ಪೊಲೀಸ್ ಆಯುಕ್ತರು ಆರೆಸ್ಸೆಸ್, ಬಿಜೆಪಿಯವರ ಮಾತನ್ನು ಚಾಚುತಪ್ಪದೇ ಪಾಲಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಪೊಲೀಸರು ತಕ್ಷಣವೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪರಿಹಾರ ಕಲ್ಪಿಸಲು ಮನವಿ

‘ಇದು ಪೊಲೀಸರು ನಡೆಸಿದ ದುಷ್ಕೃತ್ಯ. ಆರೆಸ್ಸೆಸ್ ವೇಶ ಧರಿಸಿ ಲಾಠಿ ಪ್ರಹಾರ ನಡೆಸಿ, ಗುಂಡು ಹಾರಿಸಿ ಅಮಾಯಕರ ಜೀವ ತೆಗೆದಿದ್ದಾರೆ. ತೀವ್ರ ಗಾಯಗಳಿಂದ ಜರ್ಝರಿತಗೊಂಡಿರುವ ಅಬುಸಾಲೇಹ್ ಗುಣಮುಖರಾಗಲು ಇನ್ನು ಮೂರು ತಿಂಗಳು ಅಗತ್ಯವಿದೆ. ಮನೆಯಲ್ಲಿ ಆರ್ಥಿಕವಾಗಿ ಸಹಾಯವಾಗುತ್ತಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬ ಸಂಕಷ್ಟದಲ್ಲಿದೆ. ಸರಕಾರವು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ಪರಿಹಾರ ಕಲ್ಪಿಸಬೇಕು’ ಎಂದು ಗಾಯಾಳು ಅಬುಸಾಲೇಹ್ ಅವರ ಸಹೋದರ ಸೈಫ್ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News