ಅಂಬೇಡ್ಕರ್ ನೀಡಿರುವ ಸಂವಿಧಾನ ದೇಶದ ಅತ್ಯಂತ ಶ್ರೇಷ್ಠ ಕಾನೂನು: ನ್ಯಾ.ಬಿ.ಪಿ.ದೇವಮಾನೆ

Update: 2019-12-21 17:00 GMT

ಮೈಸೂರು, ಡಿ.21: ಅಂಬೇಡ್ಕರ್ ನೀಡಿರುವ ಸಂವಿಧಾನ ದೇಶದ ಅತ್ಯಂತ ಶ್ರೇಷ್ಠ ಕಾನೂನು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಪಿ.ದೇವಮಾನೆ ಬಣ್ಣಿಸಿದರು.

ಸರಸ್ವತಿಪುರಂನಲ್ಲಿರುವ ಜೆಎಸ್ ಎಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸಂವಿಧಾನ ದಿನಾಚರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ನ. 26ರ ಸಂವಿಧಾನ ದಿನಾಚರಣೆಯನ್ನು ಒಂದು ವರ್ಷದವರೆಗೆ ಅಭಿಯಾನವನ್ನಾಗಿ ಮಾಡಿ ವಿಶೇಷವಾಗಿ ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಮೂಲಭೂತ ಕತ್ರವ್ಯಗಳ ಕುರಿತು ಅರಿವು ಮೂಡಿಸಬೇಕೆಂದು ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದಂತೆ ದೇಶವ್ಯಾಪಿ ಸಂವಿಧಾನದ ಆಶಯ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಂಬೇಡ್ಕರ್ ಅವರು ನೀಡಿರುವ ಸಂವಿಧಾನ ಶ್ರೇಷ್ಠ ಕಾನೂನಾಗಿದ್ದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯವನ್ನು ನಿರ್ಧರಿಸಲಿದೆ. ಅದರ ಜೊತೆಗೆ ಪ್ರತಿಯೊಂದು ಕಾನೂನು ದೇಶದಲ್ಲಿ ಜಾರಿಗೆ ತರುವ, ತಂದಿರುವ ಕಾನೂನು ಯಾವ ರೀತಿ ಇರಬೇಕು ಎಂಬುದನ್ನು ಕೂಡ ತಿಳಿಸಲಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ಸಂವಿಧಾನ ರಚನೆಯಾಗಿದ್ದು, ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು ಎಂದರು.

ಸಂವಿಧಾನವನ್ನು ಯಾಕೆ ತಿಳಿದುಕೊಳ್ಳಬೇಕು, ಅದರ ಮಹತ್ವವೇನು ಎಂಬುದನ್ನು ವಿದ್ಯಾರ್ಥಿಗಳು ಮೊದಲು ತಿಳಿದು ಕೊಳ್ಳಬೇಕು. ದೇಶದಲ್ಲಿ ಮೊದಲು ಮಹಿಳೆಯರಿಗೆ ಯಾವ ರೀತಿಯ ಹಕ್ಕುಗಳನ್ನು ಕೊಡಲಾಗಿತ್ತು. ಮೊದಲು ಸತಿಸಹಗಮನ ಪದ್ಧತಿ ಇತ್ತು. ಯಾವ ವಯಸ್ಸಿನ ಮಹಿಳೆಯೇ ಆಗಿರಲಿ, ಸತಿಸಹಗಮನ ಮಾಡಬೇಕಿತ್ತು. ಬಾಲ್ಯವಿವಾಹವಿತ್ತು. ಆಸ್ತಿಯಲ್ಲಿ ಹಕ್ಕು ಇರಲಿಲ್ಲ. ಬಹಳಷ್ಟು ಅಡಚಣೆ, ತೊಂದರೆಗಳಿತ್ತು. ಈ ರೀತಿ ಹಕ್ಕುಗಳಿಂದ ಮಹಿಳೆಯರನ್ನು ಯಾಕೆ ವಂಚಿತರನ್ನಾಗಿಸಿದ್ದಾರೆಂದು ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಕೊಡಿಸಲು ಡಾ.ಬಿ.ಆರ್.ಅಂಬೇಡ್ಕರ್ ಶ್ರಮಿಸಿದರು ಎಂದು ವಿವರಿಸಿದರು.

ಈ ಸಂದರ್ಭ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಪಾಂಡುರಂಗ, ಜೆಎಸ್ ಎಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಷಣ್ಮುಖ, ಪ್ಯಾನಲ್ ವಕೀಲರಾದ ಎನ್.ಸುಂದರ ರಾಜ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News