ಅಪಪ್ರಚಾರ ಮಾಡುವವರಿಗೆ ಕೈಪಿಡಿ ತಲುಪಿಸುತ್ತೇವೆ: ಡಾ.ಅಶ್ವತ್ಥ ನಾರಾಯಣ
ಬೆಂಗಳೂರು, ಡಿ.21: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ಆತಂಕ ಹುಟ್ಟಿಸಿ ಪ್ರತಿಭಟನೆಗೆ ಕುಮ್ಮಕ್ಕು ನೀಡುತ್ತಿರುವವರಿಗೆ ಕಾಯ್ದೆ ಕುರಿತ ಸಂಪೂರ್ಣ ಮಾಹಿತಿ ಇರುವ ಕೈಪಿಡಿ ತಲುಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ‘ಪೌರತ್ವ ಸಂಶೋಧನೆ ಅಧಿನಿಯಮ-2019’ ಒಂದು ಪರಿಚಯ ಎಂಬ ಕೈ ಬಿಡಿ ಬಿಡುಗಡೆ ಮಾಡಿ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಇರುವ ಗೊಂದಲ ನಿವಾರಿಸಿ, ಈ ಕಾನೂನು ಜಾರಿಯ ಉದ್ದೇಶವನ್ನು ಜನರಿಗೆ ತಿಳಿಸಲು ಕೈಪಿಡಿ ತರಲಾಗಿದೆ. ಕಾಯ್ದೆ ಜಾರಿಯಿಂದ ನಿರ್ದಿಷ್ಟ ಕೋಮಿಗೆ ಸೇರಿದ ಜನರನ್ನು ದೇಶದಿಂದ ಹೊರ ಹಾಕಲಾಗುವುದು, ದೇಶದಲ್ಲಿ ನೆಲೆಸಲು ದಾಖಲೆ ಒದಗಿಸಬೇಕು ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಬಗ್ಗೆ ಜನರ ದಾರಿ ತಪ್ಪಿಸುತ್ತಿರುವ ನಾಯಕರಿಗೆ ಈ ಕೈಪಿಡಿ ತಲುಪಿಸಲು ಇಷ್ಟ ಪಡುತ್ತೇನೆ. ತಿಳಿವಳಿಕೆ ಇಲ್ಲದೆ ಬಾಯಿಗೆ ಬಂದ ಹೇಳಿಕೆ ನೀಡುತ್ತಿರುವವರ ಕೈಗೆ ಕೈಪಿಡಿ ತಲುಪಬೇಕು. ಯಾವುದೇ ವಿಷಯವನ್ನು ವಿರೋಧಿಸಲೇಬೇಕೆಂದು ವಿರೋಧಿಸುವುದು ಸರಿಯಲ್ಲ. ಪ್ರತಿಪಕ್ಷಗಳ ಇಂಥ ನಡೆ ಸರಿ ಅಲ್ಲ ಎಂದು ಅಶ್ವತ್ಥ ನಾರಾಯಣ ತಿಳಿಸಿದರು.
ಬೇರೆ ದೇಶಗಳಲ್ಲಿ ಕಿರುಕುಳ ಸಹಿಸಲಾಗದೇ ವಾಪಸ್ ಬಂದ ನಮ್ಮ ಜನರಿಗೆ ಈ ಕಾಯ್ದೆಯಿಂದ ರಕ್ಷಣೆ ಸಿಗಲಿದೆ. ಇದು ಯಾವುದೇ ಒಂದು ಸಮುದಾಯ ಅಥವಾ ಕೋಮಿನ ವಿರುದ್ಧ ಅಲ್ಲ. ಈ ತಿದ್ದುಪಡಿ ಯಾವಾಗಲೋ ಆಗಬೇಕಿತ್ತು. ಆದರೆ, ಈಗ ಆಗಿದೆ ಎಂದು ಅವರು ಹೇಳಿದರು.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕಲ್ಲು ತೂರುವ ದೃಶ್ಯ ಕಾಶ್ಮೀರದಲ್ಲಿ ಕಂಡು ಬರುತ್ತಿತ್ತು. ಈಗ ನಮ್ಮ ರಾಜ್ಯದಲ್ಲೆ ಅಂಥ ಪರಿಸ್ಥಿತಿ ಬಂದಿದೆ. ಈ ಬಗ್ಗೆ ಯಾವ ಕ್ರಮ ಕೈಗೊಳ್ಳುವಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನನ್ನು ಕೈಗೆ ತೆಗೆದುಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಸಾರ್ವಜನಿಕ ಆಸ್ತಿ ಪಾಸ್ತಿ, ಜೀವ ಹಾನಿ ಆದರೆ, ಸಹಿಸಲಾಗದು. ಯಾವುದೇ ಕಾರಣಕ್ಕೂ ಅಂಥವರ ಬಗ್ಗೆ ಮೃದು ಧೋರಣೆ ತಾಳುವುದಿಲ್ಲ. ಶಾಂತಿ ಸುವ್ಯವಸ್ಥೆ ವಿಷಯದಲ್ಲಿ ರಾಜಿ ಪ್ರಶ್ನೆ ಇಲ್ಲ. ಕಿಡಿಗೇಡಿಗಳ ದುಷ್ಕೃತ್ಯ ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಕಾನೂನಿನ ಬಿಸಿ ಮುಟ್ಟಿಸಲಾಗುವುದು ಎಂದು ಅವರು ಹೇಳಿದರು.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬಿಜೆಪಿ ಅಧಿಕಾರದಲ್ಲಿರುವ ಕಡೆಗಳಲ್ಲೇ ಪ್ರತಿಭಟನೆ ಕಾವು ಹೆಚ್ಚಿರುವುದೇಕೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರಶ್ನೆಯಲ್ಲೆ ಇದಕ್ಕೆ ಉತ್ತರ ಇದೆ. ಈ ಬಗ್ಗೆ ನೇರವಾಗಿ ಯಾರ ವಿರುದ್ಧವೂ ಆಪಾದನೆ ಮಾಡುವುದಿಲ್ಲ. ಗಲಭೆ ಹಿಂದೆ ಕೆಲವರ ಕೈವಾಡ ಇದೆ. ಅಂಥವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಂಗಳೂರು ಭೇಟಿಗೆ ಅವಕಾಶ ನಿರಾಕರಿಸಿರುವ ಕುರಿತು ಕೇಳಿ ಬರುತ್ತಿರುವ ಆರೋಪಕ್ಕೆ ಸ್ಪಷ್ಟಣೆ ನೀಡಿದ ಅಶ್ವತ್ಥ ನಾರಾಯಣ, ಇಂಥ ಪರಿಸ್ಥಿತಿಯಲ್ಲಿ ಸರಕಾರದ ಜವಾಬ್ದಾರಿ ಹೆಚ್ಚಿರುತ್ತದೆ. ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆ ಸರಕಾರ ನಡೆಸುವವರಿಗೆ ಇರುತ್ತದೆ ಎಂದರು.
ಅಹಿತಕರ ಘಟನೆಗಳು ನಡೆದಾಗ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ರಾಜ್ಯದ ಜನತೆಗೆ ಉತ್ತರಿಸಬೇಕಾಗುತ್ತದೆ. ಹಾಗಾಗಿ ಅವರು ಅಲ್ಲಿಗೆ ಹೋಗಲೇಬೇಕು. ಪರಿಸ್ಥಿತಿ ತಿಳಿಯಾದ ಮೇಲೆ ಯಾವ ನಾಯಕರು ಬೇಕಾದರೂ ಅಲ್ಲಿಗೆ ಹೋಗಿ, ಪರಿಸ್ಥಿತಿ ಅವಲೋಕಿಸಬಹುದು ಎಂದು ಅಶ್ವತ್ಥ ನಾರಾಯಣ ಹೇಳಿದರು.